ಆಲಮಟ್ಟಿ ರಾಷ್ಟ್ರೀಯ ಯೋಜನೆ ಘೋಷಿಸುವ ನಿಟ್ಟಿನಲ್ಲಿ ಸತತವಾಗಿ ಪ್ರಯತ್ನಿಸುತ್ತಿದ್ದೇವೆ..ಸಚಿವ ರಮೇಶ ಜಾರಕಿಹೊಳಿ

0

ಭದ್ರಾ ಯೋಜನೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸುವಲ್ಲಿ ಬಹುತೇಕ ಅಂತಿಮವಾಗಿದೆ. ಅದೇ ರೀತಿ ಆಲಮಟ್ಟಿ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಘೋಷಣೆ ಮಾಡುವ ನಿಟ್ಟಿನಲ್ಲಿ ಸತತವಾಗಿ ಪ್ರಯತ್ನಿಸುತ್ತಿದ್ದೇವೆ. ಇದು ಸಾಧ್ಯ ಆದ್ರೆ ನಮ್ಮ ರಾಜ್ಯದ ಐತಿಹಾಸಿಕ ಗೆಲುವು ಸಿಕ್ಕಂತೆ ಆಗುತ್ತದೆ ಎಂದು ನೀರಾವರಿ ಸಚಿವ ರಮೇಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಶನಿವಾರ ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಮೇಶ ಜಾರಕಿಹೊಳಿ ಸುಪ್ರೀಂಕೋರ್ಟ್‍ನಲ್ಲಿ ಇದಕ್ಕೆ ತಡೆಯಾಜ್ಞೆ ಇದೆ, ಇದೇ 21ರಂದು 11 ಗಂಟೆಗೆ ರಾಜ್ಯದ ಅಡ್ವೋಕೇಟ್ ಜನರಲ್, ವಕೀಲರಾದ ಮೋಹನ್ ಕಾತರಕಿ ಹಾಗೂ ಕಾನೂನು ತಜ್ಞರ ಜೊತೆ ದೆಹಲಿಯಲ್ಲಿ ಮಹತ್ವದ ಸಭೆಯಿದೆ. ಶೀಘ್ರವೇ ತಡೆಯಾಜ್ಞೆ ತೆರವುಗೊಳಿಸಿ ಹೇಗೆ ಮುಂದುವರಿಯಬೇಕು ಎಂಬುದರ ಬಗ್ಗೆ ಈ ವೇಳೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಜೆಡಿಎಸ್‍ನವರು ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡುವಂತೆ ಆಗ್ರಹಿಸಿ ಬಸವಜಯಂತಿ ದಿನ ಆಲಮಟ್ಟಿಯಿಂದ ಪಾದಯಾತ್ರೆ ಹಮ್ಮಿಕೊಂಡಿರುವ ಕುರಿತು ಮಾಧ್ಯಮಗಳು ಕೇಳಿದ್ದಕ್ಕೆ ಉತ್ತರಿಸಿದ ರಮೇಶ ಜಾರಕಿಹೊಳಿ ಇದರಲ್ಲಿ ಯಾವುದೇ ರೀತಿ ರಾಜಕೀಯ ಮಾಡುವ ಅವಶ್ಯಕತೆಯಿಲ್ಲ. ಈಗ ಘೋಷಣೆ ಮಾಡುವ ಸಾಧ್ಯತೆ ಇರುವುದನ್ನು ನೋಡಿಕೊಂಡು ಪಾದಯಾತ್ರೆ ಮಾಡುವುದು ಎರೆಕೊಳ್ಳುವವರ ಜೊತೆಗೆ ಎರೆಕೊಂಡಂತೆ ಆಗುತ್ತದೆ ಎಂದು ವ್ಯಂಗ್ಯವಾಡಿದರು.

ಇನ್ನು ಭದ್ರಾ ಯೋಜನೆ ಬಹಳ ಯೋಜನೆಯಾಗಿರುವ ಹಿನ್ನೆಲೆ ಇದರಲ್ಲಿ ಶೇ.90ರಷ್ಟು ಕೇಂದ್ರ ಸರ್ಕಾರದ ಅನುದಾನವಿದ್ರೆ ರಾಜ್ಯ ಸರ್ಕಾರದ್ದು ಶೇ.10ರಷ್ಟು ಅನುದಾನ ಇರುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆ ಹೊಸ ಯೋಜನೆಯಾಗಿದೆ. ಹೀಗಾಗಿ ಹೊಸ ಯೋಜನೆಯಲ್ಲಿ ಶೇ.60ರಷ್ಟು ಕೇಂದ್ರ ಸರ್ಕಾರದ ಅನುದಾನ, ಶೇ.40ರಷ್ಟು ರಾಜ್ಯ ಸರ್ಕಾರದ ಅನುದಾನ ಇರುತ್ತದೆ. ಇದನ್ನೂ ಹಳೆ ಯೋಜನೆಗೆ ಸೇರ್ಪಡೆ ಮಾಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.