ಸದನದಲ್ಲಿ ರಾಜಾಹುಲಿ ಘರ್ಜನೆ

0

ಆಡಳಿತ ಪಕ್ಷದಲ್ಲಿದ್ದಾಗ ಏನೇನು ನಡೆಯುತ್ತದೆ ಎನ್ನುವುದು ನಿಮಗೂ ಗೊತ್ತಿದೆ, ನನಗೂ ಗೊತ್ತಿದೆ ಎಂದ ಸಿದ್ದರಾಮಯ್ಯ

 ಬೆಂಗಳೂರು : ವಿಧಾನಸಭಾ ಕಲಾಪದ ಕಡೇ ದಿನವಾದ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸುತ್ತಾ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯನವರೇ ನೀವು ಓರ್ವ ವಕೀಲರಾಗಿದ್ದವರು, ಬುದ್ಧಿವಂತರು, ನಿಮಗೆ ಬುದ್ಧಿ ಹೇಳುವಷ್ಟು ದೊಡ್ಡವನಾನಲ್ಲ. ಆದರೂ ನಾನು ಜಾಮೀನಿನ ಮೇಲೆ ಹೊರಗಿದ್ದೇನೆ ಎಂಬ ಹೇಳಿಕೆ ನೀಡಿದ್ದೀರಿ. ನಿಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಬೇಲ್ ಮೇಲೆ ಇಲ್ವಾ? ನಿಮ್ಮ ಅವಧಿಯಲ್ಲಿ ಬಿ ರಿಪೋರ್ಟ್ ಹಾಕಿಸಿಕೊಂಡಿಲ್ವಾ ಎಂದು ತಿರುಗೆಟು ನೀಡಿದರು.

ಇಂದು ಹಾದಿ ಬೀದಿಯಲ್ಲಿ ಹೋಗುವವರೂ ಕೂಡ ಕೇಸ್ ಹಾಕುತ್ತಿದ್ದಾರೆ. ಯಾರು ಬೇಕಾದರೂ ಕೇಸ್ ಹಾಕಬಹುದು ಅದರಿಂದ ಏನೂ ಸಾಧಿಸಲು ಸಾಧ್ಯವಿಲ್ಲ. ಆದರೆ ಈ ಕೇಸ್ ಗಳು ನಿಲ್ಲುವುದಿಲ್ಲ ಎಂಬುದೂ ಗೊತ್ತಿರುವ ವಿಚಾರ ಎಂದರು.

ವಿಪಕ್ಷ ನಾಯಕರಾಗಿ ಸರ್ಕಾರದ ಆಡಳಿತ ವೈಖರಿ ಬಗ್ಗೆ ಟೀಕೆ ಮಾಡಿ, ತಪ್ಪುಗಳಿದ್ದರೆ ತಿದ್ದಿ ಈ ಬಗ್ಗೆ ನನ್ನ ಆಕ್ಷೇಪವಿಲ್ಲ. ಆದರೆ ಪದೇ ಪದೇ ಒಂದು ನೂರು ಬಾರಿ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡ್ತಾರೆ… ಸಿಎಂ ಬದಲಾಗ್ತಾರೆ ಎಂದು ಹೇಳುತ್ತಲೇ ಬಂದಿದ್ದೀರಾ. ಒಂದು ವಿಷಯ ಸ್ಪಷ್ಟವಾಗಿ ಹೇಳುತ್ತೇನೆ. ಎಲ್ಲಿಯವರೆಗೆ ನನಗೆ ಪ್ರಧಾನಿ ಮೋದಿ, ಅಮಿತ್ ಶಾ ಬೆಂಬಲವಿರುತ್ತದೆಯೋ, ಎಲ್ಲಿಯವರೆಗೆ ಈ ರಾಜ್ಯದ ಜನತೆ ಆಶೀರ್ವಾದ ಬೆಂಬಲವಿರಿತ್ತದೆಯೋ ಅಲ್ಲಿಯವರೆಗೂ ನಾನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ನನ್ನ ವಿರುದ್ಧ ಇಂಥಹ ನೂರು ಕೇಸು ಹಾಕಿದರೂ ಎಲ್ಲವನ್ನು ಗೆದ್ದು ಬರುವ ಶಕ್ತಿ ನನಗಿದೆ. ನಾನು ಪ್ರಾಮಾಣಿಕನಿದ್ದೇನೆ ಎಂದು ಸಾಬೀತು ಮಾಡುತ್ತೇನೆ. ಬರುವ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನದಲ್ಲಿ ಬಿಜೆಪಿ ಗೆಲ್ಲಿಸುವ ಜವಾಬ್ದಾರಿ ನನ್ನ ಮೇಲಿದೆ. ಆ ಮೂಲಕ ಶಾಶ್ವತವಾಗಿ ನಿಮ್ಮನ್ನು ವಿಪಕ್ಷದಲ್ಲೇ ಕೂರಿಸುತ್ತೇವೆ. ಟೀಕೆ ಮಾಡಬೇಡಿ ಎಂದು ನಾನು ನಿಮಗೆ ಎಂದೂ ಹೇಳಲ್ಲ. ಆದರೆ ಮನಸ್ಸಿಗೆ ಬಂದಂತೆ ಮಾತನಾಡುವುದು ಬಿಟ್ಟು, ನಿಮ್ಮ ಮಾತಿನ ರೀತಿ ಬದಲಿಸಿಕೊಳ್ಳಿ ಎಂದು ಸಲಹೆ ನೀಡುತ್ತಿದ್ದೇನೆ ಎಂದು ಹೇಳಿದರು.

ಬೆಳಗಾವಿ ಲೋಕಸಭಾ ಉಪಚುನಾವಣೆ, ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆಗಳಲ್ಲಿ ನಾವು ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ತೀವಿ. ಇಂದೈೇ ಬೇಕಾದರೆ ಬರೆದಿಟ್ಟುಕೊಳ್ಳಿ ಎಂದು ಯಡಿಯೂರಪ್ಪ ಘರ್ಜಿಸಿದರು.

ನಾವೂ ಆಡಳಿತದಲ್ಲಿದ್ದಾಗ ಎಲ್ಲವನ್ನೂ ಗೆದ್ದಿದ್ವಿ. ಆಡಳಿತ ಪಕ್ಷದಲ್ಲಿದ್ದಾಗ ಏನೇನು ನಡೆಯುತ್ತದೆ ಎನ್ನುವುದು ನಿಮಗೂ ಗೊತ್ತಿದೆ, ನನಗೂ ಗೊತ್ತಿದೆ ಎಂದು ಸಿದ್ದರಾಮಯ್ಯ ಟಾಂಗ್ ನೀಡಿದರು.