ವಿಧಾನ ಪರಿಷತ್ ಗಲಾಟೆಗೆ ಮಾಧುಸ್ವಾಮಿ, ಅಶ್ವತ್ಥನಾರಾಯಣ ಕಾರಣ

0

ಬೆಂಗಳೂರು:, ಜ. 23- ವಿಧಾನ ಪರಿಷತ್ತಿನಲ್ಲಿ ಡಿ.15 ರಂದು ನಡೆದ ಗಲಾಟೆಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮತ್ತು ಸಚಿವ ಜೆ.ಸಿ ಮಾಧುಸ್ವಾಮಿ ಅವರೇ ಕಾರಣರು’ ಎಂದು ಗಲಾಟೆಯ ವಿಚಾರಣೆಗೆಂದು ನೇಮಿಸಿದ್ದ ಸದನ ಸಮಿತಿ ತನ್ನ ಮಧ್ಯಂತರ ವರದಿಯಲ್ಲಿ ತಿಳಿಸಿದೆ.

ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರು ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಅಧ್ಯಕ್ಷತೆಯಲ್ಲಿ ಸದನ ಸಮಿತಿ ಯನ್ನು ರಚಿಸಿದ್ದರು. ಸಮಿತಿ ಶುಕ್ರವಾರ ಮಧ್ಯಂತರ ವರದಿಯನ್ನು ಸಲ್ಲಿಸಿದ್ದು, ಪೂರ್ಣ ವರದಿ ಸಲ್ಲಿಸಲು ಹೆಚ್ಚಿನ ಕಾಲಾವಕಾಶವನ್ನು ಕೇಳಿದೆ.

ಅಶ್ವತ್ಥನಾರಾಯಣ, ಮಾಧುಸ್ವಾಮಿ ಮತ್ತು ಗಲಾಟೆ ಮಾಡಿದ ಇತರರ ಸದಸ್ಯರ ವಿರುದ್ಧವೂ ಕ್ರಮಕ್ಕೆ ಸಮಿತಿ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಸಭಾಪತಿಗೆ ನೋಟಿಸ್‌: ಈ ಮಧ್ಯೆ ಬಿಜೆಪಿ ಸದಸ್ಯರು ಸಭಾಪತಿ ವಿರುದ್ಧ ಮತ್ತೊಮ್ಮೆ ಅವಿಶ್ವಾಸದ ನೋಟಿಸ್‌ ಕಳಿಸಿದ್ದಾರೆ. ‘ಬಿಜೆಪಿಯವರು ಅವಿಶ್ವಾಸ ನೋಟಿಸ್‌ ಕಳಿಸಿರುವ ವಿಚಾರ ಗೊತ್ತಿಲ್ಲ. ಅವರು ಯಾರಿಗೆ ಸಲ್ಲಿಸಿದ್ದಾರೆ ಎಂಬುದನ್ನು ಅವರಿಗೇ ಕೇಳಿ ನೋಡಿ. ಆ ನೋಟಿಸ್‌ ನನಗೆ ತಲುಪಿದರೆ ಏನಾದರೂ ಹೇಳಬಹುದು’ ಎಂದು ಪ್ರತಾಪಚಂದ್ರ ಶೆಟ್ಟಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇದೇ 28 ರಿಂದ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ಬಿಜೆಪಿ ನೋಟಿಸ್‌ ನೀಡಿದೆ.

84 ಪುಟಗಳ ವರದಿ:

ಸದನ ಸಮಿತಿ 84 ಪುಟಗಳ ಮಧ್ಯಂತರ ವರದಿ ಸಲ್ಲಿಸಿದೆ. ವಿಚಾರಣೆಗೆ ಇನ್ನೂ ಹೆಚ್ಚಿನ ಕಾಲಾವ ಕಾಶಕ್ಕೆ ಮನವಿ ಮಾಡಿದೆ. ಈ ಸಮಿತಿಗೆ ಬಿಜೆಪಿಯ ಎಚ್‌.ವಿಶ್ವನಾಥ್‌ ಮತ್ತು ಎಸ್‌.ವಿ.ಸಂಕನೂರು ಅವರು ರಾಜೀನಾಮೆ ನೀಡಿದ್ದರಿಂದ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್‌ ಮತ್ತು ಆರ್‌.ಬಿ.ತಿಮ್ಮಾಪೂರ ಅವರು ಮಾತ್ರ ಉಳಿದಿದ್ದರು. ಇಬ್ಬರು ಸದಸ್ಯರ ಒಳಗೊಂಡ ಸಮಿತಿ ಒಟ್ಟು 5 ಸಭೆಗಳನ್ನು ನಡೆಸಿದೆ.

ಘಟನೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್‌ ಕಾರ್ಯದರ್ಶಿ, ಮಾರ್ಷಲ್‌, ಕಾಂಗ್ರೆಸ್ ಸದಸ್ಯ ಪಿ.ಆರ್‌.ರಮೇಶ್ ಅವರಿಂದ ಹೇಳಿಕೆ ಪಡೆಯಲಾಗಿದೆ. ಉಪಸಭಾಪತಿ ಎಸ್‌.ಎಲ್.ಧರ್ಮೇಗೌಡ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಡೆತ್‌ ನೋಟ್‌ ಕೋರಿ ಗೃಹ ಇಲಾಖೆಗೆ ಪತ್ರ ಬರೆಯಲಾಗಿದೆ.

‘ಕಲಾಪದ ವೇಳೆ ಉಪಸ್ಥಿತರಿದ್ದ ಪತ್ರಕರ್ತರು, ಘಟನೆ ಕುರಿತು ಪತ್ರಕರ್ತರು, ಗಣ್ಯರು ಸಭಾಪತಿಗೆ ಬರೆದ ಪತ್ರಗಳನ್ನು ಪರಿಗಣಿಸಿ ಅಭಿಪ್ರಾಯ ಪಡೆಯಲು ಉದ್ದೇಶಿಸಲಾಗಿದೆ. ಮಧ್ಯಂತರ ವರದಿಯಲ್ಲಿ ಏನಿದೆ ಎಂಬುದು ಸದನದಲ್ಲೇ ಬಹಿರಂಗವಾಗಲಿದೆ. ವರದಿ ಈಗ ಸದನದ ಸ್ವತ್ತು’ ಎಂದು ಮರಿತಿಬ್ಬೇಗೌಡ ಹೇಳಿದರು.

‘ಮರಿತಿಬ್ಬೇಗೌಡ, ಬಿ.ಕೆ.ಹರಿಪ್ರಸಾದ್‌ ಅವರು ಗಲಾಟೆಯಲ್ಲಿ ಪಾಲ್ಗೊಂಡಿದ್ದರಿಂದ ಅವರನ್ನು ಸಮಿತಿಗೆ ಸೇರಿಸಿದ್ದು ಸರಿಯಲ್ಲ. ಸಮಿತಿಯಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ’ ಎಂದು ಬಿಜೆಪಿ ಸದಸ್ಯರು ಆರೋಪಿಸಿದ್ದರು.

‘ರಾಜೀನಾಮೆ ಬಗ್ಗೆ ಕಾದು ನೋಡಿ’

‘ನನ್ನ ರಾಜೀನಾಮೆಯ ಬಗ್ಗೆ ಈಗಲೇ ಏನು ಹೇಳಲಾಗದು, ಕಾದು ನೋಡಿ. ಆದರೆ, ಉಪಸಭಾಪತಿ ಸ್ಥಾನವೇ ಖಾಲಿ ಇರುವಾಗ ಯಾರಿಗೆ ರಾಜೀನಾಮೆ ಕೊಡಬೇಕು’ ಎಂದು ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಪ್ರಶ್ನಿಸಿದರು.

ಸದನ ಸಮಿತಿಯಿಂದ ಮಧ್ಯಂತರ ವರದಿ ಸ್ವೀಕರಿಸಿದ ಬಳಿಕ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಡಿ.15 ರಂದು ನಡೆದ ಗಲಾಟೆಗೆ ಸಂಬಂಧಿಸಿದಂತೆ ರಚಿಸಿರುವ ಸದನ ಸಮಿತಿ ಶಾಸನ ಬದ್ಧವಾಗಿದ್ದು, ಸಮಿತಿಯ ವರದಿಯೂ ಶಾಸನ ಬದ್ಧ ಎಂದು ಅವರು ಪ್ರತಾಪಚಂದ್ರ ಶೆಟ್ಟಿ ಸಮರ್ಥಿಸಿಕೊಂಡರು.