ಬೆಳಗಾವಿ, ಫೆ. 7- ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ಹಾಗೂ ದೇಶದ ಅಲ್ಲಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ. ಅದು ಆ ಪಕ್ಷದ ಪೂರ್ವಯೋಜಿತ ಕಾರ್ಯ ಕ್ರಮ ಎಂದು ಬಿಜೆಪಿಯವರು ಆರೋಪಿಸು ತ್ತಿರು ವುದರಲ್ಲಿ ಅರ್ಥವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಆರೋಪ ಸತ್ಯಕ್ಕೆ ದೂರವಾದುದು. . ರೈತರು ಕಾಯ್ದೆಗಳನ್ನು ವಾಪಸ್ ಪಡೆಯವಂತೆ ಹೋರಾಟ ಆರಂಭಿಸಿದ್ದರು. ಅವರ ಬೆಂಬಲಕ್ಕೆ ನಾವು ಇತ್ತೀಚೆಗೆ ನಿಂತಿದ್ದೇವೆ ಎಂದರು.
‘ಕೃಷಿಕರು ದೇಶದಾದ್ಯಂತ ಹೋರಾಟ ಮುಂದುವರಿಸಿದ್ದಾರೆ. ಸರ್ಕಾರ ರೈತರ ಪರವಾಗಿ ಕೆಲಸ ಮಾಡಬೇಕು. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸುತ್ತಿಲ್ಲ. ಹಟ ಬಿಟ್ಟು ವಿವಾದಿತ ಕೃಷಿ ಕಾಯ್ದೆ ಗಳನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.
‘ಜ.26ರಂದು ದೆಹಲಿಯಲ್ಲಿ ಬಿಜೆಪಿಯವರು ಉದ್ದೇಶಪೂರ್ವಕವಾಗಿಯೇ ರೈತರ ಹೋರಾಟದ ದಿಕ್ಕು ಬದಲಿಸುವ ಪ್ರಯತ್ನ ಮಾಡಿದರು. ಬಿಜೆಪಿ ನಾಯಕರ ಕುಮ್ಮಕ್ಕಿನಿಂದಲೇ ಹಿಂಸಾಚಾರ ನಡೆಯಿತು. ಆದರೆ, ಅವರ ಉದ್ದೇಶ ಯಶಸ್ವಿಯಾಗಲಿಲ್ಲ’ ಎಂದರು.
ದೇಶದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ವಿದೇಶದ ಸೆಲೆಬ್ರೆಟಿಗಳು ಬೆಂಬಲಿಸಿರುವುದಕ್ಕೆ ಬಿಜೆಪಿ ವಿರೋಧಿಸು ತ್ತಿರುವ ವಿಚಾರಕ್ಕೆ ತಿರು ಗೇಟು ನೀಡಿದ ಅವರು, ‘ಅಮೆರಿಕದ ಪ್ರಧಾನಿ ಪರವಾಗಿ ಮೋದಿ ಅವರೆ ಹೋಗಿ ಪ್ರಚಾರ ಮಾಡಿ ಬಂದಿದ್ದರು. ಬೇರೆ ದೇಶಕ್ಕೆ ಅವರು ಯಾಕೆ ಹೋಗಬೇಕಿತ್ತು?’ ಎಂದು ಕೇಳಿದರು.
‘ಬೇರೆ ದೇಶಗಳಲ್ಲಿ ಜನರಿಗೆ ಅನ್ಯಾಯವಾದಾಗ ನಾವು ಕೂಡ ದನಿ ಎತ್ತಿದ್ದೇವೆ. ಶ್ರೀಲಂಕಾದಲ್ಲಿ ಅನ್ಯಾಯವಾದಾಗ ನಮ್ಮ ಸೈನಿಕರು ಹೋಗಿ ದ್ದರು. ಬಾಂಗ್ಲಾ ದೇಶವನ್ನು ನಮ್ಮ ಇಂದಿರಾಗಾಂಧಿ ಅವರೇ ಪ್ರತ್ಯೇಕ ದೇಶ ಮಾಡಿದರು. ಆದರೆ, ಅಮೆರಿಕಕ್ಕೆ ಹೋಗಿ ಪ್ರಧಾನಿ ಮೋದಿ ಟ್ರಂಪ್ ಪರವಾಗಿ ಯಾಕೆ ಪ್ರಚಾರ ಮಾಡಬೇಕಿತ್ತು. ಅದು ಬೇರೆ ದೇಶ ಅಲ್ಲವೇ? ಎಂದು ತಿರುಗೇಟು ನೀಡಿದರು.
‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲುತ್ತೇವೆ’ ಎಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ, ‘ಅದನ್ನು ಮತದಾರರು ತೀರ್ಮಾನ ಮಾಡಬೇಕಾಗುತ್ತದೆ’ ಎಂದರು.
‘ಸಚಿವ ಕೆ.ಎಸ್. ಈಶ್ವರಪ್ಪ ಸರ್ಕಾರದ ಭಾಗವಾಗಿದ್ದಾರೆ. ಪೆನ್ನು–ಪೇಪರ್ ಅವರ ಬಳಿಯೇ ಇದೆ. ಆದರೂ ಕುರುಬರಿಗೆ ಎಸ್ಟಿ ಮೀಸಲಾತಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ’ ಎಂದು ವ್ಯಂಗ್ಯವಾಡಿದರು. ಪಕ್ಷದ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಇದ್ದರು.