ಜೀವ ಬಲಿ ಪಡೆಯಿತು ಪರವಾನಿಗೆ ಇಲ್ಲದ ಪೈಪ್ ಲೈನ್ ಚರಂಡಿ*

0

ಅಥಣಿ ತಾಲೂಕ ಸಂಬರಗಿ: ಪೈಪ್ ಲೈನ್ ಅಳವಡಿಸಲು ತೆಗೆದ ಚರಂಡಿಗೆ ಬೈಕ್ ನುಗ್ಗಿ ಅಪಘಾತ ಸಂಭವಿಸಿ ಸೋಮವಾರ ತಡರಾತ್ರಿ ಸಂಬರಗಿ ಗ್ರಾಮದ ಹಿರಿಯ ಮುಖಂಡ ಪ್ರಧಾನಿ ಸುಬ್ರಾವ ಫೋಂಡೆ ನಿಧನರಾಗಿದ್ದಾರೆ.


ಸೋಮವಾರ ರಾತ್ರಿ 8ಗಂಟೆಯ ಹೊತ್ತಿಗೆ ಆಜೂರ ಗ್ರಾಮದಿಂದ ಸಂಬರಗಿಗೆ ಬರುವಾಗ ಆಜೂರ ಗ್ರಾಮದ ಮುಖ್ಯ ರಸ್ತೆಯ ಮಧ್ಯಭಾಗದಲ್ಲಿ ಅಲನಗೌಡ ಪಾಟೀಲ ತೆಗೆದಿದ್ದ ಆಳವಾದ ಚರಂಡಿಗೆ ಬೈಕ್ ನುಗ್ಗಿ ಮೂಗಿನಿಂದ ರಕ್ತಸ್ರಾವ ತಾಳಲಾರದೆ ಹಿರಿಯ ಮುಖಂಡ ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ.

ಸಂಬರಗಿ ಹಾಗೂ ಆಜೂರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯನ್ನೇ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ಹಾಗೂ ಲೋಕೋಪಯೋಗಿ ಇಲಾಖೆಯ ಪರವಾನಿಗೆ ಪಡೆಯದೆ ಆಜೂರ ಗ್ರಾಮದ ಅಲನಗೌಡ ಮುರಿಗೆಪ್ಪ ಪಾಟೀಲ ಎಂಬುವವರು ಬೇಜವಾಬ್ದಾರಿ ತೋರಿ ತಮ್ಮ ಜಮೀನಿನಲ್ಲಿ ಪೈಪ್ ಲೈನ್ ಅಳವಡಿಸಲು ಜೆಸಿಬಿ ಮುಖಾಂತರ ಸುಮಾರು 6ಅಡಿ ಚರಂಡಿಯನ್ನು ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುವ ಮುಖ್ಯ ರಸ್ತೆಯನ್ನೇ ಸಂಪೂರ್ಣವಾಗಿ ಅಗೆದ ಪರಿಣಾಮ‌ ದಾರುಣ ಅಪಘಾತ ಸಂಭವಿಸಿದೆ.


ಮೂರು ದಿನಗಳ ಹಿಂದೆಯೇ ಆಳವಾಗಿ ಅಗೆದಿದ್ದ‌ ರಸ್ತೆಯ ಚರಂಡಿಯನ್ನು ಆಲನಗೌಡ ಪಾಟೀಲ ತನ್ನ ಹೊಣೆಗೇಡಿತನ ಪ್ರದರ್ಶಿಸಿ ಮುಚ್ಚಿರಲಿಲ್ಲ ಇದರಿಂದ ಸಾರ್ವಜನಿಕರು ಶಾಲಾ ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದಲ್ಲದೆ ಶಾಲಾ ವಾಹನದಿಂದ ವಿದ್ಯಾರ್ಥಿಗಳನ್ನು ಕೆಳಕ್ಕಿಳಿಸಿ ಚರಂಡಿಯನ್ನು ದಾಟಿಸಲು ವಾಹನ ಚಾಲಕ ಹರಸಾಹಸ ಪಡಬೇಕಾಗುವ ಸ್ಥಿತಿ ನಿರ್ಮಾಣವಾಗಿತ್ತು ಇದೆಲ್ಲ ಗೊತ್ತಿದ್ದರೂ ಕೂಡ ಚರಂಡಿ ತೋಡಿದ ಪಾಟೀಲ ರಸ್ತೆ ಮುಚ್ಚಲು ಉದ್ದಟತನ ತೋರಿಸಿದ್ದನು .

ಸಾಮಾನ್ಯವಾಗಿ ಯಾರೇ ಆಗಲಿ ಸರ್ಕಾರಿ ಇಲಾಖೆಯ ವ್ಯಾಪ್ತಿಗೆ ಬರುವ ಯಾವುದೇ ರಸ್ತೆಗಳನ್ನು ಅಗೆಯುವ ಮೊದಲು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ರಸ್ತೆ ಅಗೆಯಬೇಕು ಆದರೆ ಅಲನಗೌಡ ಮಾತ್ರ ಇದಕ್ಯಾವುದಕ್ಕೂ ಸೊಪ್ಪು ಹಾಕದೆ ನಿಯಮಗಳನ್ನು ಗಾಳಿಗೆ ತೂರಿ ರಸ್ತೆಯನ್ನು ಅಗೆದು ಮುಚ್ಚದಿರುವ ಪರಿಣಾಮ ಅಮಾಯಕ ಜೀವದ ಜೊತೆ ಚೆಲ್ಲಾಟ ಆಡಿ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪರಾರಿಯಾಗಿದ್ದಾನೆ.

ಅಲ್ಲದೆ ಸರ್ಕಾರಿ ಇಲಾಖೆಗಳನ್ನು ಕಡೆಗಣಿಸಿ ಹೀಗೆ ಅನಧಿಕೃತವಾಗಿ ರಸ್ತೆ ಅಗೆಯುವ ಬೇಜವಾಬ್ದಾರಿ ಪುಂಡರಿಗೆ ಇದೊಂದು ಪಾಠವಾಗಬೇಕೆಂಬ ಆಕ್ರೋಶದ ಮಾತುಗಳು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿವೆ.

ಸಾರ್ವಜನಿಕರ ಜೀವ ಲೆಕ್ಕಿಸದೆ ಉದ್ದಟತನ ತೋರಿಸಿದ್ದಲ್ಲದೆ ಹಿರಿಯ ಜೀವದ ಸಾವಿಗೆ ನೇರವಾಗಿ ಕಾರಣವಾಗಿರುವ ಪಾಟೀಲನಿಗೆ ಪಾಠ ಕಲಿಸಬೇಕೆಂದು ಹಾಗೂ
ಈ ಘಟನೆಯನ್ನು ಉಗ್ರವಾಗಿ ಖಂಡಿಸಿರುವ ಗ್ರಾಮಸ್ಥರು ಹಾಗೂ ಕುಟಂಬ‌ಸ್ಥರು ತಮ್ಮ ಬೇಜವಾಬ್ದಾರಿಯಿಂದ ಹಿರಿಯ ಜೀವದ

ಸಾವಿಗೆ ಕಾರಣನಾದವರಿಗೆ ಪಾರದರ್ಶಕ ತನಿಖೆ ಮಾಡುವ ಮೂಲಕ ತಕ್ಕ ಶಿಕ್ಷೆನೀಡಲಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.