ಮನಸ್ಸು ಮಾಡಿದರೆ ಇನ್ನು 24 ಗಂಟೆಯಲ್ಲಿ ಕಾಂಗ್ರೆಸ್ ನ 5 ಶಾಸಕರ ರಾಜೀನಾಮೆ ಕೊಡಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

0

ಬೆಳಗಾವಿ: ಮನಸ್ಸು ಮಾಡಿದರೆ ಇನ್ನು 24 ಗಂಟೆಯಲ್ಲಿ ಕಾಂಗ್ರೆಸ್ ನ 5 ಶಾಸಕರ ರಾಜೀನಾಮೆ ಕೊಡಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಗ್ರಾಮೀಣ ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಜಾರಕಿಹೊಳಿ, ಕಾಂಗ್ರೆಸ್ ನ ಮಹಾನ್ ನಾಯಕನನ್ನೇ ಬಿಜೆಪಿಗೆ ಕರೆ ತರಲಿದ್ದೇನೆ. 1-5 ಶಾಸಕರನ್ನು ಬಿಜೆಪಿಕೆ ಕರೆ ತರುತ್ತಿದ್ದೇನೆ. ಅವರ ಹೆಸರನ್ನು ಕೇಳಿದರೆ ನೀವೇ ಶಾಕ್ ಆಗಲಿದ್ದೀರಾ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಗೂ ನಮ್ಮ ನಾಯಕರೇ. ದಿನಕ್ಕೆ ಎರಡು ಬಾರಿಯಾದರೂ ನಾನು ಸಿದ್ದರಾಮಯ್ಯ ಜೊತೆ ಮಾತನಾಡುತ್ತೇನೆ. ಆದರೆ ಪಕ್ಷ ಅಂತ ಬಂದಾಗ ನಾವು ಬಿಜೆಪಿಯವರು ಎಂದು ಹೇಳಿದರು.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಉದ್ದೇಶಿಸಿ ಮಾತನಾಡಿದ ಸಚಿವ ಜಾರಕಿಹೊಳಿ, ಅಧಿಕಾರ ದುರುಪಯೋಗಪಡಿಸಿಕೊಂಡು ಮಾತನಾಡುತ್ತಿದ್ದಾರೆ. ರಾಜಕಾರಣದಲ್ಲಿ ಅನುಭವ ಬೇಕು. ಮಾತನಾಡುವಾಗ ಹುಷಾರಾಗಿ ಮಾತನಾಡಿ. ಇಲ್ಲದಿದ್ದೆ ಕಷ್ಟ ಆಗುತ್ತೆ. ಹೆಣ್ಣುಮಗಳಿದ್ದೀರಿ ದೇವರು ನಿಮಗೆ ಒಳ್ಳೆಯದು ಮಾಡಲಿ. ಚೆನ್ನಾಗಿರಿ. ಆದರೆ ಮಾತನಾಡುವಾಗ ಸ್ವಲ್ಪ ಎಚ್ಚರಿಕೆಯಿರಲಿ ಎಂದರು.

ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಕೊಡುತ್ತೇವೆ. ಆದರೆ ರಾಜಕಾರಣದಲ್ಲಿ ಅವರನ್ನು ಸೋಲಿಸುವುದೇ ನಮ್ಮ ಗುರಿ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣದಲ್ಲಿ ಬಿಜೆಪಿ ಗೆಲ್ಲಿಸಬೇಕು ಎಂದು ಜಾರಕಿಹೊಳಿ ಹೇಳಿದರು.

ಇಂದಿಗೂ ಸಿದ್ದರಾಮಯ್ಯ ದಿನಕ್ಕೆರಡು ಬಾರಿ ಮಾತನಾಡುತ್ತಾರೆ, ಅವರೇ ನಮ್ಮ ನಾಯಕ ಎಂದು ಜಲಸಂಪನ್ಮೂಲ ಸಚಿವರೂ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಕಾಂಗ್ರೆಸ್ ನ ಟಾಪ್ ಮೋಸ್ಟ್ ಮುಖಂಡರು ನನ್ನ ಸಂಪರ್ಕದಲ್ಲಿದ್ದಾರೆ. ಆದರೆ ನಾನು ಕಾಂಗ್ರೆಸ್ ಗೆ ಹೋಗುವುದಿಲ್ಲ. ಅವರನ್ನೇ ಬಿಜೆಪಿಗೆ ಕರೆತರುವ ತಯಾರಿ ನಡೆಸಿದ್ದೇನೆ. ಮನಸ್ಸು ಮಾಡಿದರೆ ಅನೇಕ ಮುಖಂಡರು, ಶಾಸಕರನ್ನು ಬಿಜೆಪಿಗೆ ತರಲಿದ್ದೇನೆ ಎಂದೂ ರಮೇಶ ಜಾರಕಿಹೊಳಿ ಹೇಳಿದರು.

ಕಾಂಗ್ರೆಸ್ ನಲ್ಲಿ 20 ವರ್ಷ ನನ್ನನ್ನು ಮೂಲೆಯಲ್ಲಿ ಕೂಡ್ರಿಸಿದ್ದರು. ಬಿಜೆಪಿಯಲ್ಲಿ ಅಮಿತ್ ಶಾನಿಂದ ಮುಖ್ಯಮಂತ್ರಿ ಯಡಿಯೂರಪ್ಪನವರೆಗೆ ಎಲ್ಲರೂ ಕರೆದು ಪ್ರೀತಿಯಿಂದ ಮಾತನಾಡಿಸುತ್ತಾರೆ. ನಾನು ಇಲ್ಲಿ ಖುಷಿಯಿಂದ ಇದ್ದೇನೆ, ನಾವು ಎಲ್ಲ 17 ಶಾಸಕರೂ ಇಲ್ಲೇ ಇರುತ್ತೇವೆ ಎಂದು ಅವರು ಹೇಳಿದರು.