ವಿಮೆ ಹಣಕ್ಕಾಗಿ ಪತ್ನಿ ಕೊಲೆ

0

ಪಲಂಪುರ್, ಫೆ. 7- ವಿಮಾ ಹಣ ಸಿಗಲೆಂದು ಪತ್ನಿಯನ್ನು ಕೊಂದು ರಸ್ತೆ ಅಪಘಾತ ಎಂದು ಸುಳ್ಳು ಕಥೆ ಸೃಷ್ಟಿಸಿದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಗುಜರಾತ್ ರಾಜ್ಯದ ಬನಸ್ಕಂತ ಜಿಲ್ಲೆಯ ಚಾರ್ಟೆರ್ಡ್ ಅಕೌಂಟೆಂಟ್ ಲಲಿತ್ ಟಂಕ್ ಈ ಕೃತ್ಯವೆಸಗಿರುವ ವ್ಯಕ್ತಿ.

ಘಟನೆ ವಿವರ ?:
ಕಳೆದ ಡಿಸೆಂಬರ್ 26ರಂದು ಬಿಲ್ದಿ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿತ್ತು. ದಕ್ಷಬೆನ್ ಟಂಕ್ ಎಂಬ ಮಹಿಳೆ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಕೇಸು ದಾಖಲಾಗಿತ್ತು.

ಕೆಲ ದಿನಗಳು ಕಳೆದ ನಂತರ ಮಹಿಳೆಯ ಸಂಬಂಧಿಕರು ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರು. ಆಗ ಪೊಲೀಸರು ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಿದಾಗ ಮಹಿಳೆಯನ್ನು ಹತ್ಯೆಗೈಯಲಾಗಿದೆ ಎಂದು ತಿಳಿಯಿತು. ಮತ್ತಷ್ಟು ಆಳವಾಗಿ ತನಿಖೆ ಮಾಡಿದಾಗ ಆಕೆಯ ಪತಿ ಲಲಿತ್ ಟಂಕ್ ಕಿರಿತ್ ಮಾಲಿ ಎಂಬುವವನಿಗೆ 2 ಲಕ್ಷ ರೂಪಾಯಿ ನೀಡಿ ಪತ್ನಿಯನ್ನು ಕೊಲೆ ಮಾಡುವಂತೆ ಆದರೆ ಅದು ರಸ್ತೆ ಅಪಘಾತದಲ್ಲಿ ಮೃತಪಟ್ಟಿತ್ತು ಎಂದು ಭಾಸವಾಗುವಂತೆ ಮಾಡಬೇಕು ಎಂದು ಹೇಳಿದ್ದರಂತೆ.

ಮೂರು ತಿಂಗಳ ಹಿಂದೆ ಮಾಡಿಸಿದ್ದ ಎಲ್ ಐಸಿ ಪಾಲಿಸಿಯಲ್ಲಿ 60 ಲಕ್ಷ ರೂಪಾಯಿ ಬರಬೇಕೆಂದು ಪತಿ ಟಂಕ್ ಹೀಗೆ ಮಾಡಿದ್ದನೆಂದು ಪೊಲೀಸ್ ತನಿಖೆಯಿಂದ ತಿಳಿದು ಬಂತು.

ಡಿಸೆಂಬರ್ 26ರಂದು ಲಲಿತ್ ಪತ್ನಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಸುಪಾರಿ ಕೊಟ್ಟಿದ್ದ ಆರೋಪಿ ಚಾಲಕ ನಿಗೆ ತಾವಿದ್ದ ಲೊಕೇಶನ್ ನ ವಿಳಾಸವನ್ನು ಕಳುಹಿಸಿದ್ದರು. ಪತಿ-ಪತ್ನಿ ನಡೆದುಕೊಂಡು ಹೋಗುತ್ತಾ ತಾವು ಸ್ವಲ್ಪ ದೂರದಲ್ಲಿ ನಡೆದುಕೊಂಡು ಹೋಗಿ ಆ ಹೊತ್ತಿಗೆ ಚಾಲಕ ಬಂದು ಅಪಘಾತ ಮಾಡಿಸುವಂತೆ ಸೂಚಿಸಿದ್ದರು. ವೇಗವಾಗಿ ವಾಹನದಲ್ಲಿ ಬಂದ ಚಾಲಕ ದಕ್ಷಬೆನ್ ಗೆ ಢಿಕ್ಕಿ ಹೊಡೆದು ಸ್ಥಳದಲ್ಲಿಯೇ ಕೊಂದು ಹಾಕಿದ್ದನು.

ಲಲಿತ್ ನನ್ನು ಮೊನ್ನೆ ಬಂಧಿಸಿರುವ ಪೊಲೀಸರು ಬೇರೆ ಆರೋಪಿಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ..