11 ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಮತದಾನ ಮೂಲಕ ಬಲಿಷ್ಠ ರಾಷ್ಟ್ರ ಕಟ್ಟೋಣ: ನ್ಯಾಯಾಧೀಶ ಸಿ.ಎಂ.ಜೋಶಿ

0

ಬೆಳಗಾವಿ, ಜ. 25 : ಕೇವಲ ನಾವು ಮಾತ್ರ ಮತದಾನ ಮಾಡದೇ ನಮ್ಮ ಸುತ್ತಮುತ್ತಲಿನ ಜನರಲ್ಲಿ ಮತದಾನ ಕುರಿತಾದ ಜಾಗೃತಿ ಮೂಡಿಸಿ ಸಮರ್ಥ ನಾಯಕನನ್ನು ಆರಿಸುವ ಮೂಲಕ ಬಲಿಷ್ಠ ದೇಶ ಕಟ್ಟುವ ಕೆಲಸ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ.ಎಂ.ಜೋಶಿ ಅವರು ಹೇಳಿದರು.
ಚುನಾವಣಾ ಆಯೋಗ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ವತಿಯಿಂದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೋಮವಾರ (ಜ.25) ಹಮ್ಮಿಕೊಳ್ಳಲಾಗಿದ್ದ 11ನೇ ರಾಷ್ಟ್ರೀಯ ಮತದಾರರ ದಿನಾಚರಣೆ 2021 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ದೇಶವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ಇಲ್ಲಿ ನಾಯಕನ್ನು ಆಯ್ಕೆ ಮಾಡುವ ಹಕ್ಕನ್ನು ಜನರಿಗೆ ಸಂವಿಧಾನವು ನೀಡಿದೆ. ಆ ಹಕ್ಕನ್ನು ಎಷ್ಟು ಜನರು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಮೌಲ್ಯಮಾಪನ ಮಾಡಿಕೊಳ್ಳಲು 11ವರ್ಷಗಳ ಹಿಂದೆ ಕಂಡುಕೊಂಡ ದಾರಿಯೇ ಮತದಾರರ ದಿನಾಚರಣೆ.
ಇತ್ತೀಚಿನ ದಿನಗಳಲ್ಲಿ ಹಳ್ಳಿ ಪ್ರದೇಶದಲ್ಲಿ 70-80 ಪ್ರತಿಶತದಷ್ಟು ಮತದಾನವಾಗುತ್ತಿದ್ದು, ನಗರ ಪ್ರದೇಶಗಳಲ್ಲಿ ಚುನಾವಣೆಯಲ್ಲಿ ಮತದಾನ ಪ್ರಮಾಣ ಅತಿ ಕಡಿಮೆಯಾಗುತ್ತಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಹೇಳಿದರು.
ಮತದಾನದ ಕುರಿತು ಹಲವಾರು ಜಾಗೃತಿಯ ಕೆಲಸವನ್ನು ಸರಕಾರ ಮಾಡುತ್ತಿದೆ ಆದರೂ ಕೂಡ ವಿದ್ಯಾರ್ಥಿಗಳು ಇದರಲ್ಲಿ ಆಸಕ್ತಿ ವಹಿಸಿ ಮತದಾರ ಪಟ್ಟಿಯಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದವರ ಹೆಸರುಗಳನ್ನು ನೋಂದಾಯಿಸಿ ಮತದಾನದ ಕುರಿತಾಗಿ ಕುಟುಂಬ ಮತ್ತು ಅಕ್ಕ ಪಕ್ಕದ ಜನರಲ್ಲಿ ಜಾಗೃತಿಯನ್ನು ಮೂಡಿಸಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಬೇಕು.
ಸುಭದ್ರ ಭಾರತಕ್ಕಾಗಿ 100ರಷ್ಟು ಮತದಾನ ಅತಿ ಅವಶ್ಯಕವಾಗಿದೆ. ಒಳ್ಳೆಯ ಗ್ರಾಮ ಒಳ್ಳೆಯ ನಗರ ರಾಜ್ಯ ಹಾಗೂ ಒಂದು ಅಭಿವೃದ್ದಿ ಹೊಂದಿದ ದೇಶವನ್ನು ನಿರ್ಮಿಸುವ ಕಾರ್ಯ ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದು ಎಂದು ನ್ಯಾಯಾಧೀಶರಾದ ಸಿ.ಎಂ.ಜೋಶಿ ಅವರು ಹೇಳಿದರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವರು, ಭಾರತವು ಹಲವಾರು ಭಾಷೆ, ಧರ್ಮ, ಜನಾಂಗ ಹೊಂದಿದ ವೈವಿಧ್ಯಮಯ ರಾಷ್ಟ್ರವಾಗಿದ್ದರೂ ಎಲ್ಲರಿಗೂ ಸಮಾನ ಮತದಾನದ ಹಕ್ಕನ್ನು ನೀಡಿ ಒಳ್ಳೆಯ ಸಮರ್ಥ ನಾಯಕನನ್ನು ಆಯ್ದುಕೊಳ್ಳುವ ಆಯ್ಕೆಯನ್ನು ನೀಡಲಾಗಿದೆ ಎಂದು ಹೇಳಿದರು.
18 ವರ್ಷದ ಮೇಲ್ಪಟ್ಟ ಎಲ್ಲ ವಿದ್ಯಾರ್ಥಿಗಳು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿ ಕೊಳ್ಳುವಂತೆ ಕರೆ ನೀಡಿದರು.
ಎಲ್ಲರೂ ಕಡ್ಡಾಯವಾಗಿ ಮತದಾನದ ಹಕ್ಕನ್ನು ಚಲಾಯಿಸಿ ಹಾಗೂ ಎಲ್ಲಾ ಜನರಲ್ಲಿ ಮತದಾನದ ಕುರಿತಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಯಾರು ಮತದಾನ ಮಾಡುವದಿಲ್ಲ ಅವರಿಗೆ ಹಕ್ಕಿನ ಪ್ರಾಮುಖ್ಯತೆಯನ್ನು ಅವರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಚುನಾವಣಾ ವೇಳೆಯಲ್ಲಿ ಮತದಾನಕ್ಕೆ ಗ್ರಾಮಸ್ಥರು ಬಹಿಷ್ಕಾರ ಹಾಕದೆ ಮೊದಲು ಮತದಾನ ಮಾಡಿ ನಂತರ ನಿಮ್ಮ ಗ್ರಾಮದ ಅಭಿವೃದ್ಧಿ ಕೆಲಸ ವಾಗದಿದ್ದಲ್ಲಿ ಮಾತ್ರ ಪ್ರಶ್ನಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಜಿಲ್ಲಾಧಿಕಾರಿಗಳು ಪ್ರತಿಜ್ಞಾವಿಧಿ ಬೋಧನೆ ಮಾಡಿದರು ಹಾಗೂ ಹೊಸದಾಗಿ ಸೇರ್ಪಡೆಯಾದ ಚುನಾವಣಾ ಗುರುತಿನ ಚೀಟಿಯನ್ನು ವಿತರಣೆ ಮಾಡಿದರು.
ಮತದಾರರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಬೆಳಗಾವಿ ನಗರ ಪೆÇಲೀಸ್ ಆಯುಕ್ತರಾದ ಡಾ. ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದರ್ಶನ್ ಹೆಚ್. ವಿ., ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತರಾದ ಜಗದೀಶ್ ಕೆ.ಹೆಚ್, ಸ್ವೀಪ್ ಐಕಾನ್ ಗಳಾದ ರಾಘವೇಂದ್ರ ಅನ್ವೇಕರ್ ಹಾಗೂ ರೋಹನ್ ಕೊಂಕಣಿ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಸುನಿತಾ ದೇಸಾಯಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

ಜಾಥಾ ಕಾರ್ಯಕ್ರಮ:
11ನೇ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಡಿಸಿ ಕಚೇರಿಯಿಂದ ಚನ್ನಮ್ಮ ವೃತ್ತದ ಮಾರ್ಗವಾಗಿ ಜಿಲ್ಲಾ ಪಂಚಾಯತ್ ಕಾರ್ಯಾಲಯದವರೆಗೆ ಜಾಥಾ ನಡೆಸಲಾಯಿತು, ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು ಹಸಿರು ನಿಶಾನೆ ತೋರುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು,
ಈ ಸಂದರ್ಭದಲ್ಲಿ ಬೆಳಗಾವಿ ನಗರ ಪೆÇಲೀಸ್ ಆಯುಕ್ತರಾದ ಡಾ. ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದರ್ಶನ್ ಹೆಚ್. ವಿ., ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತರಾದ ಜಗದೀಶ್ ಕೆ.ಹೆಚ್, ಮಹಾನಗರ ಪಾಲಿಕೆ ಲೆಕಕಾಧಿಕಾರಿಗಳಾದ ಪರುಶುರಾಮ ದುಡುಗುಂಟಿ, ಸ್ವೀಪ್ ಐಕಾನ್ ಗಳಾದ ರಾಘವೇಂದ್ರ ಅನ್ವೇಕರ್ ಹಾಗೂ ರೋಹನ್ ಕೊಂಕಣಿ ಹಾಗು ಜಿಲ್ಲೆಯ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಎನ್‍ಸಿಸಿ ಘಟಕದ ವಿದ್ಯಾರ್ಥಿಗಳು ಹಾಗೂ ಎನ್‍ಎಸ್‍ಎಸ್ ಘಟಕದ ವಿದ್ಯಾರ್ಥಿಗಳು ಮತ್ತಿತರರು ಜಾಥಾದಲ್ಲಿ ಭಾಗವಹಿಸಿದ್ದರು.