ಉತ್ತರಾಖಂಡ ಹಿಮ ಪ್ರವಾಹ

0

ಉತ್ತರಾಖಂಡ, ಫೆ. 7- ಚಿಮೋಲಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತವಾಗಿರುವ ಹಿನ್ನೆಲೆಯಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದ್ದು, ವಿವಿಧ ಸೇನಾಪಡೆಗಳಿಂದ ಸಮಾರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಈ ಘಟನೆಯಿಂದ 150 ಜನರು ನಾಪತ್ತೆಯಾಗಿದ್ದು, ಹತ್ತು ಮೃತ ದೇಹಗಳು ಸಿಕ್ಕಿರುವುದಾಗಿ ರಕ್ಷಣಾ ತಂಡಗಳು ತಿಳಿಸಿವೆ.

ಜೋಶಿಮಠ್ ಪ್ರದೇಶದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡವನ್ನು ನಿಯೋಜಿಸಲಾಗಿದೆ ಎಂದು ಎನ್ ಡಿಆರ್ ಎಫ್ ಡೈರೆಕ್ಟರ್ ಜನರಲ್ ಎಸ್.ಎನ್. ಪ್ರಧಾನ್ ಹೇಳಿದ್ದಾರೆ. ಇನ್ನೂ ಮೂರ್ನಾಲ್ಕು ತಂಡಗಳನ್ನು ದೆಹಲಿಯಿಂದ ಡೆಹ್ರಡೂನ್ ಗೆ ಏರ್ ಲಿಫ್ಟ್ ಮಾಡಿ, ನಂತರ ಜೋಶಿಮಠ್ ಗೆ ಕಳುಹಿಸಲಾಗುವುದು ಎಂದು ಅವರು ತಿಳಿಸಿರುವುದಾಗಿ ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

600 ಸೇನಾ ಸಿಬ್ಬಂದಿಯನ್ನೊಳಗೊಂಡ ಆರು ತುಕಡಿಗಳು ಈಗಾಗಲೇ ಪ್ರವಾಹ ಭಾದಿತ ಪ್ರದೇಶಕ್ಕೆ ಆಗಮಿಸಿರು ವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಕಾರ್ಯಾಚರಣೆಗಾಗಿ ಹೆಲಿಕಾಪ್ಟರ್ ನ್ನು ಕೂಡಾ ನಿಯೋಜಿಸಲಾಗಿದೆ. ಒಂದು ಎಂಜಿನಿಯರಿಂಗ್ ಕಾರ್ಯಪಡೆಯನ್ನು ರಿಂಗಿ ಗ್ರಾಮ ಕ್ಕೆ ಕಳುಹಿಸಲಾಗಿದ್ದು, ಎರಡು ವೈದ್ಯಕೀಯ ತಂಡಗಳು ಕಾರ್ಯಾ ಚರಣೆಗೆ ಸೇರ್ಪಡೆಗೊಂಡಿವೆ.

ಪ್ರವಾಹ ಉಂಟಾದ ಬಳಿಕ ಇಂಡೋ-ಟಿಬೆಟನ್ ಬಾರ್ಡರ್ ಗಸ್ತು ಸಿಬ್ಬಂದಿ ತಪೋವನ್ ಮತ್ತು ರೆನಿ ಪ್ರದೇಶಕ್ಕೆ ಆಗ ಮಿಸಿದ್ದು, ಸ್ಥಳೀಯ ಆಡಳಿತ ದೊಂದಿಗೆ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಯ ಚುರುಕಿನಿಂದ ಸಾಗಿದೆ ಎಂದು ರಿಷಿಕೇಶಿ ಬಳಿಯ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪರಿಸ್ಥಿತಿ ಅವಲೋಕಿಸುತ್ತಿದ್ದು, ಅಗತ್ಯ ನೆರವು ನೀಡುವುದಾಗಿ ಹೇಳಿದ್ದಾರೆ.
ಮೃತರ ರಕ್ತಸಂಬಂಧಿಗಳಿಗೆ ತಲಾ ರೂ 4 ಲಕ್ಷ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.