ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಸೂಚನೆ : ಹೊರಟ್ಟಿ

0

ಹುಬ್ಬಳ್ಳಿ : ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಹಾಗೂ ಸರ್ಕಾರ ನಿರ್ಧರಿಸಿರುವ ರಾಜ್ಯ ಮಟ್ಟದ ಕಚೇರಿಗಳನ್ನು ಸುವರ್ಣ ಸೌಧಕ್ಕೆ ಸ್ಥಳಾಂತರಿಸಲು ಸೂಚಿಸುವುದಾಗಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಸಭಾಪತಿಯಾಗಿ ಮೊದಲ ಬಾರಿಗೆ ಆಗಮಿಸಿದ ಬಸವರಾಜ ಹೊರಟ್ಟಿ ಅವರನ್ನು ನಗರದ ಹೊರ ವಲಯ ಗಬ್ಬೂರು ವೃತ್ತದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಜನರಿಗಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಮಾಧ್ಯಮಗಳಿಗೆ ನಿರ್ಬಂಧ ಸರಿಯಲ್ಲ ಎಂದರು.

40  ವರ್ಷಗಳ ಹಿಂದಿನ ಮಾದರಿಯಲ್ಲಿ ವಿಧಾನಪರಿಷತ್ ಕಲಾಪ ನಡೆಸುತ್ತೇನೆ. ಹಿಂದೆ ಹೊರಟ್ಟಿ ಅಂತ ಒಬ್ಬರು ಸಭಾಪತಿಗಳಿದ್ದರು ಎಂದು ಮುಂದಿನ ಜನಾಂಗ ನೆನಪಿಟ್ಟುಕೊಳ್ಳುವ ಹಾಗೆ ಮಾದರಿಯಾಗಿ ಕೆಲಸ ನಿರ್ವಹಿಸುವೆ  ಎಂದು ತಿಳಿಸಿದರು.

ಮೇಲ್ಮನೆ ಸೋತವರ ಆಶ್ರಯ ತಾಣವಾಗಬಾರದು. ಆದರೆ ಇಂದಿನ ರಾಜಕೀಯದಲ್ಲಿ ಇದು ಆಗಿದೆ. ಡಿಸೆಂಬರ್ 15 ರಂದು ನಡೆದ ಘಟನೆಯನ್ನು ಮರೆಯುತ್ತೇವೆ. ಅಂತಹ ಘಟನೆ ಮರುಕಳಿಸದಂತೆ ಮೇಲ್ಮನೆಯ ಕಲಾಪ ನಡೆಯುತ್ತದೆ. ಸದನದ ಹೆಡ್ ಮಾಸ್ತರ್ ಆಗಿ ಕಾರ್ಯ ನಿರ್ವಹಿಸುತ್ತೇನೆ. ಸದನ ಹೇಗೆ ನಡೆಯಬೇಕು ಎನ್ನುವುದರ ಕುರಿತು ಪ್ರತಿ ವಾರ ಎಲ್ಲಾ ಪಕ್ಷದಿಂದ ಐವರು ಸದಸ್ಯರನ್ನು ಕರೆದು ಚರ್ಚಿಸುತ್ತೇನೆ ಎಂದು ಹೇಳಿದರು.