ರಾಜಕಾರಣಿಗಳದ್ದು ಸ್ವಾರ್ಥ ಹೇಳಿಕೆ

0

ಮಿರ್ಜಿ ಅಣ್ಣಾರಾಯ ವೇದಿಕೆ (ಕಾಗವಾಡ), 30- ಬೆಳಗಾವಿ ಗಡಿ ವಿವಾದದ ಬಗ್ಗೆ ರಾಜಕಾರಣಿಗಳು ಸ್ವಾರ್ಥಕ್ಕೆ ಹೇಳಿಕೆ ನೀಡುತ್ತಾರೆ. ಮೊದಲು ಅವರು ಅವಿವೇಕದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂಬ ಸಂದೇಶವನ್ನು ಎರಡೂ ರಾಜ್ಯಗಳ ಜನರು ನೀಡಿದ್ದಾರೆ. ಒಡಕು ಹುಟ್ಟಿಸುವ ಧ್ವನಿಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ನೀಡಿದರೂ ಜನರು‌ ಸೊಪ್ಪು ಹಾಕಲಿಲ್ಲ. ಹೀಗಾಗಿ ಹೇಳಿಕೆ ನೀಡುವ ಮುನ್ನ ರಾಜಕಾರಣಿಗಳು ಎಚ್ಚರ ವಹಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ ಹೇಳಿದರು.

ಮಲ್ಲಿಕಾರ್ಜುನ ವಿದ್ಯಾಲಯದ ಆವರಣದಲ್ಲಿ ನಡೆದ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದ ಆವರು, ಕನ್ನಡಿಗರು ಸೌಹಾರ್ದ ಬಯಸುವವರು. ಸುಮ್ಮನಿದ್ದಾರೆ ಎಂದು ಕೆಣಕಲು ಬರಬೇಡಿ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಹಾವೇರಿಯಲ್ಲಿ ಸಮ್ಮೇಳನ ಆಗಬಹುದು. ಸರ್ಕಾರ ಈ ವಿಷಯದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ನಿಯಮಗಳು ಸಡಿಲಿಕೆ ಆಗಬೇಕು. ಈ ಬಗ್ಗೆ ಸರ್ಕಾರವು ಬೇಗ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೋವಿಡ್ ಪರಿಣಾಮದ ಬಗ್ಗೆ ಹಾವೇರಿ ಸಮ್ಮೇಳನದಲ್ಲಿ ಚರ್ಚೆ: ಮುಂದಿನ ತಿಂಗಳು ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಕೋವಿಡ್ ಪರಿಣಾಮಗಳ ಕುರಿತು ಗೋಷ್ಠಿ ಇರಲಿದೆ. ಕೋವಿಡ್ ಉಂಟು ಮಾಡಿದ ಪರಿಣಾಮಗಳ ಕುರಿತು ಚರ್ಚೆ ಯಾಗಲಿದೆ. ಹೇಗೆ ನಷ್ಟ ಉಂಟಾಯಿತು, ಅದರಿಂದ ಹೊರಬರುವುದು ಹೇಗೆ? ಈ ಪರಿಸ್ಥಿತಿಯಲ್ಲಿ ಉದ್ಯೋಗ ಸೃಷ್ಟಿ ಮಾಡುವುದು ಹೇಗೆ ಎಂಬ ಬಗ್ಗೆ ಸಮಾಲೋಚನೆ ನಡೆಯಲಿದೆ. ಆರೋಗ್ಯ ಜಾಗೃತಿಯನ್ನೂ ಮೂಡಿಸಲಾಗುವುದು ಎಂದರು.