ಕಲ್ಮಡ್ಡಿ ಏತ ನೀರಾವರಿ ಕಾಮಗಾರಿಗಳ ಪರಿಶೀಲನೆ ನೀರಾವರಿ ಕಾಮಗಾರಿ ಸಕಾಲದಲ್ಲಿ ಪೂರ್ಣಗೊಳಿಸಲು ಸಚಿವ ಜೆ.ಸಿ. ಮಾಧುಸ್ವಾಮಿ ಸೂಚನೆ

0

ಬೆಳಗಾವಿ ಫೆ.15 : ಕಳೆದ ವರ್ಷದಿಂದ ಕಲ್ಮಡ್ಡಿ ಏತ ನೀರಾವರಿ ಕಾಮಗಾರಿಗಳು ಚಾಲನೆಯಲಿದ್ದು, ಸ್ಥಳೀಯ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ಆದಷ್ಟು ಬೇಗನೇ ಪೂರ್ಣಗೊಳಿಸಬೇಕು ಎಂದು ಸಣ್ಣ ನೀರಾವರಿ ಇಲಾಖೆಯ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಅಧಿಕಾರಿಗಳಿಗೆ ತಿಳಿಸಿದರು.

ಕಲ್ಮಡ್ಡಿ ಏತ ನೀರಾವರಿ ಕಾಮಗಾರಿ ಪರಿಶೀಲನೆ ಕುರಿತು ಸೋಮವಾರ (ಫೆ.15) ಗೋಕಾಕ್ ತಾಲೂಕಿನ ತಳಕಟನಾಳ ಗ್ರಾಮದ ಬಳಿಯ ನೀರಾವರಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಅವರು ಮಾತನಾಡಿದರು.
ನೀರಾವರಿಗೆ ಒಳಪಡುವ ಪ್ರದೇಶ 2300 ಹೆಕ್ಟೇರ್ ಆಗಿದ್ದು, 84 ಎಕರೆ ನೀರು ತುಂಬಿದ ಪ್ರದೇಶವಿದೆ. ಈ ಕುರಿತು ಕಂದಾಯ ಇಲಾಖೆಯಿಂದ ಸರ್ವೇ ಮಾಡಲಾಗುತ್ತಿದೆ.

ಪೈಪ್ ಲೈನ್ ಮತ್ತು ಕೆನಾಲ್ ಕಾಮಗಾರಿ ಚಾಲನೆಯಲ್ಲಿದೆ. ಇದರಿಂದ ಕೌಜಲಗಿ, ಬಿಲಕುಂದಿ, ಗೋಸಬಾಳ, ಮನ್ನಿಕೇರಿ ಹಾಗೂ ಭಗರನಾಳ ಗ್ರಾಮಗಳಿಗೆ ಅನುಕೂಲವಾಗಲಿದೆ ಎಂದು ನೀರಾವರಿ ಅಧಿಕಾರಿಗಳು ಮಾಹಿತಿ ನೀಡಿದರು.

ಏತ ನೀರಾವರಿ ಯೋಜನೆಯಿಂದ ಸುತ್ತಮುತ್ತಲಿನ ಹಳ್ಳಿಗಳ 2300 ಹೆಕ್ಟೇರ್ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆರೆ ತುಂಬುವ ಯೋಜನೆ ಮತ್ತು ಜಾಕ್ ವೇಲ್ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು ಎಂದು ಸಚಿವ ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಗ್ರಾಮಸ್ಥರು ಉಪ್ಥಿತರಿದ್ದರು.