ಪರಿಷತ್ ನಲ್ಲಿ 3 ಕಾಯ್ದೆಗಳ ಅಂಗೀಕಾರ

0

ಬೆಂಗಳೂರು: ಪ್ರತಿಪಕ್ಷಗಳ ಸಭಾತ್ಯಾಗದ ನಡುವೆಯೂ ವಿಧಾನ ಪರಿಷತ್ ನಲ್ಲಿ   ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು ತಿದ್ದುಪಡಿ 2021 ಸೇರಿ ಮೂರು ಕಾಯ್ದೆಗಳನ್ನು  ಅಂಗೀಕರಿಸಲಾಗಿದೆ.

ಕರ್ನಾಟಕ ಪೌರಸಭೆಗಳು, ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕ 2021ನ್ನು ಹಾಗೂ ಇತರ ಕಾನೂನು ತಿದ್ದುಪಡಿ 2021 ವಿಧೇಯಕ ಮೂರು ಕಾಯ್ದೆಗಳ ಅಂಗೀಕರಿಸಲಾಗಿದೆ.

ವಿಧಾನ ಪರಿಷತ್ ಬೆಳಗಿನ ಕಲಾಪದಲ್ಲಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು ತಿದ್ದುಪಡಿ 2021 ವಿಧೇಯಕ ಮಂಡಿಸಿದರು.

ವಿಧೇಯಕದ ಮೇಲಿನ ಚರ್ಚೆ ವೇಳೆ  ಪ್ರತಿಪಕ್ಷದ  ಸದಸ್ಯರಾದ ನಾರಾಯಣಸ್ವಾಮಿ, ರಮೇಶ್, ಮರಿತಿಬ್ಬೇಗೌಡ, ಬಿ.ಕೆ ಹರಿಪ್ರಸಾದ್, ವಿಧೇಯಕಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಕೊರೊನಾ ಕಾರಣ ಕೊಟ್ಟಿರುವ ನೀವು ಸಕಾಲಕ್ಕೆ ತೆರಿಗೆ ಪಾವತಿ ಮಾಡಿದವರಿಗೆ ಶೇ.5 ರಷ್ಟು ಆಸ್ತಿ ತೆರಿಗೆ ರಿಯಾಯಿತಿ ನೀಡುವುದಾಗಿ ಹೇಳಿದ್ದೀರಿ, ಅದನ್ನು ಶೇ.50 ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.   ಈ ಬಿಲ್ ಸರಿಯಿಲ್ಲ ವಾಪಸ್ ಪಡೆದು ಚರ್ಚಿಸಿ ನಂತರ ಮಂಡಿಸಿ ಎಂದು ಆಗ್ರಹಿಸಿದರು.

ಸದಸ್ಯರ ಪ್ರಶ್ನೆಗಳಿಗೆ ಮೂವರು ಸಚಿವರು ಉತ್ತರ ನೀಡುವ ಪ್ರಹಸನ ನಡೆಯಿತು. ಸಚಿವ ಎಂಟಿಬಿ ನಾಗರಾಜ್​​​​ಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಸಾಥ್ ನೀಡಿದರು. ಇಬ್ಬರು ಸಚಿವರು ಸೇರಿ ಉತ್ತರ ನೀಡಿದರೂ ಸದಸ್ಯರು ಸಮಾಧಾನಗೊಳ್ಳಲಿಲ್ಲ, ಬಿಲ್ ವಾಪಸ್ ಗೆ ಆಗ್ರಹಿಸಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಅರಣ್ಯ ಸಚಿವ ಅರವಿಂದ ಲಿಂಬಾವಳಿ, ಈಗಾಗಲೇ ಈ ಕಾಯ್ದೆ ಜಾರಿಯಲ್ಲಿದೆ, ನಾವು ಹೊಸದಾಗಿ ತಂದಲ್ಲ. ಈಗಾಗಲೇ ಆಸ್ತಿ ತೆರಿಗೆ ಕಟ್ಟಿರುವವರಿಗೆ ರಿಯಾಯಿತಿ ಸಿಕ್ಕಿಲ್ಲ ಅವರಿಗೆ ಮುಂದಿನ ಬಾರಿ ರಿಯಾಯಿತಿ ಹೊಂದಾಣಿಕೆ ಮಾಡುವುದಷ್ಟೇ ತಿದ್ದುಪಡಿ ಮಾಡಲಾಗಿದೆ, ಒಂದು ತಿಂಗಳ ಕಾಲ ತೆರಿಗೆ ಪಾವತಿಗೆ ಸಮಯಾವಕಾಶ ವಿಸ್ತರಿಸಲಾಗಿದೆ ಇದರಲ್ಲಿ ಯಾವ ಗೊಂದಲ ಇಲ್ಲ ಎಂದು ಸ್ಪಷ್ಟೀಕರಣ ನೀಡಿದರು.

ಇಷ್ಟಾದರೂ ಪ್ರತಿಪಕ್ಷ ಸದಸ್ಯರು ಪಟ್ಟುಸಡಿಲಿಸದೇ ವಾಗ್ವಾದ ನಡೆಸಿದರು. ಇದರ ನಡುವೆ ಸಭಾಪತಿ ಪ್ರಾಣೇಶ್ ವಿಧೇಯಕದ ಪರ್ಯಾಲೋಚನೆಗೆ ಅವಕಾಶ ನೀಡಿದರು. ಇದನ್ನು ಖಂಡಿಸಿದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಭಾತ್ಯಾಗ ಮಾಡಿದರು‌.

ನಂತರ ಧ್ವನಿ ಮತದ ಮೂಲಕ ವಿಧೇಯಕಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿತು. ನಂತರ ಕರ್ನಾಟಕ ಪೌರಸಭೆಗಳ ಎರಡನೇ ತಿದ್ದುಪಡಿ ವಿಧೇಯಕ 2021 ವನ್ನು ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದ್ದರಿಂದ ಯಾವುದೇ‌ ಚರ್ಚೆ ಇಲ್ಲದೇ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.

ನಂತರ ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕ 2021ನ್ನು ಸಚಿವ ಬೈರತಿ ಬಸವರಾಜ್ ಮಂಡಿಸಿದರು.

ನಂತರ ವಿಧೇಯಕದ ಮೇಲೆ ಸುದೀರ್ಘ ಚರ್ಚೆ ನಡೆಸಲಾಯಿತು. ವಿಧೇಯಕಕ್ಕೆ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿ ಮೂರು ವರ್ಷಕ್ಕೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಬೇಕಿತ್ತು, ಈಗ ಪ್ರತಿ ವರ್ಷ ಪರಿಷ್ಕರಣೆ ಮಾಡುವ ಅಂಶವಿದೆ ಇದು ಮಾರಕವಾದ ಬಿಲ್ ಆಗಿದೆ ಹಾಗಾಗಿ ಬಿಲ್ ವಾಪಸ್ ಪಡೆಯುವಂತೆ ಆಗ್ರಹಿಸಿದರು.

ಸಿಎಂ ಇಬ್ರಾಹಿಂ ಮಾತನಾಡಿ, ಎಲ್ಲದಕ್ಕೂ ಕೇಂದ್ರದ ಕಡೆ ಬೆರಳು ಮಾಡುತ್ತೀರಾ? ನಾವು ಬಿಲ್ ಪಾಸ್ ಮಾಡದೇ ಇದ್ದಲ್ಲಿ ಕೇಂದ್ರದಿಂದ ಬರುವ ಅನುದಾನ ಬರಲ್ಲ ಎನ್ನುತ್ತೀರಾ ಹಾಗಾದರೆ ಜಿಎಸ್​ಟಿ ಬಂತಾ ಎಂದು  ಕಿಡಿಕಾರಿದರು. ಸಚಿವರು ಹಾಗೂ ಇಬ್ರಾಹಿಂ ನಡುವೆ ತೀವ್ರ ಮಾತಿನ ಚಕುಮಕಿ ನಡೆಯಿತು.

ನಂತರ ಚರ್ಚೆಗೆ ಉತ್ತರ ನೀಡಿದ ಸಚಿವ ಬೈರತಿ ಬಸವರಾಜ್, ಈ ಹಿಂದೆ ಮೂರು ವರ್ಷಕ್ಕೆ ಶೇ.15 ರಷ್ಟು ತೆರಿಗೆ ಹೆಚ್ಚಳ ಮಾಡಲಾಗುತ್ತಿತ್ತು. ಆದರೆ, ಈಗ ಪ್ರತಿ ವರ್ಷ ಶೇ.3 ರಷ್ಟು ಹೆಚ್ಚಳಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಂದೇ ಬಾರಿ ಹೆಚ್ಚು ಹೊರೆ ಹಾಕುವ ಬದಲು ಪ್ರತಿ ವರ್ಷ ಹಂತ ಹಂತವಾಗಿ ತೆರಿಗೆ ಹೆಚ್ಚಳ ಮಾಡಲಾಗುತ್ತಿದೆ ಇದರಿಂದ ಜನರಿಗೆ ತೊಂದರೆಯಾಗುವುದಿಲ್ಲ ಹಾಗಾಗಿ ವಿಧೇಯಕವನ್ನು ಅಂಗೀಕರಿಸಬೇಕೆಂದು ಮನವಿ ಮಾಡಿದರು. ನಂತರ ಧ್ವನಿಮತದ ಮೂಲಕ ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕ 2021 ನ್ನು ವಿಧಾನ ಪರಿಷತ್ ಅಂಗೀಕರಿಸಿತು.