ಪಿಎಸ್‍ಐ ಮೇಲೆ ಕ್ರಮಕ್ಕೆ ಆಗ್ರಹಿಸಿ ಕೊಡೇಕಲ್ ಪೊಲೀಸ್ ಠಾಣೆ ಎದುರು ಧರಣಿ

0

ಸುರಪುರ: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸುವುದು ಹಾಗು ವಿನಾಕಾರಣ ಹಲ್ಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ಕೊಡೇಕಲ್  ಪೊಲೀಸ್ ಠಾಣೆ ಎದುರು ಕಾರ್ಯಕರ್ತರು, ಸಾರ್ವಜನಿಕರು ನಿನ್ನೆ ಧರಣಿ ನಡೆಸಿದರು.

ಹುಣಸಗಿ ತಾಲೂಕಿನ ಕೊಡೇಕಲ್ ಪೊಲೀಸ್ ಠಾಣೆ ಎದುರು ಧರಣಿಗೆ ಕುಳಿತ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಇಲ್ಲಿಯ ಪಿಎಸ್‍ಐ ಠಾಣೆಗೆ ಬಂದಾಗಿನಿಂದಲೂ ಬಿಜೆಪಿಯವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ವಿನಾಕಾರಣ ಹಲ್ಲೆ ನಡೆಸುವುದು ಹಾಗು ಕೇಸ್ ದಾಖಲಿಸುವ ಮೂಲಕ ಕರ್ತವ್ಯ ಲೋಪ ಎಸಗುತ್ತಿದ್ದಾರೆ ಎಂದು ಕಿಡಿ ಕಾರಿದರು.

ನಮ್ಮ ಬೆಂಬಲಿಗರ ಮೇಲೆ ಹಲ್ಲೆ ನಡೆದರೂ ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳದೆ ಹಲ್ಲೆಗೊಳಗಾದವರ ಮೇಲೆಯೇ ಕೇಸ್ ದಾಖಲಿಸುವ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆಯೂ ಇದೇ ರೀತಿ ಕರ್ತವ್ಯ ಲೋಪ ಎಸಗಿದ್ದು ಕ್ರಮಕ್ಕೆ ಆಗ್ರಹಿಸಲಾಗಿತ್ತು. ಆದರೆ ಮೇಲಾಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈಗ ಮತ್ತೆ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ದೂರು ದಾಖಲಿಸಿದ್ದಾರೆ ಎಂದರು.

ನಿನ್ನೆ ರಾತ್ರಿಯವರೆಗೂ ಪಿಎಸ್‍ಐ ಮೇಲೆ ಕ್ರಮ ಕೈಗೊಳ್ಳುವ ವರೆಗೂ ಧರಣಿ   ಮುಂದುವರೆಸಿದ್ದರು. ಮುಖಂಡರಾದ ರಾಜಾ ವೇಣುಗೋಪಾಲ ನಾಯಕ, ರಾಜಾ ರೂಪಕುಮಾರ ನಾಯಕ , ರಾಜಾ ಸಂತೋಷ ನಾಯಕ ರಾಜಾ ಕುಮಾರ ನಾಯಕ, ರಾಜಾ ಸುಶಾಂತ ನಾಯಕ, ಆನಂದ ಲಕ್ಷ್ಮೀಪುರ, ಹಣಮಂತ ಕಟ್ಟಿಮನಿ, ಮಹ್ಮದ ಮೌಲಾ ಸೌದಾಗರ್, ದಾನಪ್ಪ ಕಡಿಮನಿ, ಮಲ್ಲು ಬಿಲ್ಲವ್, ಶರಣು ಕಲಬುರ್ಗಿ , ಹಾಗು ಅನೇಕ ಜನ ಮಹಿಳೆಯರು ಇದ್ದರು.