ಶಿವಾಜಿ ಮೂಲತಃ ಕನ್ನಡದವರು

0

ಬೆಳಗಾವಿ, ಜ. 31- ಛತ್ರಪತಿ ಶಿವಾಜಿ ಮಹಾರಾಜರೇ ಕರ್ನಾಟಕದ ಮೂಲದವರು. ಇದನ್ನು ಗಡಿ ತಗಾದೆ ತೆಗೆಯುವ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅರಿತುಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿರುಗೇಟು ನೀಡಿದರು.

ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಧವ್ ಠಾಕ್ರೆ ಇತಿಹಾಸ ಓದಿಲ್ಲ. ಶಿವಾಜಿ ಮಹಾರಾಜರ ಮೂಲಪುರುಷ ಬೆಳ್ಳಿಯಪ್ಪ ಅವರು ಗದಗ ಜಿಲ್ಲೆಯ ಸೊರಟೂರಿನವರು. ಕರ್ನಾಟಕದಲ್ಲಿ ಬರ ಬಂದಾಗ ಮಹಾರಾಷ್ಟ್ರಕ್ಕೆ ಬೆಳ್ಳಿಯಪ್ಪ ಗುಳೆ ಹೋದರು. ಮಹಾರಾಷ್ಟ್ರಕ್ಕೆ ಹೋಗಿ ನೆಲೆಸಿದರು. ಅವರ ನಾಲ್ಕನೇ ತಲೆಮಾರಿಗೆ ಶಿವಾಜಿ ಬರುತ್ತಾರೆ ಎಂದರು.

‘ಉದ್ಧವ್ ನೇತೃತ್ವದಲ್ಲಿರುವುದು ಸಮ್ಮಿಶ್ರ ಸರ್ಕಾರ. ಕಾಂಗ್ರೆಸ್ ಪಕ್ಷದವರು ಯಾವಾಗ ಕಿತ್ತು ಹಾಕುತ್ತಾರೆಯೋ ಎಂಬ ಭಯ ಉದ್ಧವ್ ಠಾಕ್ರೆಗಿದೆ‌. ಹೀಗಾಗಿ ಕುರ್ಚಿ ಉಳಿಸಿಕೊಳ್ಳಲು ಜನರ ಗಮನ ಬೇರೆಡೆಗೆ ಸೆಳೆಯುತ್ತಿದ್ದಾರೆ ಎಂದು ಟೀಕಿ ಸಿದರು.

ಕರ್ನಾಟಕದಲ್ಲಿ ಮರಾಠಿಗರು-ಕನ್ನಡಿಗರು ಸಹೋದರರಂತೆ ಇದ್ದೇವೆ. ಇಲ್ಲಿ ಭಾಷಾ ಸಮಸ್ಯೆ ಇಲ್ಲ. ಉದ್ಧವ್ ಠಾಕ್ರೆ ಕುರ್ಚಿಗಾಗಿ ಕುಲಗೆಡಿಸುವ ಕೆಲಸ ಮಾಡಬಾರದು ಎಂದು ತಿರುಗೇಟು ನೀಡಿದರು.

ಮಹದಾಯಿ ವಿಚಾರದಲ್ಲಿ ಪಕ್ಷದ ಮಾತು ಕೇಳಲ್ಲ ಎಂಬ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರೂ ಯಾರ ಮಾತನ್ನೂ ಕೇಳಬೇಕಾಗಿಲ್ಲ. ನಾವೂ ಯಾರ ಮಾತನ್ನೂ ಕೇಳಬೇಕಾಗಿಲ್ಲ. ನೆಲ, ಜಲ ಪ್ರಶ್ನೆ ಬಂದಾಗ ನಾವು ನಮ್ಮ ನೆಲ ಜಲ ಪರವಾಗಿ ಇರುತ್ತೇವೆ. ನಮ್ಮ ಸರ್ಕಾರ ಅದನ್ನು ಸಮರ್ಥವಾಗಿ ನಿಭಾಯಿಸುತ್ತದೆ ಎಂದರು.