ಮೃತರಾದ ಮಹಿಳಾ ಪಿಎಸ್‍ಐ ಲಕ್ಷ್ಮೀ ಪವಾರ್, ಮಗ ಸೊಸೆಗೆ ಪೊಲೀಸ್ ಅಧಿಕಾರಿಗಳಿಂದ ಗೌರವ ನಮನ

0

ಸವದತ್ತಿ ತಾಲೂಕಿನ ಚಚಡಿ ಕ್ರಾಸ ಹತ್ತಿರ ಭಾನುವಾರ ಮಧ್ಯಾಹ್ನ ಬಸ್ ಹಾಗೂ ಕಾರ್ ನಡುವೆ ನಡೆದ ಡಿಕ್ಕಿಯಲ್ಲಿ ಮೃತಪಟ್ಟ ಮಾರ್ಕೇಟ್ ಠಾಣೆ ಮಹಿಳಾ ಪಿಎಸ್‍ಐ ಮತ್ತು ಅವರ ಮಗ, ಸೊಸೆಯ ಅಂತ್ಯಸಂಸ್ಕಾರ ಬೆಳಗಾವಿ ಸದಾಶಿವನಗರ ಸ್ಮಶಾನಭೂಮಿಯಲ್ಲಿ ಸರ್ಕಾರಿ ಗೌರವಗಳೊಂದಿವೆ ನಡೆಯಿತು. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಆಪ್ತರು, ಕುಟುಂಬ ವರ್ಗ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಸವದತ್ತಿ ತಾಲೂಕಿನ ಚಚಡಿ ಕ್ರಾಸ ಹತ್ತಿರ ಭಾನುವಾರ ಮಧ್ಯಾಹ್ನ ಗೋವಾದಿಂದ ಇಳಕಲ್‍ಗೆ ಹೊರಟಿದ್ದ ಕೆಎಸ್‍ಆರ್‍ಟಿಸಿ ಬಸ್ ಹಾಗೂ ಬೆಳಗಾವಿ ಕಡೆಗೆ ಬರುತ್ತಿದ್ದ ಕಾರಿನ ನಡುವೆ ಡಿಕ್ಕಿಯಾಗಿ ನಾಲ್ವರು ಮೃತಪಟ್ಟಿದ್ದರು.
ಬೆಳಗಾವಿ ನಗರ ಠಾಣೆ ಪಿಎಸ್‍ಐ ಹಾಗೂ ಸಹ್ಯಾದ್ರಿ ನಗರದ ನಿವಾಸಿ 59 ವರ್ಷದ ಲಕ್ಷ್ಮೀ ನಲವಡೆ ಮತ್ತು ಅವರ ಮಗ 28 ವರ್ಷದ ಪ್ರಸಾದ ವಾಸುದೇವ ಪವಾರ, ಸೊಸೆ 24 ವರ್ಷದ ಅಂಕಿತಾ ಪ್ರಸಾದ ಪವಾರ, 30 ವರ್ಷದ ದೀಪಾ ಅನಿಲ ಶಾಪೂರಕರ ಘಟನೆಯಲ್ಲಿ ಮೃತಪಟ್ಟಿದ್ದರು. ಮೃತ ಲಕ್ಷ್ಮೀ ಪವಾರ 1986 ರಲ್ಲಿ ಮಹಿಳಾ ಪಿಸಿ ಅಂತಾ ನೇಮಕವಾಗಿದ್ದರು. 2021 ಫೆಬ್ರವರಿ 28 ರಂದು ನಿವೃತ್ತರಾಗಲಿದ್ದರು.
ಇಂದು ಮಹಿಳಾ ಪಿಎಸ್‍ಐ, ಅವರ ಮಗ ಮತ್ತು ಸೊಸೆಯ ಅಂತಿಮ ಯಾತ್ರೆ ಸಹ್ಯಾದ್ರಿ ನಗರದ ಅವರ ಮನೆಯಿಂದ ಆರಂಭವಾಯಿತು. ಪೊಲೀಸ್ ಆಯುಕ್ತ ಡಾ.ತ್ಯಾಗರಾಜನ್, ಡಿಸಿಪಿ ಡಾ.ವಿಕ್ರಮ ಆಮ್ಟೆ, ಡಿಸಿಪಿ ಸಿ.ಆರ್.ನೀಲಗಾರ ಪುಷ್ಪ ಚಕ್ರ ಇರಿಸಿ ಅಂತಿಮ ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಕುಟುಂಬಸ್ಥರ ಶೋಕ ಕಟ್ಟೆಯೊಡೆಯಿತು. ಮೂರು ಸುತ್ತು ಗುಂಡು ಹಾರಿಸಿ, ಪೊಲೀಸ್ ಬ್ಯಾಂಡ್ ನುಡಿಸಿ ಅಗಲಿದ ಜೀವಗಳಿಗೆ ಅಂತಿಮ ಗೌರವ ಸಲ್ಲಿಸಲಾಯಿತು.
ಈ ವೇಳೆ ಮೃತ ಪಿಎಸ್‍ಐ ಸಹೋದರಿ ಕ್ಯಾಂಪ್ ಪೊಲೀಸ್ ಠಾಣೆಯ ಹವಾಲ್ದಾರ್ ಗಂಗಾ ಕಾಟೆ ಮಾತನಾಡಿ, ಯಲ್ಲಮ್ಮನಗುಡ್ಡಕ್ಕೆ ಹೋಗಿ ಮರಳಿ ಬರುವಾಗ ಅಪಘಾತಕ್ಕೆ ಬಲಿಯಾಗಿದ್ದಾರೆ. 33 ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪಿಸಿಯಿಂದ ಹಿಡಿದು ಪಿಎಸ್‍ಐವರೆಗೆ ಒಂದೂ ಕಪ್ಪು ಚುಕ್ಕೆ ಇರದಂತೆ ಪಾರದರ್ಶಕವಾಗಿ ಕಾರ್ಯ ಮಾಡಿದ್ದಾರೆ ಎಂದು ತಿಳಿಸಿದರು.
ಸಿಎಆರ್ ಎಸ್‍ಪಿ ಸಿದ್ದನಗೌಡ ಪಾಟೀಲ, ಎಸಿಪಿ ಚಂದ್ರಪ್ಪ, ಸಿಪಿಐ ಸುನೀತಾ ಪಾಟೀಲ, ಸಿಪಿಐ ಜಾವೇದ್ ಮುಶಾಪುರಿ, ಪೊಲೀಸ್ ಸಿಬ್ಬಂದಿ, ಆಪ್ತೇಷ್ಟರು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.