ಫೆ.22ರಂದು ಇಂದ್ರ ಧನುಷ್ ಲಸಿಕಾ ಅಭಿಯಾನ ಎಲ್ಲ ಮಕ್ಕಳಿಗೂ ಲಸಿಕೆ ನೀಡಲು ಕ್ರಮ: ಜಿಲ್ಲಾಧಿಕಾರಿ ಹಿರೇಮಠ

0

ಬೆಳಗಾವಿ ಫೆ.15 : ಎಲ್ಲ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಲಸಿಕೆ ದೊರಕಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ, ಕಾರ್ಮಿಕ, ಮಹಿಳಾ ಮತ್ತು ಮಕ್ಕಳಅಭಿವೃದ್ಧಿ ಸೇರಿದಂತೆ ಎಲ್ಲ ಇಲಾಖೆಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಫೆ.15) ನಡೆದ ತೀವ್ರಗೊಂಡ ಮಿಷನ್ ಇಂದ್ರಧನುಷ್ 3.0 ಲಸಿಕಾ ಹಾಗೂ ಸಾರ್ವತ್ರಿಕ ಲಸಿಕಾರಣ, ಪಲ್ಸ್ ಪೆÇೀಲಿಯೊ ಕಾರ್ಯಕ್ರಮದ ಜಿಲ್ಲಾ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಸಿಕೆಯನ್ನು ಪಡೆದುಕೊಳ್ಳಲು ಅರ್ಹ ವಯೋಮಾನದ ಮಕ್ಕಳ ಪಟ್ಟಿಯನ್ನು ಸಿದ್ದಪಡಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಖಾಸಗಿ ವೈದ್ಯರು ಲಸಿಕೆಯ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ನೀಡಬೇಕೆಂದು ತಿಳಿಸಿದರು.

ಕೋವಿಡ್ ಲಸಿಕೆ-ವದಂತಿಗಳಗೆ ಕಿವಿ ಕೊಡಬೇಡಿ:
ಇದೇ ವೇಳೆ, ಕೋವಿಡ್ ಲಸಿಕೆಯ ವಿತರಣೆಯ ಬಗ್ಗೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಎಲ್ಲರೂ ಲಸಿಕೆ ತೆಗೆದುಕೊಳ್ಳಲು ಸ್ವಯಂಪ್ರೇರಣೆಯಿಂದ ಮುಂದಾಗಬೇಕು ಎಂದು ತಿಳಿಸಿದರು.

ಲಸಿಕೆ ತೆಗೆದುಕೊಂಡಾಗ ಜ್ವರ ಬರುವುದು ಸಾಮಾನ್ಯ. ಲಸಿಕೆ ತೆಗೆದುಕೊಂಡ ನಂತರ ಮದ್ಯ ಸೇವನೆಯಿಂದ ಯಾವುದೇ ಅಡ್ಡ ಪರಿಣಾಮಗಳು ಇದುವರೆಗೆ ವರದಿಯಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇಲ್ಲಿಯವರೆಗೆ ಅಂತಹ ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ ಮುಂಜಾಗ್ರತಾ ಕ್ರಮವಾಗಿ ಲಸಿಕೆ ತೆಗೆದುಕೊಂಡರೆ, ಕೋವಿಡ್ 2 ನೆಯ ಅಲೆಯನ್ನು ಎದುರಿಸಬಹುದು ಎಂದು ತಿಳಿಸಿದರು.

ಫೆ.22ರಂದು ಇಂದ್ರ ಧನುಷ್ ಲಸಿಕಾ ಅಭಿಯಾನ:
ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿಗಳಾದ ಆಯ್.ಪಿ.ಗಡಾದ ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ಸಮೀಕ್ಷೆ ಮಾಡಲಾಗಿದ್ದು, ಫೆ.22 ರಂದು ಲಸಿಕಾ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಮಕ್ಕಳು ಮತ್ತು ಗರ್ಭಣಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಹಳ್ಳಿ,ಗುಡ್ಡ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ಲಸಿಕೆ ಪಡೆದುಕೊಳ್ಳಲು ವಾಹನ ವ್ಯವಸ್ಥೆ ಮಾಡಲಾಗುವುದು.
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ವಿಶೇಷವಾಗಿ ತಾಯಂದಿರಿಗೆ ಲಸಿಕೆಗಳ ಬಗ್ಗೆ ಮಾಹಿತಿ ನೀಡಿ, ತಮ್ಮ ಮಕ್ಕಳನ್ನು ಲಸಿಕಾ ಕೇಂದ್ರಗಳಿಗೆ ಕರೆತರುವಂತೆ ಮಾಡಬೇಕು ಎಂದು ತಿಳಿಸಿದರು. ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಎಲ್ಲ ವಸತಿ ನಿಲಯಗಳಿಗೆ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

ಮೊದಲನೆಯ ಹಂತದ ಲಸಿಕೆಯನ್ನು ಪಡೆದುಕೊಂಡ ನಂತರ ಎರಡನೇಯ ಹಂತದ ಲಸಿಕೆಯ ಬಗ್ಗೆ ನಿರ್ಲಕ್ಷ್ಯ ವಹಿಸಬಾರದೆಂದು ತಿಳಿಸಿದರು. ಸರಿಯಾದ ಸಮಯದಲ್ಲಿ ಲಸಿಕೆ ಪಡೆದು 9 ಮಾರಕ ರೋಗಗಳಿಂದ ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.
ಇಟ್ಟಿಗೆ ಕೆಲಸ, ಕಲ್ಲು ಕ್ವಾರಿ ಹಾಗೂ ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಜನರ ಮಕ್ಕಳಿಗೆ ಲಸಿಕೆ ಪಡೆದುಕೊಳ್ಳಲು ಕಾರ್ಮಿಕ ಇಲಾಖೆಯು ಸಹಕಾರ ನೀಡುವಂತೆ ತಿಳಿಸಿದರು.

ಬೆಳಗಾವಿಯಲ್ಲಿ 3 ಮಿಲಿಟರಿ ಪ್ರದೇಶಗಳಿದ್ದು, 0-5 ವರ್ಷದ ಮಕ್ಕಳ ಮಾಹಿತಿ ನೀಡಿ, ಎಲ್ಲರೂ ಲಸಿಕೆ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಮಿಲಿಟರಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ಲಸಿಕಾ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಆಸಕ್ತಿಯಿಂದ ಭಾಗವಹಿಸಿ, ಸಹಕರಿಸಬೇಕೆಂದು ಡಾ.ಗಡಾದ ಮನವಿ ಮಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಸಮೀಕ್ಷಣಾಧಿಕಾರಿಗಳಾದ ಡಾ.ಸಿದ್ದಲಿಂಗಯ್ಯ, ಡಬ್ಲ್ಯೂ. ಎಚ್.ಒ. ಮತ್ತು ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆಯ ಸಮನ್ವಯ ಸಮಿತಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.