ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಭೇಟಿ ಮೂಲಸೌಕರ್ಯ ಒದಗಿಸಲು ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ: ಡಾ.ಸೋಮಶೇಖರ್

0

ಬೆಳಗಾವಿ, ಜ. 28 : ಗಡಿ ಪ್ರದೇಶದಲ್ಲಿರುವ ಗ್ರಾಮಗಳಿಗೆ ಜಿಲ್ಲಾಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಬೇಕು ಹಾಗೂ ಮೂಲಸೌಕರ್ಯಗಳ ಕೊರತೆಗಳನ್ನು ಪಟ್ಟಿ ಮಾಡಿ ಸಲ್ಲಿಸುವಂತೆ ತಿಳಿಸಲಾಗುವುದು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿದರು.
ಗಡಿಭಾಗದ ಅಥಣೆಯಲ್ಲಿ ಕನ್ನಡಪರ ಸಂಘಟನೆಗಳು, ಕನ್ನಡಪರ ಕೆಲಸ ಮಾಡುತ್ತಿರುವ ಸ್ವಾಮೀಜಿಗಳ ಸಮ್ಮುಖದಲ್ಲಿ ಬುಧವಾರ (ಜ.27) ನಡೆದ ಗಡಿ ಸಮಸ್ಯೆಗಳ ಕುರಿತ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಗಡಿಪ್ರದೇಶದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಹೆಚ್ಚಿನ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಗಡಿಪ್ರದೇಶದ ಜನರ ವಿವಿಧ ಬೇಡಿಕೆಗಳ ಬಗ್ಗೆ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಗಮನಸೆಳೆದರು. ಅಥಣಿ ನಗರದಲ್ಲಿ ಸರಕಾರಿ ಕನ್ನಡ ಹೈಸ್ಕೂಲ್ ಸ್ಥಾಪಿಸುವ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟರು.
ಜನರ ಅಹವಾಲುಗಳ ಬಗ್ಗೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಅಧ್ಯಕ್ಷ ಡಾ.ಸೋಮಶೇಖರ್ ಅವರು, ಈ ಬಗ್ಗೆ ಸರ್ಕಾರದ ಗಮನಸೆಳೆಯುವುದಾಗಿ ತಿಳಿಸಿದರು.
ಕನ್ನಡ ಪ್ರಸಾರಕ್ಕೆ ಹೆಸರುವಾಸಿಯಾದ ಪ್ರಭು ಚನ್ನಬಸವ ಸ್ವಾಮಿಗಳು , ಮುದಗಲ್ ಮಹಾಂತಸ್ವಾಮಿಗಳು, ಗಡಿ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ನಂತರ ಗಡಿ ಗ್ರಾಮ ಖಿಳೇಗಾಂವ ದ ಬಸವೇಶ್ವರ ದೇವಸ್ಥಾನದ ಸಾಂಸ್ಕೃತಿಕ ಭವನದ ಕಾಮಗಾರಿ, ಪಂಚಾಯತ ರಾಜ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ನಡೆದ ಶಾಲಾ ಕೊಠಡಿ ಕಾಮಗಾರಿಯನ್ನು ಪ್ರಾಧಿಕಾರದ ಅಧ್ಯಕ್ಷ ಡಾ.ಸೋಮಶೇಖರ್ ಅವರು ಪರಿವೀಕ್ಷಣೆ ಮಾಡಿದರು. ಬಳಿಕ ಅಥಣಿ ಮೋಟಗಿಮಠದ ಶರಣ ಸಂಸ್ಕೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.