ರಾಷ್ಟ್ರದ ಸರ್ವಾಂಗೀಣ ಪ್ರಗತಿಗೆ ಸದ್ಗುಣಶೀಲ ಶಿಕ್ಷಕರು, ಒಳ್ಳೆಯ ಶಿಕ್ಷಣ ನೀತಿ ಅವಶ್ಯಕ: ಮುಕ್ತಿ ಮಠದ ಶ್ರೀ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಶ್ರೀಗಳ ಅಭಿಮತ

0

ಬೆಳಗಾವಿ : ಸದ್ಗುಣಶೀಲ ಶಿಕ್ಷಕರಿಂದ ಹಾಗೂ ಒಳ್ಳೆಯ ಶಿಕ್ಷಣ ನೀತಿಯಿಂದ ಮಾತ್ರ ರಾಷ್ಟ್ರದ ಸರ್ವಾಂಗೀಣ ಪ್ರಗತಿ ಸಾಧ್ಯವೆಂದು ಮುಕ್ತಿಮಠದ ಶ್ರೀ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯರು ಅಭಿಮತ ವ್ಯಕ್ತಪಡಿಸಿದ್ದಾರೆ.. ಇಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಶಿಕ್ಷಕ ಸಾಹಿತಿ ಬಸವರಾಜ್ ಸುಣಗಾರ ಅವರು ರಚಿಸಿದ ‘ ಆದರ್ಶ ಶಿಕ್ಷಕ : ಒಂದು ಚಿಂತನೆ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಶ್ರೀ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯರು ‘ಭಾವಿ ನಾಗರಿಕರಾಗಿರುವ ಇಂದಿನ ವಿದ್ಯಾರ್ಥಿಗಳಿಗೆ ಒಳ್ಳೆಯ ಗುಣಗಳನ್ನು ಮೌಲ್ಯಗಳನ್ನು ಸಂಸ್ಕಾರವನ್ನು ಹಾಗೂ ಕಾಯಕ ನಿಷ್ಠೆಯನ್ನು ಮೈಗೂಡಿಸಿಕೊಳ್ಳಲು ಮಾರ್ಗದರ್ಶನ ನೀಡಿ, ಅವರನ್ನು ರಾಷ್ಟ್ರದ ಸಂಪತ್ತ ನ್ನಾಗಿಸುವ ಗುರುತರ ಜವಾಬ್ದಾರಿ ಸಮಸ್ತ ಶಿಕ್ಷಕ ಬಳಗದ್ದಾಗಿದೆ. ಶಿಕ್ಷಕರು ಈ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾದರೆ ದೇಶ ಸರ್ವಾಂಗಿಣ ಪ್ರಗತಿ ಹೊಂದುತ್ತದೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಪತ್ರಿಕೋದ್ಯಮಿ ಕಲ್ಯಾಣರಾವ್ ಮುಚಳಂಬಿ ಅವರು ಮಾತನಾಡಿ ‘ಭಾರತ ಪ್ರತಿಭಾವಂತರಿಂದ ಕೂಡಿದ ದೇಶವಾಗಿದೆ. ಈ ಪ್ರತಿಭಾವಂತರಲ್ಲಿ ಕಾಯಕ ನಿಷ್ಠೆ, ಒಳ್ಳೆಯ ವ್ಯಕ್ತಿತ್ವ, ಕೌಶಲ್ಯಗಳನ್ನು ಬೆಳೆಸಿದ್ದಾದರೆ, ಭಾರತ ‘ವಿಶ್ವಗುರು’ವಾಗುತ್ತದೆ. ಎಂದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕರಾದ ಎಸ್ ಎಸ್ ಪಾಟೀಲ ಅವರು ಬಸವರಾಜ್ ಸುಣಗಾರ ಅವರು ರಚಿಸಿದ ‘ಆದರ್ಶ ಶಿಕ್ಷಕ ಒಂದು ಚಿಂತನೆ’ ಪುಸ್ತಕದ ಪರಿಚಯ ಮಾಡಿದರು. ಬೆಳಗಾವಿಯ ಕುಂದಾನಗರಿ ಕನ್ನಡ ದಿನ ಪತ್ರಿಕೆಯ ಸಂಪಾದಕಿ ಪ್ರಕಾಶಕಿ ಶ್ರೀಮತಿ ರೂಪಾ ಶಿವಪ್ಪ ಕೌತಗಾರ ಅವರಿಗೆ ‘ಸದ್ಗುರು ಕಾಯಕ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯುವ ಪತ್ರಕರ್ತೆ ಪ್ರಶಸ್ತಿ ವಿಜೇತೆ ಕು. ಭಾಗ್ಯಶ್ರೀ ಬಸವರಾಜ ಸುಣಗಾರ ಅವರನ್ನು ಮುಕ್ತಿ ಮಠದ ಶ್ರೀ ಶಿವಸಿದ್ಧ ಸೋಮೆಶ್ವರ ಶಿವಾಚಾರ್ಯರು ಸನ್ಮಾನಿಸಿ, ಆಶೀರ್ವದಿಸಿದರು. ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಬಿಗ್ ನ್ಯೂಸ್ ಚಾನೆಲ್ ಮುಖ್ಯಸ್ಥರಾದ ಸಂತೋಷ ಶ್ರೀರಾಮುಲು ಅವರನ್ನು ಸತ್ಕರಿಸಲಾಯಿತು. .

ಕರಾಪ್ರಾಶಾ ಶಿಕ್ಷಕರ ಸಂಘದ ಬೆಳಗಾವಿ ನಗರ ಘಟಕದ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿರುವ ಕುಮಾರಸ್ವಾಮಿ ಚರಂತಿಮಠ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಅದರಂತೆ ಶಿಕ್ಷಣ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಶ್ರೀಮತಿ ಶಾರದಾ ನಾ ಪೋತದಾರ (ಕುರಿಹಾಳ), ಶ್ರೀಮತಿ ಪ್ರಭಾವತಿ ಬಾ ಹಾಲೆನ್ನವರ (ಜಾಫರ್‍ವಾಡಿ), ಶ್ರೀಮತಿ ಸುವರ್ಣಾ ಹ ದಶವಂತ (ಹಂದಿಗನೂರ), ಶ್ರೀಮತಿ ವಿಜಯಾ ನಾಯಕ (ಯಳೆಬೈಲ್), ಶ್ರೀಮತಿ ಕೆ. ಎಸ್. ಗಾಯಕವಾಡ (ಬಾಚಿ), ಶ್ರೀ ಅಜ್ಜಪ್ಪ ಅಮ್ಮನಬಾವಿ (ವಿಶ್ರಾಂತ ಮುಖ್ಯೋಪಾಧ್ಯಾಯರು), ಶ್ರೀ ಎಸ್.ಟಿ. ಕೋಲಕಾರ (ವಂಟಮೂರಿ ಕಾಲನಿ) ಶ್ರೀ ಮಹಾಂತೇಶ ವಾಲಿ (ಶಿಕ್ಷಕರು) ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಸದ್ಗುರು ಸದ್ಗುರು ಸಾಹಿತ್ಯ ಪ್ರತಿüಷ್ಠಾನದ ಸಂಚಾಲಕಿ ಶ್ರೀಮತಿ ಮಂಜುಳಾ ಬಸವರಾಜ ಸುಣಗಾರ ಸೇರಿದಂತೆ ಅನೇಕ ಹಿರಿಯ ಸಾಹಿತಿಗಳು, ಗಣ್ಯರು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಬಸವರಾಜ ಸುಣಗಾರ ಅವರು ಸರ್ವರನ್ನೂ ಸ್ವಾಗತಿಸಿ, ಪ್ರಾಸ್ತಾವಿವಾಗಿ ಮಾತನಾಡಿದರು. ನಿವೃತ್ತ ಪ್ರಾಚಾರ್ಯರಾದ ಎಸ್ ಆರ್ ಹಿರೇಮಠ ಅವರು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಶಿಕ್ಷಕರಾದ ರಾಜೇಂದ್ರ ಗೋಶ್ಯಾನಟ್ಟಿ ವಂದಿಸಿದರು.