ತಾಕತ್ತಿದ್ದರೆ ಸ್ವತಂತ್ರ ಪಕ್ಷ ಕಟ್ಟಿ, ತಾವು ಸೇರಿದಂತೆ 5 ಸ್ಥಾನಗಳನ್ನು ಗೆದ್ದು ತೋರಿಸಿ, :ಮಾಜಿ ಸಿಎಂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು

0

ಬೆಂಗಳೂರು :  ಸಿದ್ದರಾಮಯ್ಯ ತಾಕತ್ತಿದ್ದರೆ ಸ್ವತಂತ್ರ ಪಕ್ಷ ಕಟ್ಟಿ, ತಾವು ಸೇರಿದಂತೆ 5 ಸ್ಥಾನಗಳನ್ನು ಗೆದ್ದು ತೋರಿಸಿ, ಆ ಮೇಲೆ ಜೆಡಿಎಸ್ ನಾಯಕತ್ವದ ಬಗ್ಗೆ ಮಾತನಾಡಿ ಅಂತಾ ಮಾಜಿ ಸಿಎಂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ನನ್ನ ಸವಾಲು ಸ್ವೀಕರಿಸಲಾಗದ ಸಿದ್ದರಾಮಯ್ಯ, ಜೆಡಿಎಸ್ ಅನ್ನು ಟೀಕಿಸುವುದರಲ್ಲೇ ತಮ್ಮ ಶಕ್ತಿಯ ಪರೀಕ್ಷೆ ಮಾಡಿಕೊಳ್ಳುತ್ತಿರುವಂತಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸುವುದಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ‌. ಆದರೆ, ಬೇರೆ ಪಕ್ಷಗಳಿಗೆ ಬೆಂಬಲ ನೀಡುತ್ತೇವೆ ಎಂದೇನಾದರೂ ಹೇಳಿದ್ದಾರಾ? ಉಪಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡಿದ ಇತಿಹಾಸ ಇರುವುದು ಜೆಡಿಎಸ್ ಗಲ್ಲ, ತಮಗೆ? 2008ರಲ್ಲಿ ನಡೆದ ಆಪರೇಷನ್ ಕಮಲದ ಉಪಚುನಾವಣೆಗಳಲ್ಲಿ ನೀವು ಮಾಡಿದ ಕುತಂತ್ರಗಳನ್ನು ನೆನಪಿಸಲೇ? ಎಂದು ಸವಾಲು ಹಾಕಿದ್ದಾರೆ.

ಜೆಡಿಎಸ್ ಕಣದಿಂದ ಹಿಂದೆ ಸರಿಯುವುದನ್ನು ಗೇಲಿ ಮಾಡುವ ಮುನ್ನ ಸಿದ್ದರಾಮಯ್ಯರಿಗೆ ಗುಂಡ್ಲುಪೇಟೆ, ನಂಜನಗೂಡು ನೆನಪಾಗಬೇಕಿತ್ತು? ಅಂದು ದೇವೇಗೌಡರು ಜಾತ್ಯತೀತ ನಿಲುವಿಗೆ ಕಟ್ಟುಬಿದ್ದು ಕಾಂಗ್ರೆಸ್ ಬೆಂಬಲಿಸಿದ್ದರು. ಆ ಕ್ಷೇತ್ರಗಳಲ್ಲಿ ಜೆಡಿಎಸ್ ಗೆ ಸಾಕಷ್ಟು ಬಲವಿತ್ತು. ನಂಜನಗೂಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಜೆಡಿಎಸ್ ನವರಾಗಿದ್ದರು.

ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಗೆ ಇರುವ ಶಕ್ತಿ ಮತ್ತು ಸಾಮರ್ಥ್ಯ ಪ್ರದರ್ಶನಕ್ಕೆ ಇನ್ನೂ ಸಮಯವಿದೆ ವೇದಿಕೆಯೂ ಸಿಗಲಿದೆ. ಆಗ ಸಿದ್ದರಾಮಯ್ಯನವರು ನಮ್ಮ ಜೊತೆ ಚರ್ಚೆಗೆ, ಸೆಣಸಾಟಕ್ಕೆ ಬರಲಿ. ಒಂದುವೇಳೆ ಅವರೇ ಒಂದು ಪಕ್ಷವನ್ನೇನಾದರೂ ಕಟ್ಟಿದರೆ ಅದಕ್ಕೂ ಜೆಡಿಎಸ್ ನ ಸಾಮರ್ಥ್ಯ ತೋರಿಸುವ ಕೆಲಸ ಮಾಡೋಣವಂತೆ‌. ಅಲ್ಲಿಯವರೆಗೆ ಅವರು ತಾಳಲಿ ಎಂದಿದ್ದಾರೆ.