ಹುಬ್ಬೇರಿಸುವ ಕಾರಣಕ್ಕೆ ಒಂದು ಕೊಲೆ

0

ಚಿಕ್ಕೋಡಿ(ಫೆ.12):  ಜಗತ್ತಲ್ಲಿ ಎಂತೆಂಥದ್ದೋ ವಿಷಯಕ್ಕೆ ಕಚ್ಚಾಟ ಹೊಡೆದಾಟ ಬಡಿದಾಟ ಕೊಲೆ ನಡೆಯುತ್ತಲೆ ಇರುತ್ತವೆ ಆದರೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೈನಾಪುರ ಗ್ರಾಮದಲ್ಲಿ ಮಾತ್ರ ಎಲ್ಲರೂ ಹುಬ್ಬೇರಿಸುವ ಕಾರಣಕ್ಕೆ ಒಂದು ಕೊಲೆ ನಡೆದು ಹೋಗಿದೆ. ಕೊಲೆ ನಡೆದದ್ದು ಬೇರಾವುದೋ ವಿಷಯಕ್ಕೆ ಅಲ್ಲ, ಕೇವಲ ನೈಂಟಿ ಎಣ್ಣೆಗೋಸ್ಕರ ಅಂದ್ರೆ ನೀವು ನಂಬಲೇಬೇಕು. ಅಷ್ಟು ಎಣ್ಣೆಗಾಗಿ ಕೊಲೆಯಾಗಿದ್ದು ಯಾರು ಅಂತೀರಾ? ಆ ವ್ಯಕ್ತಿ ಹೆಸರು ಸಂಜು ಬಸಪ್ಪ ಗರಬುಡೆ ಅಂತ. ಸಂಜು ಊರಲ್ಲಿ ಯಾರ ಉಸಾಬರಿಗೂ ಹೋದವನಲ್ಲ. ತಾನಾಯ್ತು ತನ್ನ ಸ್ನೇಹ ಬಳಗವಾಯ್ತು, ತನ್ನ ಎಣ್ಣೆ ಆಯ್ತು ಅಂತ ಸುಮ್ಮನೆ ಇರುತ್ತಿದ್ದ ವ್ಯಕ್ತಿ. ಆದರೆ ಇದ್ದಕ್ಕಿದ್ದ ಹಾಗೆ ಸಂಜು ನಿನ್ನೆ ಮುಂಜಾನೆ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಹೌದು, ಸಂಜು ಯಾರ ತಂಟೆಗೂ ಹೋಗದ ಸಾದಾ ಸೀದಾ ಮನುಷ್ಯ. ತಾನಾಯ್ತು ತನ್ನ ರಾಮರಸದ ಪ್ರಪಂಚವಾಯ್ತು ಅಂತ ಸದಾ ಎಣ್ಣೇಲಿ ತೇಲಿ ಹೋಗ್ತಿದ್ದ. ಊರ ಹೊರಗಿನ ಮಡ್ಡಿಯ ಮೇಲೆ ಗೆಳೆಯರನ್ನು ಕರೆದುಕೊಂಡು ದಿನ ಎಣ್ಣೆ ಪಾರ್ಟಿ ಮಾಡೋದು ಸಂಜುಗೆ ಮಾಮೂಲಾಗಿ ಬಿಟ್ಟಿತ್ತು‌. ಹೀಗಿರುವಾಗ ಇದೇ 9 ನೇ ತಾರೀಖು ಸಂಜೆ ಸಂಜು ತನ್ನ ಮಗನಿಗೆ ತನ್ನ ಗೆಳೆಯನ ನಂಬರ್​​ನಿಂದ ಕಾಲ್ ಮಾಡಿ ಹೊಲದಲ್ಲಿದ್ದ ಟ್ರಾಕ್ಟರ್ ಮನೆಗೆ ತರೋಕೆ ಹೇಳಿದ್ದಾನೆ. ಮಗ ಆಯ್ತು ಅಂತ ತಲೆ ಆಡಿಸಿದ್ದಾನೆ. ಆದರೆ ಆ ದಿನ ರಾತ್ರಿ ಸಂಜು ಮನೆಗೆ ಬಂದಿಲ್ಲ‌. ಸಂಜು ಫೋನ್ ಮಾಡಿದ್ದ ಗೆಳೆಯನ ನಂಬರಿಗೆ ಪೋನ್ ಮಾಡಿದರೆ ಆ ಕಡೆಯಿಂದ ಕಾಲ್ ರಿಸೀವ್ ಕೂಡ ಮಾಡಿರಲಿಲ್ಲ.ಹೀಗಾಗಿ ಗಲಿಬಿಲಿಗೊಂಡಿರುವಾಗಲೇ ಸಂಜಯ್ ಮಗ ಸುಖೇಶ್ ಫೋನ್​​ಗೆ 10 ನೇ ತಾರೀಖು ಬೆಳಗ್ಗೆ 9 ಗಂಟೆಗೆ ಒಂದು ಫೋನ್ ಬಂದಿದೆ. ನಿಮ್ಮ ತಂದೆಯ ಶವ ಬಾವಿಯಲ್ಲಿ ತೇಲ್ತಿದೆ ಅಂತ ಆ ಕಡೆಯಿಂದ ಹೇಳಿದ್ದಾರೆ. ಸ್ಥಳಕ್ಕೆ ಹೋಗಿ ನೋಡಿದಾಗ ಸಂಜು ಅಲ್ಲಿ ಶವವಾಗಿ ತೇಲ್ತಿದ್ರು ಅನ್ನೋದು ಸಂಜು ಮಗ ಸುಖೇಸ್ ಮಾತು.ಊರಿನಲ್ಲಿ ಅಥವಾ ಮನೇಲಿ ಯಾರೊಂದಿಗೂ ತಂಟೆ ತಕರಾರು ಮಾಡಿಕೊಳ್ಳದ ಸಂಜು 15 ದಿನಗಳ ಹಿಂದಷ್ಟೆ ಸ್ನೇಹಿತರೊಂದಿಗೆ ಎಣ್ಣೆ ವಿಚಾರವಾಗಿಯೇ ಜಗಳವಾಡಿದ್ದನಂತೆ. ಹೀಗಾಗಿ ಈ ಕೊಲೆ ಎಣ್ಣೆ ವಿಚಾರಕ್ಕೆ ನಡೆದಿರಬಹದು ಎಂಬ ಗುಲ್ಲು ಊರ ತುಂಬ ಹಬ್ಬಿದೆ‌. ಇತ್ತ ಸಂಜು ಮಗ ಸುಖೇಶ ಕೂಡ ತಂದೆಯದು ಸಹಜ ಸಾವಲ್ಲ, ಕೊಲೆ ಅಂತ ಚಿಕ್ಕೋಡಿ ಠಾಣೆ ಮೆಟ್ಟಿಲೇರಿದ್ದಾನೆ.ಸದ್ಯ ಚಿಕ್ಕೋಡಿ ಪೊಲೀಸರು ಅಂದು ಸಂಜಯ್ ಜತೆ ಪಾರ್ಟಿ ಮಾಡಿದ ಆಸಾಮಿಗಳನ್ನು ಸ್ಟೇಷನ್​​ಗೆ ಕರೆಸಿ ಡ್ರಿಲ್ ನಡೆಸಿದ್ದು ತನಿಖೆಯ ನಂತರ ಇನ್ನಷ್ಟು ಸತ್ಯಾಂಶ ಹೊರಬರಬೇಕಿದೆ.