ರೈತರ ಮೇಲೆ ಅಶ್ರುವಾಯು ಪ್ರಯೋಗ

0

ಹೊಸದಿಲ್ಲಿ, ಜ. 26- ಹಿಂದಿ ಚಲನಚಿತ್ರದ ದೇಶಭಕ್ತಿ ಗೀತೆಯನ್ನು ಡಿಜೆ ಸೆಟ್ ನಲ್ಲಿ ಹಾಕಿ ಅತ್ಯುತ್ಸಾಹದಿಂದ ಕಿಸಾನ್ ಏಕತಾ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಾ ದೆಹಲಿಯ ಗಡಿಭಾಗ ಗಾಜಿಪುರದಿಂದ ರೈತರು ಟ್ರ್ಯಾಕ್ಟರ್ ಮೆರವಣಿಗೆ ಆರಂಭಿಸಿದ್ದಾರೆ.

ನಮಗೆ ಪೊಲೀಸರು ಅನುಮತಿ ನೀಡಿದ್ದಾರೋ, ಇಲ್ಲವೋ ನಾವು ಟ್ರ್ಯಾಕ್ಟರ್ ಮೆರವಣಿಗೆ ಹೋಗುತ್ತೇವೆ ಎಂದು ಭಾರತದ ತ್ರಿವರ್ಣ ಧ್ವಜದ ಬಣ್ಣದ ಬಲೂನ್ ಗಳನ್ನು ಕಟ್ಟಿದ ಟ್ರ್ಯಾಕ್ಟರ್ ಗಳನ್ನು ರಸ್ತೆಗಿಳಿಸಿಯೇ ಬಿಟ್ಟರು ರೈತರು. ಒಬ್ಬರ ಹಿಂದೆ ಒಬ್ಬರು ಸಾಗುತ್ತಿದ್ದಾರೆ.

ಇಂದು ಬೆಳಗ್ಗೆ ರಾಜಧಾನಿ ದೆಹಲಿಯಲ್ಲಿ ಕವಿದಿದ್ದ ದಟ್ಟ ಮಂಜು ಮರೆಯಾಗುತ್ತಿದ್ದಂತೆ ರೈತರು ಉಪಾಹಾರ ಮುಗಿಸಿ ಕಿಸಾನ್ ಟ್ರ್ಯಾಕ್ಟರ್ ಪರೇಡ್ ಗೆ ಸಿದ್ದವಾದರು. ಇಂದು ಬೆಳಗ್ಗೆ 11 ಗಂಟೆಯ ಮೇಲೆ ರೈತರ ರ‍್ಯಾಲಿ ಗೆ ಅನುಮತಿ ಇದ್ದರೂ ಕೂಡ ಅದಕ್ಕೂ ಮೊದಲೇ ಹೊರಟಿದ್ದ ರಿಂದ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ನುಗ್ಗಿ ರೈತರು ಬಂದಿದ್ದರಿಂದ ಘರ್ಷಣೆಯ ವಾತಾವರಣ ಉಂಟಾಯಿತು.

ಸಾವಿರಾರು ಟ್ರ್ಯಾಕ್ಟರ್ ಗಳು ರ‍್ಯಾಲಿಯಲ್ಲಿ ಮುಂದೆ ಸಾಗುತ್ತಿವೆ. ಗಾಜಿಪುರ ಗಡಿಯಿಂದ ವಿವಿಧ ಗುಂಪುಗಳಲ್ಲಿ ರೈತರು ಜೈ ಜವಾನ್, ಜೈ ಕಿಸಾನ್ ಘೋಷಣೆ ಕೂಗುತ್ತಾ ಸಾಗುತ್ತಿದ್ದಾರೆ.

ರೈತರು ಅನುಮತಿ ಕೇಳಿದ್ದು ಬೆಳಗ್ಗೆ 11 ಗಂಟೆಯ ಮೊದಲು, ಆದರೆ ಕೆಲವರು ಅದಕ್ಕೂ ಮೊದಲೇ ಬ್ಯಾರಿಕೇಡ್ ಮುರಿದು ನುಗ್ಗಿದರು ಎಂದು ಉತ್ತರ ಪ್ರದೇಶದ ಪೊಲೀಸರೊಬ್ಬರು ಆರೋಪಿಸಿದರು. ರೈತರು ಮುಖ್ಯ ನಗರದೊಳಗೆ ನುಗ್ಗಬಹುದು ಎಂಬ ನಿರೀಕ್ಷೆಯಿಂದ ದೆಹಲಿ ಪೊಲೀ ಸರು ಪ್ರವೇಶವನ್ನು ತಡೆಯಲು ಜೆಸಿಬಿ ಯಂತ್ರವನ್ನು ನಿಯೋಜಿಸಿದ್ದಾರೆ.

ಕೆಲವು ರೈತರು ವಿವಿಧ ಸಂಘಟನೆಗಳ ಧ್ವಜಗಳನ್ನು ಹಿಡಿದುಕೊಂಡು ಘೋಷಣೆ ಕೂಗುತ್ತಾ ನಡೆದುಕೊಂಡು ಹೋಗು ತ್ತಿದ್ದಾರೆ, ಕೆಲವರು ಕುದುರೆ ಮೇಲೆ, ಇನ್ನು ಕೆಲವರು ಬೈಕ್ ನಲ್ಲಿ ಸಾಗುತ್ತಿದ್ದಾರೆ. ಸ್ಥಳೀಯರು ದಾರಿಯಲ್ಲಿ ಹೋಗುವವರು ಆಹಾರ, ನೀರು ಒದಗಿಸುತ್ತಿದ್ದಾರೆ.

ಅಶ್ರುವಾಯು, ಲಾಠಿಚಾರ್ಜ್:

ಇನ್ನು ಸಿಂಘು ಮತ್ತು ಟಿಕ್ರಿ ಗಡಿಭಾಗದಲ್ಲಿ ಪೊಲೀಸ್ ಬ್ಯಾರಿಕೇಡ್ ಮುರಿದು ಹೋಗಲು ಪ್ರಯತ್ನಿಸಿದವರ ಮೇಲೆ ಪೊಲೀಸರು ಅಶ್ರವಾಯು, ಲಾಠಿಚಾರ್ಜ್ ಪ್ರಯೋಗಿಸಿದ ಪ್ರಸಂಗ ನಡೆದಿದೆ.

ರಾಜಪಥ್ ನಲ್ಲಿ ಗಣರಾಜ್ಯೋತ್ಸವ ಮುಗಿದ ಬಳಿಕವಷ್ಟೆ ತಮಗೆ ಟ್ರ್ಯಾಕ್ಟರ್ ನಲ್ಲಿ ಹೋಗಲು ಅನುಮತಿ ನೀಡಲಾಗಿದೆ ಎಂದು ಪೊಲೀಸರು ರೈತರ ಮನವೊಲಿಸಲು ಪ್ರಯತ್ನಿಸಿದರೂ ಕೂಡ ಅವರ ಮಾತು ಕೇಳದೆ ಮುನ್ನುಗ್ಗಿದ್ದರಿಂದ ಪೊಲೀಸರು ಅಶ್ರುವಾಯು, ಲಾಠಿಚಾರ್ಜ್ ನಡೆಸಿದ ಪ್ರಸಂಗ ನಡೆಯಿತು.

ಟ್ರ್ಯಾಕ್ಟರ್ ರ‍್ಯಾಲಿ ಹಿನ್ನೆಲೆಯಲ್ಲಿ ಪೊಲೀಸರ ಭದ್ರತಾ ಕೋಟೆ ಭೇದಿಸಿ ರೈತರು ರಾಜಧಾನಿಗೆ ಲಗ್ಗೆಯಿಟ್ಟ ಪರಿಣಾಮ ಉದ್ವಿಗ್ನ ಸ್ಥಿತಿ ನಿರ್ಮಾಣ ವಾಗಿದೆ. ರಾಜಪಥದಲ್ಲಿ ಗಣರಾಜ್ಯೋತ್ಸವ ಪರೇಡ್ ನಂತರ ರೈತರ ಟ್ರ್ಯಾಕ್ಟರ್ ರ್ಯಾಲಿ ರಾಜಧಾನಿ ಪ್ರವೇಶಿಸಲು ಸಮಯ ನಿಗದಿಯಾಗಿತ್ತು. ಆದರೆ ಪೊಲೀಸರು ಆಯಕಟ್ಟಿನ ಸ್ಥಳಗಳನ್ನು ಅಳವಡಿಸಿದ್ದ ಬ್ಯಾರಿಕೇಡ್ ಗಳನ್ನು ಕಿತ್ತೆಸೆದು ನಿಗದಿಗಿಂತ ಮುನ್ನವೇ ರಾಜಧಾನಿ ಪ್ರವೇಶಿಸಿದರು.

ದೆಹಲಿ-ಹರ್ಯಾಣ ರಾಜ್ಯಗಳನ್ನು ಪ್ರತ್ಯೇಕಿಸುವ ಸಿಂಘು ಗಡಿಯಲ್ಲಿ ಮತ್ತು ರಾಷ್ಟ್ರ ರಾಜಧಾನಿಯ ಪಶ್ಚಿಮದಲ್ಲಿರುವ ಟೆಕ್ರಿ ಗಡಿಯಲ್ಲಿ ಸದ್ಯ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಸದ್ಯ ರೈತರ ಟ್ರ್ಯಾಕ್ಟರ್ ರ‍್ಯಾಲಿ ಗಾಜಿಪುರ್ ಗಡಿಭಾಗದಿಂದ ಸರೈ ಕಾಳೆ ಖಾನ್ ಐಟಿಒ ಬಳಿ ತಲುಪಿದೆ. ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿ ಸುವಂತೆ ಒತ್ತಾಯಿಸಿ ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಗಣರಾಜ್ಯೋತ್ಸವ ದ ದಿನ(ಮಂಗಳವಾರ)ದಂದು ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ತೀರ್ಮಾನಿಸಿದ್ದರು. ಕೆಲವೊಂದು ನಿರ್ಬಂಧಗಳ ಜತೆಗೆ, ರಾಜ್‌ಪತ್‌ನಲ್ಲಿ ಕಾರ್ಯಕ್ರಮಗಳು ಮಗಿದ ಮೇಲೆ, ರ‍್ಯಾಲಿ ನಡೆಸಲು ಪೊಲೀಸರು ಅನುಮತಿ ನೀಡಿದ್ದರು.