ಅಲಂಕಾರಿಕ ವಿದ್ಯುತ್ ದೀಪಗಳ ಅಳವಡಿಕೆ ಕಾಮಗಾರಿಗೆ : ಸಚಿವ ಉಮೇಶ ಕತ್ತಿ ಚಾಲನೆ

ಹುಕ್ಕೇರಿ ಸೌಂದರ್ಯೀಕರಣಕ್ಕೆ ಪ್ರಥಮ ಆದ್ಯತೆ

0

ಹುಕ್ಕೇರಿ ಸೌಂದರ್ಯೀಕರಣಕ್ಕೆ ಪ್ರಥಮ ಆದ್ಯತೆ

 

 

ಹುಕ್ಕೇರಿ : ಹುಕ್ಕೇರಿ ನಗರದ ಸೌಂದರ್ಯೀಕರಣಕ್ಕೆ ಪ್ರಥಮ ಆದ್ಯತೆ ನೀಡಲಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಹೇಳಿದರು.

ಪಟ್ಟಣದ ಕೋರ್ಟ್ ಸರ್ಕಲ್ ಬಳಿ ಸೋಮವಾರ ನಡೆದ ಅಲಂಕಾರಿಕ ವಿದ್ಯುತ್ ದೀಪಗಳ ಅಳವಡಿಸೋ ಕಾಮಗಾರಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕ್ಷೇತ್ರದ ಪ್ರಮುಖ ನಗರ ಮತ್ತು ಪಟ್ಟಣಗಳಲ್ಲಿ ಸೌಂದರ್ಯಿಕರಣ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

2020-21 ನೇ ಸಾಲಿನ ಲೋಕೋಪಯೋಗಿ ಇಲಾಖೆಯ ವಿದ್ಯುತ್ ಉಪ ವಿಭಾಗದಿಂದ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಸುಮಾರು 1 ಕೋಟಿ ರೂ ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕೋರ್ಟ್ ಸರ್ಕಲ್‍ದಿಂದ ಸುಮಾರು 1 ಕಿ.ಮೀ ಗೂ ಹೆಚ್ಚು ರಸ್ತೆಯ ಎರಡು ಬದಿಯಲ್ಲಿ 100 ಕ್ಕೂ ಅಧಿಕ ಅಲಂಕಾರಿಕ ದೀಪಗಳು ಹಾಗೂ ಅಗತ್ಯ ಕಡೆಗಳಲ್ಲಿ ಹೈಮಾಸ್ಕ್ ಅಳವಡಿಸಲಾಗುವುದು. ನಿಗದಿತ ಅವಧಿಯಲ್ಲಿ ಗುಣಮಟ್ಟದೊಂದಿಗೆ ಈ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನಿಗಾ ವಹಿಸಬೇಕು ಎಂದು ಅವರು ಸೂಚಿಸಿದರು.

ತಾಲ್ಲೂಕು ಸ್ಥಾನಮಾನ ಹೊಂದಿರುವ ಹುಕ್ಕೇರಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಐತಿಹಾಸಿಕ ಮೂರು ಗೋಲಗುಮ್ಮಟಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಬರುವ ದಿನಗಳಲ್ಲಿ ಚಿಕ್ಕೋಡಿ ರಸ್ತೆಯ ಉಮೇಶ ನಗರ, ಸಂಕೇಶ್ವರ ರಸ್ತೆಯ ಜಾಬಾಪುರ, ಬೆಳಗಾವಿ ರಸ್ತೆಯ ಕೃಷಿ ಇಲಾಖೆಯವರೆಗೆ ರಸ್ತೆಯ ಎರಡು ಬದಿಗಳಲ್ಲಿ ಸ್ಟ್ರೀಟ್ ಲೈಟ್ ಅಳವಡಿಸಲಾಗುವುದು. ಈ ಮೂಲಕ ಪಟ್ಟಣವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಲಾಗುವುದು. ರಸ್ತೆ ಬದಿಯಲ್ಲಿ ವಿದ್ಯುತ್ ದೀಪ ಅಳವಡಿಸುವುದರಿಂದ ಜನ ಹಾಗೂ ವಾಹನ ಸಂಚಾರ ಸುಗಮವಾಗಲಿದೆ ಎಂದು ಅವರು ಹೇಳಿದರು.

ತಾಪಂ. ಕಾರ್ಯನಿರ್ವಾಹಕ ಅಧಿಕಾರಿ ಬಿ.ಕೆ.ಲಾಳಿ, ಲೋಕೋಪಯೋಗಿ ಇಲಾಖೆ ಎಇಇ ಎಸ್.ಕೆ.ಹುಕ್ಕೇರಿ, ಸಹಾಯಕ ಅಭಿಯಂತರರಾದ ಪ್ರದೀಪ ಸಾವಂತ, ಪ್ರಭಾಕರ ಕಾಮತ, ಗುತ್ತಿಗೆದಾರ ಐ.ಎಸ್.ಪಾಟೀಲ, ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ, ಉಪಾಧ್ಯಕ್ಷ ಆನಂದ ಗಂಧ, ಸದಸ್ಯರಾದ ಮಹಾಂತೇಶ ತಳವಾರ, ರಾಜು ಮುನ್ನೋಳಿ, ಚಂದು ಮುತ್ನಾಳೆ, ರೇಖಾ ಚಿಕ್ಕೋಡಿ, ಫರೀದಾ ಮುಲ್ಲಾ, ಭೀಮಶಿ ಗೋರಖನಾಥ, ಮುಖ್ಯಾಧಿಕಾರಿ ಮೋಹನ ಜಾಧವ, ಮುಖಂಡರಾದ ಪರಗೌಡ ಪಾಟೀಲ, ಜಯಗೌಡ ಪಾಟೀಲ, ರಾಜು ಕುರಂದವಾಡೆ ಮತ್ತಿತರರು ಉಪಸ್ಥಿತರಿದ್ದರು.