ಕೃಷಿ ಕಾಯ್ದೆ ಹಿಂಪಡೆಯುವಂತೆ ರೈತರಿಂದ ಉಪವಾಸ ಸತ್ಯಾಗ್ರಹ

0

ಚಿಕ್ಕೋಡಿ : ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಸೇರಿ ವಿವಿಧ ಭೇಡಿಕೆಗಳಿಗೆ ಆಗ್ರಹಿಸಿ ಶನಿವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಹಲವು ಸಂಘಟನೆಗಳು ಉಪವಿಭಾಗಾಧಿಕಾರಿ ಕಚೇರಿ ಮುಂದೆ ರೈತರು  ಉಪವಾಸ ಸತ್ಯಾಗ್ರಹ ನಡೆಸಿದರು.

ಮಹಾತ್ಮಾಗಾಂಧೀಜಿ ಪುಣ್ಯತಿಥಿ ನಿಮಿತ್ತ ರೈತ ಸಂಘಟನೆ ಕಾರ್ಯಕರ್ತರು ಉಪವಾಸ  ಸತ್ಯಾಗ್ರಹ ನಡೆಸಿ, ರೈತರಿಗೆ ಮಾರಕವಾಗುವ ಭೂ ಸುಧಾರಣೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದ್ದರಿಂದ ಉದ್ದಿಮೆದಾರರಿಗೆ

ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಇದರಿಂದ ರೈತರು ಬೀದಿಪಾಲಾಗುತ್ತಾರೆ. ಆದ್ದರಿಂದ ಕೇಂದ್ರ ಸರಕಾರ ಕೂಡಲೇ ಕಾಯ್ದೆಯನ್ನು ರದ್ದುಪಡಿಸಬೇಕೆಂದು ಆಕ್ರೋಶ ವ್ಯಕ್ತ ಪಡಿಸಿದರು.

ಅಭಿವೃದ್ಧಿ ದೃಷ್ಟಿಯಿಂದ  ಈ ಭಾಗದ ಜನರ ಕಳೆದ ಹಲವು ದಶಕಗಳ ಬೇಡಿಕೆಯಾಗಿರುವ  ಚಿಕ್ಕೋಡಿ ಜಿಲ್ಲೆಯನ್ನಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಬೇಕು. ನೆನೆಗುದಿಗೆ ಬಿದ್ದಿರುವ ಕರಗಾಂವ ಮತ್ತು ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಜಾರಿಗೊಳಿಸಬೇಕು. ಒಂದು ವೇಳೆ ವಿಳಂಬ ನೀತಿ ಅನುಸರಿಸಿದಲ್ಲಿ ಮುಂದಿನ ದಿನಮಾನದಲ್ಲಿ ಉಗ್ರ ಹೋರಾಟ ಮಾಡಲು ಮುಂದಾಗಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಉಪವಿಭಾಗಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ವಕ್ತಾರ ತ್ಯಾಗರಾಜ ಕದಮ, ಮಲ್ಲಪ್ಪ ಅರಭಾಂವಿ, ಸಿದ್ರಾಮ ಕರಗಾಂವಿ, ಅಣ್ಣಪ್ಪಾ ಪಿಂಪಳೆ, ಮಾರುತಿ ಕಮತೆ, ಬಾಳು ಹಾದಿಮನಿ, ಅಶೋಕ ಕಮತೆ, ಸತ್ಯಪ್ಪ ಕಮತೆ, ದಯಾನಂದ ಹಾದಿಮನಿ, ಮಹಾದೇವ ಕಮತೆ ಉಪಸ್ಥಿತರಿದ್ದರು.