ಜಿಲೆಟಿನ್ ಸ್ಫೋಟ: 5 ಜನರು ಸಾವು

0

ಚಿಕ್ಕಬಳ್ಳಾಪುರ, ಫೆ. 23- ಶಿವಮೊಗ್ಗದಲ್ಲಿ ನಡೆದ ಜಿಲೆಟಿನ್ ಸ್ಫೋಟ ದುರಂತ ಪ್ರಕರಣದ ಸಾವು, ನೋವು ಮಾಸುವ ಮುನ್ನವೇ ಮತ್ತೆ ರಾಜ್ಯದಲ್ಲಿ ಮತ್ತೊಂದು ಜಿಲೆಟಿನ್ ಸ್ಫೋಟ ಪ್ರಕರಣ ನಡೆದಿದೆ. ಕ್ವಾರಿಯಲ್ಲಿ ಜಿಲೆಟಿನ್‌ ಸ್ಪೋಟದಿಂದ ಐವರು ದಾರುಣವಾಗಿ ಸಾವನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್‌ ಹೋಬಳಿಯ ಹಿರೇನಾಗವೇಲಿ ಗ್ರಾಮದ ಬಳಿ ನಡೆದಿದೆ.

ಏಕಾಏಕಿ ಜಿಲೆಟಿನ್‌ನಿಂದಾಗಿ ಭಾರೀ ಸ್ಪೋಟ ನಡೆದಿದ್ದು ಸ್ಪೋಟದ ರಭಸಕ್ಕೆ ಮೃತ ದೇಹಗಳು ಛಿದ್ರ ಛಿದ್ರವಾಗಿದೆ. 1000 ಅಡಿ ದೂರಕ್ಕೆ ಸ್ಪೋಟದ ತೀವ್ರತೆಗೆ ಮೃತದೇಹಗಳ ಭಾಗಗಳು ಚೆಲ್ಲಾಪಿಲ್ಲಿಯಾಗಿವೆ. ಈ ಕ್ವಾರಿ ಮೇಲೆ ಪೊಲೀಸರು, ಜಿಲ್ಲಾಡಳಿತ ದಾಳಿ ನಡೆಸಿ ಅಕ್ರಮ ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿಕ್ಕಬಳ್ಳಾಪುರ ಎಸ್ಪಿ ಮಿಥುನ್‌ಕುಮಾರ್‌, ರಾತ್ರಿ ಸುಮಾರು 12.30ರಿಂದ 12.45ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಆದರೆ ಯಾವ ಬಗೆಯ ಸ್ಫೋಟಕಗಳು ಎಂಬುದು ಪತ್ತೆಯಾಗಿಲ್ಲ. ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಥಳದಲ್ಲೇ ಕ್ವಾರಿ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಸ್ಫೋಟ ನಡೆದಿದೆ.

ಗುಡಿಬಂಡೆ ನಾಗರಾಜ್, ರಾಘವೇಂದ್ರ, ಗಂಗೋಜಿರಾವ್, ಮತ್ತೋರ್ವ ಸೇರಿದಂತೆ ನಾಲ್ವರ ಒಡೆತನದ ಕ್ವಾರಿ ಇದು. ನಾಲ್ವರೂ ಭ್ರಮರ ವರ್ಷಿಣಿ ಹೆಸರಿನ ಕ್ವಾರಿ ಮಾಲೀಕರು. ಫೆಬ್ರವರಿ 7ರಂದು ಕ್ವಾರಿ ಮೇಲೆ ದಾಳಿ ನಡೆಸಿ ಅಕ್ರಮ ಸ್ಫೋಟಕ ಜಪ್ತಿ ಮಾಡಿ ಗುಡಿಬಂಡೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಲತಾ.ಆರ್, ಎಸ್ಪಿ ಮಿಥುನ್ ಕುಮಾರ್, ಎಸಿ ರಘುನಂದನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಾಲಕ ರಿಯಾಜ್‌ ಪವಾಡ ಸದೃಶವಾಗಿ ಪಾರು

ಕಲ್ಲು ಕ್ವಾರಿ ಸ್ಪೋಟ ದುರಂತ ಪ್ರಕರಣ ಸಂಬಂಧ ಸ್ಪೋಟದ ತೀವ್ರತೆಗೆ ಟಾಟಾ ಏಸ್ ವಾಹನ ಸಂಪೂರ್ಣ ಛಿದ್ರವಾಗಿದೆ.

ಬ್ರಮರವಾಸಿನಿ ಕ್ರಷರ್ ಆಂಡ್ ಕ್ವಾರಿಗೆ ಸೇರಿದ ವಾಹನವಾಗಿದ್ದು, ಚಾಲಕ ರಿಯಾಜ್‌ ಪವಾಡ ಸದೃಶವಾಗಿ ಬದುಕುಳಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ರಿಯಾಜ್‌ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

‘ಬ್ರಮರವಾಸಿನಿ ಕಲ್ಲು ಕ್ವಾರಿಯಲ್ಲಿ ಸ್ಫೋಟಕ್ಕೆ ಅನುಮತಿ ನೀಡಿಲ್ಲ. ಆದರೆ, ಅಕ್ರಮವಾಗಿ ಸ್ಫೋಟ ಮಾಡಿದ್ದಾರೆ. ಈ ಹಿಂದೆ ಕ್ವಾರಿ ಹಾಗೂ ಕ್ರಷರ್ ಮೇಲೆ ದಾಳಿ ಮಾಡಲಾಗಿತ್ತು. ದಾಳಿ ವೇಳೆ ಬಳಸಿದ್ದ ಕಂಪ್ರೇಸರ್ ಜಪ್ತಿ ಮಾಡಲಾಗಿತ್ತು. ಪೊಲೀಸರ ಕಣ್ಣು ತಪ್ಪಿಸಲು ಜಿಲೇಟಿನ್ ಕಡ್ಡಿಗಳನ್ನು ಬಚ್ಚಿಟ್ಟಿದ್ದರು. ಬಚ್ಚಿಟ್ಟಿದ್ದ ಕಡ್ಡಿಗಳನ್ನು ತೆಗೆದುಕೊಂಡು ಹೋಗಲು ಬಂದಾಗ ಘಟನೆ ನಡೆದಿದೆ’ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್‌ ಮಾಹಿತಿ ನೀಡಿದರು.

ADGP, IGP ಹೇಳಿದ್ದೇನು

ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಈ ವೇಳೆ ಮಾತನಾಡಿದ ಎಡಿಜಿಪಿ ಪ್ರತಾಪ್ ರೆಡ್ಡಿ , ಈ ಘಟನೆಯ ಹಿಂದಿರುವ ತಪ್ಪಿತಸ್ಥರ ವಿರು ದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಲ್ಲು ಕ್ವಾರೆ ಗಣಿಗಾರಿಕೆಗಳಲ್ಲಿ ಸ್ಫೋಟಕಗಳನ್ನು ಬಳಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ದಿಂದ ಹಲವು ನೀತಿ ನಿಯಮಗಳು ರೂಪುಗೊಂಡಿವೆ. ಅದರಂತೆ ಕಲ್ಲು ಕ್ವಾರೆ ಸೇರಿದಂತೆ ಗಣಿಗಾರಿಕೆಗಳಲ್ಲಿ ಸ್ಫೋಟಕಗಳನ್ನು ಬಳಸುವವರು ಸರ್ಕಾರದ ಅನುಮತಿ ಪಡೆದು ನಿಯಮಕ್ಕನುಸಾರವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಅನಧಿಕೃತ ಕ್ವಾರೆಗಳು ಕಂಡು ಬಂದರೆ ಪೊಲೀಸ್ ಇಲಾಖೆ ಕ್ರಿಮಿನಲ್ ಆಕ್ಷನ್‌ ತೆಗೆದುಕೊಳ್ಳುತ್ತದೆ ಎಂದರು.

ಇನ್ನು ರಾಜ್ಯದಲ್ಲಿ ಶಿವಮೊಗ್ಗ ಜಿಲಾಟಿನ್ ಸ್ಫೋಟ ದುರ್ಘಟನೆ ನಡೆದ ಬಳಿಕ ರಾಜ್ಯದಲ್ಲಿಯೂ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಗಳು ಮತ್ತು ಗೃಹಮಂತ್ರಿಗಳು ಸೂಚನೆ ನೀಡಿದ್ದಾರೆ. ಪೊಲೀಸ್ ಇಲಾಖೆ ವತಿಯಿಂದಲೂ ಹಲವಾರು ಕಡೆ ದಾಳಿ ನಡೆಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಎಡಿಜಿಪಿ ತಿಳಿಸಿದರು.