ಎಲ್‌ಪಿಜಿ ಸಿಲಿಂಡರ್ ದರ 50 ರೂಪಾಯಿ ಏರಿಕೆ

0

ಹೊಸದಿಲ್ಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ರೂ. 100ರ ಗಡಿಯತ್ತ ಸಾಗುತ್ತಿರುವ ನಡುವೆಯೆ ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆಯ ಬಿಸಿಯೂ ಜನರಿಗೆ ತಟ್ಟಿದೆ. ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ ಬೆಲೆ 50 ರೂ. ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಭಾನುವಾರ 14.2 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್‌ ದರ 722 ರೂ. ಇತ್ತು. ಈಗ ಅದು 772 ರೂ.ಗೆ ಏರಿಕೆಯಾಗಿದೆ. ಫೆ.4 ರಂದು ಸಿಲಿಂಡರ್ ಬೆಲೆಯನ್ನು 25 ರೂ. ಏರಿಕೆ ಮಾಡಲಾಗಿತ್ತು. ಈಗ 10  ದಿನಗಳ ಅಂತರದಲ್ಲೇ ಮತ್ತೆ 50 ರೂ. ಏರಿಕೆ ಮಾಡಿರುವುದರಿಂದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ದೆಹಲಿಯಲ್ಲಿ 769 ರೂ., ಕೋಲ್ಕತ್ತಾ 795 ರೂ., ಮುಂಬೈ 769 ರೂ., ಚೆನ್ನೈ 785 ರೂ. ಗೆ ಸಿಲಿಂಡರ್ ದರ ಏರಿಕೆಯಾಗಿದೆ.

ಕೋವಿಡ್‌-19 ಕಾರಣದಿಂದ ಆದಾಯ ಕೊರತೆ ಎದುರಿಸುತ್ತಿರುವ ಕೇಂದ್ರ ಸರ್ಕಾರ ಗ್ರಾಹಕರಿಗೆ ಸಬ್ಸಿಡಿ ಹಣದ ನೇರ ವರ್ಗಾವಣೆಯನ್ನು ನಿಲ್ಲಿಸಿದೆ. ಈಗ ಪೂರ್ಣ ಹೊರೆಯನ್ನು ಗ್ರಾಹಕರೇ ಭರಿಸುತ್ತಿದ್ದಾರೆ.