ರಾಜ್ಯದ ಗಡಿ ಹಿತಾಸಕ್ತಿಗೆ ಬದ್ದ; ಕಡಾಡಿ

0

ಬೆಳಗಾವಿ, ಫೆ. 22- ರಾಜ್ಯದ ಗಡಿ ಹಿತಾಸಕ್ತಿಗೆ ರಾಜ್ಯದ ಎಲ್ಲ ಸಂಸದರು ಬದ್ಧರಾಗಿದ್ದು, ಗಡಿಗೆ ನಾವು ಮೊದಲು ಆದ್ಯತೆ ನೀಡುತ್ತೇವೆ.. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಭರವಸೆ ನೀಡಿದರು.

ಬೆಳಗಾವಿಯಲ್ಲಿ ಸೋಮವಾರ ಹಳೆ ಜಿಪಂ ಸಭಾಂಗಣದಲ್ಲಿ ನಡೆದ ಕನ್ನಡ ಮುಖಂಡರ ಸಭೆಯಲ್ಲಿ ನಡೆದ ಕನ್ನಡ ಸಂಘಟನೆ ಮುಖಂಡರ ಸಭೆ ಯಲ್ಲಿ ಮಾತನಾಡಿದ ಅವರು, ನಿಮ್ಮ ಸಲಹೆ, ಸೂಚನೆಯನ್ನು ರಾಜ್ಯ ಹಾಗೂ ಕೇಂದ್ರ ಸರಕಾರದ ಮುಖಂಡರ ಗಮನಕ್ಕೆ ತರುವೆ. ಬೆಳಗಾವಿ ಯಲ್ಲಿ ಎಂಇಎಸ್, ಶಿವಸೇನೆಯ ಹಾವಳಿ ಕಡಿಮೆಯಾಗಿದೆ. ಸಂಸತ್ತಿನಲ್ಲಿ ಕರ್ನಾಟಕದ ಎಲ್ಲ ಸಂಸದರು ಕನ್ನಡದ ಪರ ಕೆಲಸ ಮಾಡುತ್ತೇವೆ ಎಂದು ಹೇಳಿದರು.

 

ಲೋಕಸಭೆಯಲ್ಲಿ ಶಿವಸೇನೆಯ ಸಂಸದರು ಬೆಳಗಾವಿ, ಗಡಿ ವಿಷಯದ ಕುರಿತು ಧ್ವನಿ ಎತ್ತಿದ್ದರು. ಈ ಕುರಿತು ಬೆಳಗಾವಿ ಕನ್ನಡ ಕ್ರಿಯಾ ಸಮಿತಿ ರಾಜ್ಯದ ಎಲ್ಲ ಸಂಸದರು, ರಾಜ್ಯಸಭಾ ಸದಸ್ಯರಿಗೆ ಪತ್ರ ಬರೆದಿದ್ದರು. ಅಲ್ಲದೆ ಮೊದಲು ನಿಪ್ಪಾಣಿ ಜಿಪಂ, ಬೆಳಗಾವಿ ಪಾಲಿಕೆಯಲ್ಲಿ ಎಂಇಎಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದರು. ಅದು ಈಗ ಕ್ರಮೇಣ ಕಡಿಮೆಯಾಗಿದೆ. ಸದ್ಯ ಎಂಇಎಸ್ ನ ನಾಯಕರು ರಾಷ್ಟ್ರೀಯ ಪಕ್ಷಗಳ ಜತೆಗೆ ಗುರುತಿಸಿಕೊಂಡಿದ್ದಾರೆ ಎಂದರು.

 

ಹಿರಿಯ ಪತ್ರಕರ್ತ ಮೆಹಬೂಬ್ ಮಕಾನದಾರ್ ಮಾತನಾಡಿ, ಮಹಾರಾಷ್ಟ್ರದಲ್ಲಿ ಯಾವುದೇ ಸರಕಾರ ಬಂದರೂ ಗಡಿ ವಿಷಯವಾಗಿ ವಿವಾದಾ ತ್ಮಕ ಹೇಳಿಕೆ ನೀಡುತ್ತ ಬಂದಿದೆ. ಇದು ನ್ಯಾಯಾಲಯದಲ್ಲಿರುವಾಗ ಇದಕ್ಕೆ ಕೇಂದ್ರ ಸರಕಾರ ಮಹಾರಾಷ್ಟ್ರ ಸರಕಾರದ ಮೇಲೆ ಎಚ್ಚರಿಕೆ ಸಂದೇಶ ರವಾನಿಸಬೇಕೆಂದು ಹೇಳಿದರು.

 

ಲೋಕಸಭೆಯಲ್ಲಿ ಶಿವಸೇನೆ, ಎಂಇಎಸ್ ಗಡಿ ವಿವಾದದ ಕುರಿತು ತಗಾದೆ ತೆಗೆದಾಗ ಕರ್ನಾಟಕ ಸರಕಾರ ಹಾಗೂ ಕೇಂದ್ರ ಸರಕಾರ ಕಡಿವಾಣ ಹಾಕುವ ನಿರ್ಧಾರ ಕೈಗೊಳ್ಳಬೇಕು. ಇವರ ಪುಂಡಾಡಿಕೆ ಕಡಿವಾಣ ಹಾಕಲು ಬೆಳಗಾವಿಯ ಕನ್ನಡ ಸಂಘಟನೆಯ ಮುಖಂಡರು ಸಿಎಂ ಬಳಿ ನಿಯೋಗ ಕರೆದುಕೊಂಡು ಹೋಗಲು ಮನವಿ ಮಾಡಿದರು.

 

ಗಡಿ ಭಾಗದ ವಿಚಾರದಲ್ಲಿ ಮಹಾರಾಷ್ಟ್ರ ಸರಕಾರ ಇತ್ತೀಚೆಗೆ ಕರ್ನಾಟಕ ಸರಕಾರ ಮಾಡಿದ ಅನ್ಯಾಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ ಕರ್ನಾ ಟಕ ಸರಕಾರದಿಂದ ಇಲ್ಲಿನ ಮರಾಠಿ ಭಾಗದಲ್ಲಿ ಮಾಡಿದ ಸಾಧನೆ ಹಾಗೂ ಕೊಡುಗೆಗಳ ಬಗ್ಗೆ ಪುಸ್ತಕ ಬಿಡುಗಡೆ ಮಾಡಬೇಕು. ಅಂದಾಗ ಮಾತ್ರ ಮಹಾರಾಷ್ಟ್ರ ಸರಕಾರಕ್ಕೆ ತಕ್ಕ ಪಾಠ ಕಲಿಸಲು ಸಾಧ್ಯ ಎಂದರು.

 

ಪಾಲಿಕೆ ಮಾಜಿ ಸದಸ್ಯ ರಮೇಶ ಸೋಂಟಕ್ಕಿ ಮಾತನಾಡಿ, ಗಡಿ ವಿವಾದದ ಕುರಿತು ಸುಪ್ರೀಂ ಕೋರ್ಟ್ ಗೆ ಹೋದವರೆ ಮಹಾರಾಷ್ಟ್ರದವರು ಪದೇ ಪದೇ ಈ ವಿಷಯವನ್ನು ಕೆದಕುವ ಪ್ರಯತ್ನ ಮಾಡುತ್ತಾರೆ. ಅದಕ್ಕೆ ಕಾನೂನು ಸಲಹೆ ಪಡೆದುಕೊಂಡು ಅವರಿಗೆ ಲಗಾಮು ಹಾಕುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.

 

ಬೆಳಗಾವಿ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿ, ಫೆ. 13ರಂದು ಮಹಾರಾಷ್ಟ್ರದ ಶಿವಸೇನೆಯ ಸಂಸದರು ಲೋಕ ಸಭೆಯಲ್ಲಿ ಮಹಾರಾಷ್ಟ್ರದ ಕೇಂದ್ರಾಡಳಿತ ಪ್ರದೇಶವನ್ನು ಬೆಳಗಾವಿಯನ್ನು ಮಾಡಬೇಕೆಂದು ಹೇಳಿದರು. ಆದರೆ ನಮ್ಮ ರಾಜ್ಯದ ಯಾವೊಬ್ಬ ಸಂಸದರೂ ಧ್ವನಿ ಎತ್ತದೆ ಇರುವುದು ದುರ್ದೈವದ ಸಂಗತಿ. ಗಡಿ ವಿವಾದವನ್ನು

ನ್ಯಾಯಾಲಯದಲ್ಲಿ ದಾಖಲು ಮಾಡಿದ್ದೆ ಮಹಾರಾಷ್ಟ್ರ. ಪದೇ ಪದೇ ಬೆಳಗಾವಿ, ಮಹಾರಾಷ್ಟ್ರದ ಗಡಿ ವಿವಾದ ಬಗ್ಗೆ ತಗಾದೆ ತೆಗೆಯುವ ಮಹಾರಾಷ್ಟ್ರದ ವಿರುದ್ದ ರಾಜ್ಯ ಸರಕಾರ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು.

ಕನ್ನಡ ಮುಖಂಡರಾದ ಮಹಾಂತೇಶ ರಣಗಟ್ಟಿಮಠ, ಕಸ್ತೂರಿ ಬಾವಿ, ಬಾಬು ಸಂಗೋಡಿ, ರಾಜು ಕೋಲಾ, ವಾಜೀದ ಮುಲ್ಲಾ ಇತರರು ಉಪಸ್ಥಿತರಿದ್ದರು.