ರಾಜ್ಯಾದ್ಯಂತ ಐಟಿ ಶಾಕ್

0

ಬೆಂಗಳೂರು, ಫೆ. 17: ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬುಧವಾರ ಬೆಳಗ್ಗೆಯೇ ಐಟಿ ಇಲಾಖೆ ಅಧಿಕಾರಿಗಳು ಉದ್ಯಮಿಗಳಿಗೆ ಶಾಕ್ ನೀಡಿದ್ದಾರೆ.

ಹಲವು ಮೆಡಿಕಲ್ ಕಾಲೇಜು ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆ ಪರಿಶೀಲಿಸಿದ್ದಾರೆ.

ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ಮೆಡಿಕಲ್ ಕಾಲೇಜು, ಕುಂಬಳಗೊಡಿನ ಪ್ರತಿಷ್ಠಿತ ಬಿಜಿಎಸ್ ಶಿಕ್ಷಣ ಸಂಸ್ಥೆ, ದೇವನಹಳ್ಳಿಯ ಆಕಾಶ್ ಮೆಡಿಕಲ್ ಕಾಲೇಜು, ತುಮಕೂರಿನ ಶ್ರೀದೇವಿ ಕಾಲೇಜು, ಮಂಗಳೂರಿನ ಖ್ಯಾತ ಉದ್ಯಮಿ ಬಿ ಆರ್ ಶೆಟ್ಟಿ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲಿನ ದಾಖಲೆಗಳು, ಕಡತಗಳನ್ನು ಪರಿಶೀಲಿಸುತ್ತಿದ್ದಾರೆ.

ಮಂಗಳೂರಿನಲ್ಲಿ ಎ ಜೆ ಶೆಟ್ಟಿ ಅವರ ಬೆಂದೂರ್ ವೆಲ್ ನಲ್ಲಿರುವ ನಿವಾಸದ ಮೇಲೆ, ಎ ಜೆ ಆಸ್ಪತ್ರೆ, ಯೆನೆಪೋಯ ಆಸ್ಪತ್ರೆ ಮೇಲೆ ದಾಳಿ ನಡೆದಿದೆ.ಶ್ರೀನಿವಾಸ ಮೆಡಿಕಲ್ ಕಾಲೇಜು, ಕಣಚೂರು ಆಸ್ಪತ್ರೆ ಮೇಲೆ ಕೂಡ ದಾಳಿ ನಡೆದಿದೆ. ತುಮಕೂರು ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆದಿದ್ದು 60 ಇನ್ನೊವಾ ಕಾರಿನಲ್ಲಿ ಆಗಮಿಸಿರುವ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ. ಶ್ರೀದೇವಿ ವಿದ್ಯಾಸಂಸ್ಥೆ ಮಾಜಿ ಶಾಸಕ, ಬಿಜೆಪಿ ಮುಖಂಡ ಡಾ ಎಂ ಆರ್ ಹುಲಿನಾಯ್ಕರ್ ಅವರಿಗೆ ಸೇರಿದ್ದಾಗಿದೆ.

ಬೆಂಗಳೂರಿನ ಸಪ್ತಗಿರಿ ಮೆಡಿಕಲ್ ಕಾಲೇಜು ಮಾಲೀಕ ದಯಾನಂದ್ ಅವರ ನಿವಾಸ ಮೇಲೆ ಕೂಡ ದಾಳಿ ನಡೆದಿದೆ.
ಅಕ್ರಮ ಆಸ್ತಿ ಸಂಪಾದನೆ, ಕಪ್ಪು ಹಣ ಸಂಗ್ರಹದ ಆರೋಪವಿದ್ದು, ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟಿಗಾಗಿ ಲಕ್ಷ ಲಕ್ಷ ಸುಲಿಗೆ ನಡೆಸುತ್ತಿದ್ದಾರೆ, ಆಸ್ಪತ್ರೆಗಳಲ್ಲಿ ರೋಗಿಗಳಿಂದ ಚಿಕಿತ್ಸೆ ಹೆಸರಿನಲ್ಲಿ ಲಕ್ಷಗಟ್ಟಲೆ ಹಣ ಪೀಕಲಾಗುತ್ತಿದ್ದು ಸರಿಯಾದ ಆದಾಯ ತೆರಿಗೆ ವಿವರ ನೀಡುತ್ತಿಲ್ಲ, ತೆರಿಗೆ ಕಟ್ಟುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದ್ದು ಈ ಸಂಬಂಧ ದಾಳಿ ನಡೆದಿದೆ.