ಸಂಗೊಳ್ಳಿ ರಾಯಣ್ಣ 190ನೇ ಹುತಾತ್ಮ ದಿನದ ಕಾರ್ಯಕ್ರಮದಲ್ಲಿ ರಾಮಚಂದ್ರ ಗೌಡ ಹೇಳಿಕೆ
ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠ ಹಾಗೂ ರಾಣಿ ಚನ್ನಮ್ಮ ಅಧ್ಯಯನ ಪೀಠಗಳ ಸಂಯುಕ್ತ ಆಶ್ರಯದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಸಂಗೊಳ್ಳಿ ರಾಯಣ್ಣರವರ 190ನೇ ಹುತಾತ್ಮ ದಿನದ ಹಿನ್ನೆಲೆಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ ರಾಮಚಂದ್ರ ಗೌಡ ಇವರು ಉದ್ಘಾಟಿಸಿ ಮಾತನಾಡುತ್ತಾ ಈ ನಾಡಿನಲ್ಲಿ ಭಾರತ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ ಪೂರ್ವದಲ್ಲಿ ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಟವನ್ನು ಆರಂಭಿಸಿದ್ದರು ಇವರ ಹೋರಾಟದ ಪ್ರೇರಣೆಯಿಂದ ಸ್ವಾತಂತ್ರ್ಯ್ರ ಸಂಗ್ರಾಮ ಇಡೀ ದೇಶಾದ್ಯಂತ ವ್ಯಾಪಿಸಿತು ಎಂದರು. ಇಂದು ಸಂಶೋಧಕರು ಹಾಗೂ ಇತಿಹಾಸಕಾರರು ಇಂತಹ ಅಧ್ಯಯನ ಪೀಠಗಳ ಮೂಲಕ ಆಳವಾದ ಅಧ್ಯಯನ ನಡೆಸಿ ಜನರಿಗೆ ಇತಿಹಾಸದ ವಾಸ್ತವ ಅಂಶಗಳನ್ನು ತಿಳಿಸಬೇಕೆಂದು ಕರೆ ನೀಡಿದರು. ಸಂಗೊಳ್ಳಿ ರಾಯಣ್ಣ ಹಾಗೂ ರಾಣಿ ಚನ್ನಮ್ಮ ಇವರು ಯುದ್ಧದಲ್ಲಿ ಬಳಸಿದ ವಸ್ತುಗಳನ್ನೆಲ್ಲ ಕ್ರೂಡೀಕರಿಸಿ ಮುಂಬರುವ ದಿನಗಳಲ್ಲಿ ಒಂದು ಬೃಹತ ವಸ್ತು ಸಂಗ್ರಹಾಲಯವನ್ನು ನಿರ್ಮಿಸುವ ಸಂಕಲ್ಪಕ್ಕೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಬದ್ಧವಾಗಿದೆ ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಅಮರೇಶ ಯತಗಲ್ ಇವರು “ಜನನಾಯಕ ಸಂಗೊಳ್ಳಿ ರಾಯಣ್ಣ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ನೀಡಿ ಸಂಗೊಳ್ಳಿ ರಾಯಣ್ಣ ಕೇವಲ ಕಿತ್ತೂರು ಸಂಸ್ಥಾನದ ಸಂರಕ್ಷಣೆಗೆ ಹೋರಾಡದೆ ಜನಸಾಮಾನ್ಯರ ಧ್ವನಿಯಾಗಿ ಹೋರಾಡಿದರು. ಬ್ರಿಟಿಷರ ದೃಷ್ಟಿಯಲ್ಲಿ ರಾಯಣ್ಣ ಅಪರಾಧಿಯಾಗಿ ಕಂಡುಬಂದರೆ ಜನಸಾಮಾನ್ಯರು ಜನನಾಯಕನೆಂದು ನಂಬಿ ಸಂಪೂರ್ಣ ಸಹಕಾರ ನೀಡಿದ್ದರು, ಆದ್ದರಿಂದಲೇ ಜನಪದ ಸಾಹಿತ್ಯದ ಮೌಖಿಕ ಪರಂಪರೆಯಲ್ಲಿ ಹಾಡಿ ಹೊಗಳಿದ್ದಾರೆ. ಆತನ ಮೇಲಿನ ಅಪಾರ ಭಕ್ತಿಯಿಂದ ಕೆಲವು ಕಡೆ ಅತಿಶಯೋಕ್ತಿಯ ಮಾತುಗಳು ಕಂಡುಬಂದಿವೆ. ಇವನ್ನೆಲ್ಲ ಇತಿಹಾಸಕಾರರು ಜನರ ಮೌಢ್ಯತೆಯ ವಿಚಾರವೆಂದು ತಿಳಿಯದೆ ರಾಯಣ್ಣನ ಮೇಲಿನ ನಂಬಿಕೆಯೆಂದು ಅರ್ಥೈಸಿಕೊಂಡು ಅವುಗಳ ಕುರಿತು ಆಳವಾದ ಸಂಶೊಧನೆಯ ಮೂಲಕ ಚರಿತ್ರೆಯನ್ನು ಕಟ್ಟಿಕೊಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಸಂಗೊಳ್ಳಿ ರಾಯಣ್ಣ ಪೀಠದ ಅಧ್ಯಕ್ಷರಾದ ಡಾ. ಎಂ. ಜಯಪ್ಪ ಅವರು ಮಾತನಾಡಿ ಅಧ್ಯಯನ ಪೀಠದ ಮುಂಬರುವ ಕಾರ್ಯಯೋಜನೆಗಳನ್ನು ಕುರಿತು ಮಾತನಾಡುತ್ತಾ ಸಂಶೋಧನೆ ಹಾಗೂ ಕ್ಷೇತ್ರಕಾರ್ಯದ ಮೂಲಕ ವಾಸ್ತವ ಚರಿತ್ರೆಯನ್ನು ಸಂಗೊಳ್ಳಿ ರಾಯಣ್ಣನ ಕುರಿತು ಸಮಗ್ರ ಸಂಪುಟಗಳನ್ನು ಪ್ರಕಟಿಸಿ ಜನರ ಮುಂದಿಡುವ ವಿಚಾರವನ್ನು ತಿಳಿಸಿದರು. ಸಂಗೊಳ್ಳಿ ರಾಯಣ್ಣ ದೈವಭಕ್ತನಾಗಿದ್ದು, ಕಕ್ಕೆರಿಯ ಬಿಷ್ಟಮ್ಮ ಹಾಗೂ ಖನಗಾವಿಯ ಕನ್ನಮ್ಮ ದೇವಿಯ ಪರಮ ಭಕ್ತರಾಗಿದ್ದು ಆ ದೈವಭಕ್ತಿಯೇ ಮುಂದೆ ಈ ನಾಡಿನ ಜನರ ಮನದಲ್ಲಿ ದೈವಿಯ ಸ್ವರೂಪ ಪಡೆಯಲು ಕಾರಣವಾಯಿತು ಎಂದರು.
ಸಮಾರಂಭದಲ್ಲಿ ಪ್ರಸಿದ್ಧ ಸಾಹಿತಿಗಳಾದ ಡಾ. ಸರಜೂ ಕಾಟ್ಕರ ಹಾಗೂ ಯ. ರು ಪಾಟೀಲ, ಕನಕ ನೌಕರರ ಸಂಘದ ಅಧ್ಯಕ್ಷ ಅಶೋಕ ಸದಲಗಿ, ಎಸ್. ಎಮ್ ಕಾಡಪ್ಪನವರ, ವ್ಹಿ ಜಿ ಹಿಟ್ಟನಗಿ ಹಾಗೂ ಮಹಾವಿದ್ಯಾಲಯದ ಬೋಧಕ-ಬೋಧಕೇತರರು ಉಪಸ್ಥಿತರಿದ್ದರು. ಕು. ರಾಖಿ ಕಲಪತ್ರಿ ಪ್ರಾರ್ಥಿಸಿದರು. ಡಾ. ಮಹಾಂತೇಶ ಕುರಿ ಸ್ವಾಗತಿಸಿದರು. ಡಾ. ಮಲ್ಲೇಶ ದೊಡ್ಡಲಕ್ಕಣ್ಣವರ ವಂದಿಸಿದರು. ಡಾ. ಶೋಭಾ ನಾಯಕ ನಿರೂಪಿಸಿದರು.