ಉ.ಕ. ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟರೆ ಆಶ್ಚರ್ಯವಿಲ್ಲ !

0

ಮಿರ್ಜಿ ಅಣ್ಣಾರಾಯ ವೇದಿಕೆ (ಕಾಗವಾಡ), ಜ. 30- ಎಲ್ಲ ಕ್ಷೇತ್ರಗಳಲ್ಲೂ ಅನ್ಯಾಯವನ್ನು ಸಹಿಸಿಕೊಂಡು ಬಂದ ಉತ್ತರ ಕರ್ನಾಟಕದವರು ಮುಂದೊಂದು ದಿನ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟರೆ ಆಶ್ಚರ್ಯವಿಲ್ಲ ಎಂದು ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ವತಿಯಿಂದ ಇಲ್ಲಿನ ಮಲ್ಲಿಕಾರ್ಜುನ ವಿದ್ಯಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತ್ಯೇಕ ರಾಜ್ಯದ ಕೂಗು ಸಮರ್ಥ ಅಲ್ಲ. ಆದರೂ ಪರಿಸ್ಥಿತಿಗಳು ಆ ಕೂಗಿಗೆ ಪೂರಕವಾಗಿ ಕಾಣುತ್ತಿವೆ. ಆದ್ದರಿಂದ ಕನ್ನಡಿಗರು ಭೌಗೋಳಿಕವಾಗಿ ಒಂದಾದರೆ ಸಾಲದು, ಭಾವನಾತ್ಮಕವಾಗಿ ಒಂದಾಗಬೇಕು. ನಮ್ಮ ಈ ಭಾಗದ ಜನಪ್ರತಿನಿಧಿಗಳು ಸದಾಕಾಲ ಹೋರಾಡುತ್ತಲೇ ಇರಬೇಕು ಎಂದು ಆಶಿಸಿದರು.

ಇಂದು ಕನ್ನಡ ಪ್ರದೇಶಗಳು ರಾಜಕೀಯವಾಗಿ ಒಂದುಗೂಡಿವೆ. ಆದರೆ, ಏಕೀಕರಣದ ಒಟ್ಟು ಆಶಯ ಈಡೇರಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಗಡಿ ಭಾಗದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಕನ್ನಡ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಆರಂಭಿಸಿ ಅಲ್ಲಿ ಕನ್ನಡ ವಾತಾವರಣ ನಿರ್ಮಿಸಲು ಪ್ರಬಲ ಇಚ್ಛಾಶಕ್ತಿಯನ್ನು ಸರ್ಕಾರ ತೋರಬೇಕು ಎಂದು ಸಲಹೆ ನೀಡಿದರು.

ಸರ್ಕಾರ ಯಾವುದೇ ಇದ್ದರೂ ಆಡಳಿತ ನಿರ್ವಹಣೆಯಲ್ಲಿ ಅಧಿಕಾರಿಗಳಿಂದ ಪಕ್ಷಪಾತ ಎದ್ದು ಕಾಣುತ್ತಿದೆ‌. ಪ್ರಾದೇಶಿಕ ಅಸಮತೋಲನ ಎಲ್ಲ ಕ್ಷೇತ್ರಗಳಲ್ಲೂ ಎದ್ದು ಕಾಣುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಬಂದಷ್ಟು ನೀರಾವರಿ ಯೋಜನೆಗಳು ಉತ್ತರದಲ್ಲಿ ಬಂದಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನ ಬೆಂಗಳೂರಿನ ಕಲಾವಿದರು ಹಾಗೂ ಸಾಹಿತಿಗಳಿಗೇ ಮೀಸಲಿಟ್ಟಂತೆ ಹಂಚಿ ಹೋಗುತ್ತದೆ. ಪ್ರಶಸ್ತಿಗಳೂ ಹಾಗೆಯೇ ಆಗಿವೆ. ಕೆಲವೇ ಕೆಲವು ರಾಜಕೀಯ ಬೆಂಬಲಿತ ವ್ಯಕ್ತಿಗಳನ್ನು ಮಾತ್ರ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗುತ್ತಿದೆ. ಅಕಾಡೆಮಿಗಳಲ್ಲಿ ಉತ್ತರ ಕರ್ನಾಟಕದವರಿಗೆ ಸ್ಥಾನಮಾನಗಳೆ ಸಿಕ್ಕಿಲ್ಲ ಎಂದರು.

ಸರ್ಕಾರ ವಿಶೇಷ ಅನುದಾನ ನೀಡಿ ಕನ್ನಡ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕು. ರಾಜ್ಯದ ಯಾವುದೇ ಗಡಿ ಭಾಗವಿರಲಿ, ಅಲ್ಲೆಲ್ಲ ಕನ್ನಡ ಭಾಷೆ ಹಾಗೂ ಕನ್ನಡ ಕಾರ್ಯಕ್ರಮಕ್ಕೆ ಅವಕಾಶ ಕೊಡಬೇಕು. ಗಡಿಯಲ್ಲಿರುವ ಜನಪ್ರತಿನಿಧಿ ಗಳು ಕನ್ನಡ ಹಾಗೂ ಸಾಂಸ್ಕೃತಿಕ ಪ್ರೀತಿಯನ್ನು ಹೊಂದಿರಬೇಕು. ಸರ್ಕಾರ ಎಂದರೆ ಬೆಂಗಳೂರು ಮಾತ್ರವಲ್ಲ ಎನ್ನುವು ದನ್ನು ಅರಿತು ಸಕಾರಾತ್ಮಕ ಮನೋಭಾವ ಹೊಂದಬೇಕು. ವಿವಿಧ ಅಕಾಡೆಮಿಗಳಿಗೆ ಗಡಿನಾಡಿನ ಪ್ರತಿನಿಧಿಗಳನ್ನು ನೇಮಿಸಿ ಪ್ರೋತ್ಸಾಹಿಸಬೇಕು. ಗಡಿ ಪ್ರದೇಶದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಗಡಿ ಆಚೆ, ಗಡಿ ಈಚೆಯ ಕುರಿತು ಸಂಪೂರ್ಣ ಅಧ್ಯಯನ ಮಾಡಿದ ಕಳಕಳಿಯ ಹೋರಾಟಗಾರರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನೇಮಿಸಬೇಕು. ಗಡಿ ಕನ್ನಡಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆಡಳಿತದಲ್ಲಿ ಕನ್ನಡವನ್ನೇ ಬಳಸಬೇಕು. ಕನ್ನಡ ಬಳಸದವರಿಗೆ ಬಳಸುವಂತೆ ಕಿವಿ ಹಿಂಡಬೇಕು. ಕನ್ನಡಕ್ಕಾಗಿ ದುಡಿಯುವವರಿಗೆ ಎಲ್ಲ ರೀತಿಯ ಬೆಂಬಲ ಕೊಡಬೇಕು. ಇಂಗ್ಲಿಷ್ ಪ್ರಭಾವ ದಿಂದ ಕನ್ನಡ ಮಾಧ್ಯಮ ಅವಸಾನದತ್ತ ಸಾಗುತ್ತಿರುವುದರಲ್ಲಿ ಎರಡು ಮಾತಿಲ್ಲ.

ಗಡಿ ಸಮಸ್ಯೆ ಅದು ಮುಗಿದ ಅಧ್ಯಾಯ. ಅದನ್ನು ರಾಜಕೀಯ ದಾಳವನ್ನಾಗಿ ಮಾಡಿಕೊಂಡು ಜನರ ಭಾವನೆಗಳನ್ನು ಕೆದಕಬಾರದು. ಗಡಿ ಭಾಗದ ಕನ್ನಡ ಶಾಲೆಗಳು ಮೂಲಸೌಕರ್ಯಗಳಿಲ್ಲದೆ ಬಳಲುತ್ತಿವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೌಲಭ್ಯ ಒದಗಿಸಬೇಕು. ಪ್ರೌಢಶಾಲಾ ಹಂತದವರೆಗಿನ ಶಿಕ್ಷಣವನ್ನು ಕನ್ನಡದಲ್ಲಿ ಬರೆದವರಿಗೆ ಸರ್ಕಾರಿ ನೌಕರಿ ದೊರೆಯುವಂತಾದರೆ ಕನ್ನಡಕ್ಕೆ ಬೇಡಿಕೆ ಬರಬಹುದು. ಸಾಹಿತ್ಯವೂ ಉದ್ಧಾರವಾಗಬಹುದು. ಮಕ್ಕಳ ಸಂಖ್ಯೆ ಕಡಿಮೆಯಾದ ತಕ್ಷಣ ಶಾಲೆಗಳನ್ನು ಮುಚ್ಚಬಾರದು. ಆ ಶಾಲೆಗಳ ಸುಧಾರಣೆಗೆ ಯತ್ನಿಸಬೇಕು. ಶಿಕ್ಷಕರನ್ನು ನೇಮಿಸಿ ಅವರಿಗೆ ಸೌಲಭ್ಯಗಳನ್ನು ಕೊಟ್ಟರೆ ಶಾಲೆಗಳನ್ನು ಮುಚ್ಚುವ ಪ್ರಸಂಗ ಬರಲಾರದು.

ಸವದಿ ಹೇಳಿಕೆ ಸಮಂಜಸ

ವ್ಯಾಪಾರಿ ಭಾಷೆ ಬೇರೆ, ಮಾತೃಭಾಷೆ ಬೇರೆ. ಮರಾಠಿಯಲ್ಲಿ ಹಿಂದೊಮ್ಮೆ ರಸೀದಿ ನೀಡಿದಾಕ್ಷಣ ಬೆಳಗಾವಿ ಮಹಾರಾಷ್ಟ್ರದ್ದು ಆಗುವುದಿಲ್ಲ. ಮುಂಬೈ ಕರ್ನಾಟಕಕ್ಕೆ ಸೇರಿಸಿ ಅಂತ ಏಕೆ ಕೇಳಬಾರದು ಎನ್ನುವ ಲಕ್ಷ್ಮಣ ಸವದಿ ಆಗ್ರಹ ಸಮಂಜಸವಾಗಿದೆ. ಮಹಾನಗರ ಪಾಲಿಕೆ ಚುನಾವಣೆ ಬಂದಿರುವುದರಿಂದ ಕೆಲವರು ತಗಾದೆ ತೆಗೆಯುತ್ತಿದ್ದಾರೆ. ಅದಕ್ಕೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಡಾ. ಕೋರೆ ಕುವಿಮಾತು ಹೇಳಿದರು.

ನೀಲಕಂಠ ಶ್ರೀ , ಯತೀಶ್ವರನಂದ ಸ್ವಾಮೀಜಿ, ಬಸಲಿಂಗ ಸ್ವಾಮೀಜಿ. ಕಸಾಪ ಅಧ್ಯಕ್ಷೆ ಮಂಗಳಾ ಮೆಟಗುಡ್, ಜವಳಿ ಸಚಿವ ಶ್ರೀಮಂತ ಪಾಟೀಲ್ ಇದ್ದರು. ಸಿದಗೌಡ ಕಾಗೆ ಸ್ವಾಗತಿಸಿದರು. ಜೆ. ಕೆ. ಪಾಟೀಲ್, ಸಿದ್ರಾಮ ಮೋಟಗಿ ನಿರೂಪಿಸಿದರು. ಎಂ. ವೈ ಮೆಣಸಿನಕಾಯಿ
ವಂದಿಸಿದರು.