ಸರಕಾರಿ ಕಚೇರಿಗಳಿಗೆ ಹೊರಗುತ್ತಿಗೆ ವಾಹನ & ಚಾಲಕರನ್ನು ಬಳಸಿದರೆ ಎಚ್ಚರ:ಸರಕಾರಿ ಚಾಲಕರ ಆಕ್ರೋಶ

0

 

ಬೆಳಗಾವಿ:ಸರಕಾರಿ ಕಚೇರಿಗಳಿಗೆ ಹೊರಗುತ್ತಿಗೆ ವಾಹನ ಮತ್ತು ಚಾಲಕರನ್ನು ನೇಮಿಸಿಕೊಳ್ಳುವ ಪದ್ಧತಿ ತತಕ್ಷಣ ಕೈಬಿಡುವಂತೆ ಸರಕಾರಿ ವಾಹನ ಚಾಲಕರು ಆಗ್ರಹಿಸಿದ್ದಾರೆ.
ಇಂದು ರಾಜ್ಯ ಸರಕಾರಿ ವಾಹನ ಚಾಲಕರ ಕೇಂದ್ರ ಸಂಘ ಬೆಂಗಳೂರು ಹಾಗೂ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆದ 2020-21ರ ವಾರ್ಷಿಕ ಮಹಾಸಭೆಯಲ್ಲಿ ಚಾಲಕರು ಅಸಮಧಾನ ವ್ಯಕ್ತಪಡಿಸಿದರು.
ಸಂಘದ ರಾಜ್ಯಾಧ್ಯಕ್ಷ ಹಾಲೇಶ ಹಾಗೂ ಗೌರವಾಧ್ಯಕ್ಷ ಎನ್. ಶ್ರೀನಿವಾಸ ಮತ್ತು ಇತರ ಪದಾಧಿಕಾರಿಗಳು ಮಾತನಾಡಿ ಇಂದು ಸರಕಾರಿ ವಾಹನ ಚಾಲಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂಜರೆಯುವ ವಾತಾವರಣ ಉಂಟಾಗಿದ್ದರಿಂದ ಸರಕಾರಿ ಇಲಾಖೆಗಳಲ್ಲಿ ಹಲವು ಅನಿರೀಕ್ಷಿತ, ಚಾಲಕರಿಗೆ ಅನಾನುಕೂಲಕರ ಬದಲಾವಣೆಗಳು ಆಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಸರಕಾರಿ ಉನ್ನತ ಅಧಿಕಾರಿಗಳು ಇಂದು ಹೊರಗುತ್ತಿಗೆ ಆಧಾರದಲ್ಲಿ ವಾಹನ ಮತ್ತು ಚಾಲಕರನ್ನು ಪಡೆಯುವುದನ್ನು ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಜರಿಗೆ ಹೋಗಬೇಕಾದ 1ಲಕ್ಷ ಕಿಮೀ ಓಡಿದ ವಾಹನಗಳನ್ನೂ ಸಹ ಇಂದು ಓಡಿಸಲಾಗುತ್ತಿದೆ. ಸರಕಾರಿ ಎಲ್ಲ ಇಲಾಖೆಗಳ ಕಚೇರಿಗಳಿಗೆ ಹೊಸ ವಾಹನಗಳ ಖರೀದಿ ಆಗಲೆಬೇಕು, ಖಾಸಗಿ ವಾಹನಗಳ‌ ಮೇಲೆ ‘ಕರ್ನಾಟಕ ಸರಕಾರ’ ಬರವಣಿಗೆ ಬರೆಸಕೂಡದು ಎಂದು ಆಗ್ರಹಿಸಿದರು.
ತತಕ್ಷಣ ಸರಕಾರದ ಎಲ್ಲ ಇಲಾಖೆಗಳು, ಅರೆ ಸರಕಾರಿ ಕಚೇರಿಗಳು ಮತ್ತು ಕಾರ್ಪೋರೇಷನಗಳಲ್ಲಿ ಹೊಸ ಹೆಚ್ಚುವರಿ ಸರಕಾರಿ ಚಾಲಕರ ನೇಮಕ ಆಗಬೇಕು, ಸರಕಾರಿ ವಾಹನ ಚಾಲಕರಿಗೆ ಎಫ್ ಡಿಎ ನೌಕರರ ವೇತನ ಶ್ರೇಣಿ ಅನ್ವಯವಾಗಬೇಕು, ಅಗತ್ಯ (essential)ಸೇವೆಯಲ್ಲಿ ಬರುವ ಸರಕಾರಿ ವಾಹನ ಚಾಲಕರಿಗೆ 1 ಸಾವಿರ ಸ್ಪೆಷಲ್ ಪೇ ಹಾಗೂ ಯೂನಿಫಾರ್ಮ್ ಮೆಂಟೆನನ್ಸ್ ಗಾಗಿ 1ಸಾವಿರ ಹೆಚ್ಚುವರಿ ವೇತನ ಕೊಡಬೇಕು, ವಾರಕ್ಕೆ ಕನಿಷ್ಠ ಒಮ್ಮೆಯಾದರೂ ವಿಶ್ರಾಂತಿಗೆ ಅವಕಾಶ ನೀಡಬೇಕು, ಖಾಕಿ ಯೂನಿಫಾರ್ಮ ಬದಲು ಸಫಾರಿ ಡ್ರೆಸ್ ಕೊಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟರು.
25ಸಾವಿರ ಮೇಲ್ಪಟ್ಟು ಇದ್ದ ಸರಕಾರಿ ವಾಹನ ಚಾಲಕರ ಸಂಖ್ಯೆ ಇಂದು 5ಸಾವಿರಕ್ಕೆ ಇಳಿಯುತ್ತ ಸಾಗಿದೆ, ಸರಕಾರಿ ವಾಹನಗಳ ಸಂಖ್ಯೆ ಕಡಿಮೆ‌ ಆಗಿದೆ, ಹಳೆಯ ವಾಹನಗಳ ಬಳಕೆ ಮಾಡುವುದು ಚಾಲಕರಿಗೆ ತೀವ್ರ ಅಸಹನೆ ಹುಟ್ಟಿಸುತ್ತಿದೆ, ಸರಕಾರಿ ವಾಹನ ಚಾಲಕರನ್ನು ಬಳಸದೇ ಇಂದು ಸರಕಾರಿ ಉನ್ನತ ಅಧಿಕಾರಿಗಳು ಖಾಸಗಿ ವಾಹನ ಚಾಲಕರನ್ನು ಬಳಸುತ್ತಿರುವುದು ಸೋಜಿಗ ಹುಟ್ಟಿಸುತ್ತಿದೆ ಎಂದು ಚಾಲಕರು ಅಸಮಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಸರಕಾರಿ ವಾಹನ ಚಾಲಕರ ಸಮಸ್ಯೆಗಳನ್ನು ಆಲಿಸಲು ಉತ್ಸುಕರಾಗಿದ್ದು, ಸದ್ಯದಲ್ಲೇ ವಿಧಾನಸೌಧದ ಬ್ಯಾಂಕ್ವೇಟ್ ಹಾಲನಲ್ಲಿ ಸರಕಾರಿ ನೌಕರರ ಸಭೆ ಆಯೋಜಿಸಿ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದರು.
ಸರಕಾರಿ ಚಾಲಕರು ಇಂದು ಗ್ರುಪ್ ಡಿ ಅಲ್ಲ. ಈಗ ನಾವು ಗ್ರುಪ್ ‘ಸಿ’ ಗೆ ಮೇಲ್ದರ್ಜೆಗೆ ಏರಿಕೆಯಾಗಿದ್ದೇವೆ ಎಂಬುವುದನ್ನು ಮನಗಾಣಬೇಕು ಎಂದು ತಿಳಿವಳಿಕೆ ನೀಡಿದರು.
ಸರಕಾರಿ ವಾಹನ ಚಾಲಕರನ್ನು ಡಿ ಗ್ರುಪ್ ನೌಕರರಾಗಿ ಇಂದು ನಡೆಸಿಕೊಳ್ಳುವುದನ್ನು ಅಧಿಕಾರಿಗಳು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.
ಸರಕಾರಿ ವಾಹನ ಚಾಲಕರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ಸಂಜಯ ಎಂ. ತಳವಾರ, ಕೇಂದ್ರ ಸಂಘ ಬೆಂಗಳೂರಿನ ಕಾರ್ಯಾಧ್ಯಕ್ಷ ತಿಮ್ಮರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ, ರಾಜ್ಯ ಖಜಾಂಚಿ ಗುಣಶೇಖರ, ಜಿಲ್ಲಾ ಉಪಾಧ್ಯಕ್ಷ ಎ. ಎಚ್. ದೇವನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉದಯಕುಮಾರ ಹಿರೇಮಠ, ಜಿಲ್ಲಾ ಖಜಾಂಚಿ ರಾಮಪ್ಪ ನಾಯಿಕ, ಕಾರ್ಯಕಾರಿ ಸದಸ್ಯ ಶ್ರೀಕಾಂತ ಹಾದಿಮನಿ, ಧಾರವಾಡ ಜಿಲ್ಲಾಧ್ಯಕ್ಷ ಅಂಬಿಗೇರ, ಎಂ. ಎಂ‌ ಜೋಳದ ಇತರರು ಉಪಸ್ಥಿತರಿದ್ದರು.