ಬಾಲನ್ಯಾಯ ಕಾಯ್ದೆ ಪ್ರಗತಿ ಪರಿಶೀಲನಾ ಸಭೆ

0

ಮಕ್ಕಳ ರಕ್ಷಣೆಯ ಕುರಿತು ಹೆಚ್ಚಿನ ಪ್ರಚಾರ

ಕೈಗೊಳ್ಳಬೇಕು: ಜಿಲ್ಲಾಧಿಕಾರಿ ಎಂ.ಜಿ. ಹೀರೆಮಠ

ಬೆಳಗಾವಿ ಫೆ.10: ಬಾಲ್ಯ ವಿವಾಹ ನಿಷೇಧ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ನೋಂದಣಿ ಮಾಡಿಸುವುದು ಹಾಗೂ ಮಕ್ಕಳ ರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಜಿ. ಹೀರೆಮಠ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಬುಧವಾರ (ಫೆ.10) ನಡೆದ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಬಾಲಕಿಯರನ್ನು ರಕ್ಷಣೆ ಮಾಡುವಲ್ಲಿ ಸರಿಯಾಗಿ ಪೂರ್ವ ತಯಾರಿ ಮಾಡಿಕೊಳ್ಳಬೇಕು ಹಾಗೂ ಸಾಮೂಹಿಕ ವಿವಾಹಗಳು ನಡೆಯುವ ಸ್ಥಳಗಳಿಗೆ ಹೋಗಿ ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜನಜಂಗುಳಿ ಪ್ರದೇಶಗಳಲ್ಲಿ ಕಂಡು ಬರುವ ಭಿಕ್ಷಾಟನೆ ಮಾಡುವ, ಅನಾಥ ಮಕ್ಕಳ ಬಗ್ಗೆ ಮಾಹಿತಿ ಪಡೆದು ರಕ್ಷಿಸಿ, ಮಕ್ಕಳ ವಸತಿ ಕೇಂದ್ರಗಳಿಗೆ ದಾಖಲಿಸಬೇಕು ಎಂದು ತಿಳಿಸಿದರು.
ಬಾಲ್ಯವಿವಾಹಗಳು ಹೆಚ್ಚಾಗಿರುವ ಜಿಲ್ಲೆಗಳ ಶ್ರೇಣಿಯಲ್ಲಿ ಬೆಳಗಾವಿ 3 ನೇ ಸ್ಥಾನದಲ್ಲಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡು ಕಾರ್ಯನಿರ್ವಹಿಸಲು ಸೂಚಿಸಿದರು.

ಲೈಂಗಿಕ ದೌರ್ಜನ್ಯ ಮತ್ತು ಬಾಲ್ಯವಿವಾಹ ತಡೆಗಟ್ಟಲು ಜಿಲ್ಲಾ ಆಡಳಿತದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಾದ ಭಾರತಿ ವಾಳವೇಕರ್ ಅವರು ಬಾಲ್ಯವಿವಾಹ ಮತ್ತು ಮಕ್ಕಳ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಇರುವ ಕಾಯಿದೆಗಳ ಬಗ್ಗೆ ಮಾಹಿತಿ ನೀಡಿದರು. ಇನ್ನೋರ್ವ ಸದಸ್ಯರಾದ ಅಶೋಕ ಯರಗಟ್ಟಿ ಮಾತನಾಡಿ,ಇದುವರೆಗೆ ಜಿಲ್ಲೆಯಲ್ಲಿ 115 ಬಾಲ್ಯವಿವಾಹಗಳು ಬೆಳಕಿಗೆ ಬಂದಿದ್ದು, ಅವುಗಳಲ್ಲಿ 108 ಬಾಲ್ಯವಿವಾಹಗಳನ್ನು ತಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಆಪ್ತ ಸಮಾಲೋಚನೆ ಅಗತ್ಯವಿರುವ ಮಕ್ಕಳಿಗಾಗಿ ಉಚಿತ ಟೆಲಿ-ಕೌನ್ಸ್‍ಲಿಂಗ್ ಸೌಲಭ್ಯ ನೀಡಲು 14499 ಟೋಲ್ ಫ್ರೀ ಸಂಖ್ಯೆಯನ್ನು ಭಿತ್ತಿಚಿತ್ರದ ಮೂಲಕ ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.///