ಇದು ನಾಚಿಕೆ ಸಂಗತಿ, ರಾಜ್ಯದ ಜನ ನಿಮ್ಮನ್ನು ಕ್ಷಮಿಸಲ್ಲ: ಸಿಎಂ
ವಿಧಾನಸಭೆಯಲ್ಲಿ ಗುರುವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಕ್ಷರಶಃ ಕೆಂಡಾಮಂಡಲವಾಗಿದ್ದರು. ಒಂದು ರಾಷ್ಟ್ರ ಒಂದು ಚುನಾವಣೆ ಚರ್ಚೆಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ನಡೆ ವಿರುದ್ಧ ಹರಿಹಾಯ್ದ ಅವರು, ನಿಮ್ಮ ನಡವಳಿಕೆ ನಾಚಿಕೆಗೇಡಿನ ಸಂಗತಿ, ರಾಜ್ಯದ ಜನ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಬೆಂಗಳೂರು, ಮಾ. 4-: ವಿರೋಧ ಪಕ್ಷದವರಿಗೆ ಯಾವುದರಲ್ಲೂ ನಂಬಿಕೆ ಇಲ್ಲ. ನಿಮ್ಮ ನಡವಳಿಕೆ ನಾಚಿಕೆಗೇಡಿನ ಸಂಗತಿ, ರಾಜ್ಯದ ಜನ ನಿಮ್ಮನ್ನು ಕ್ಷಮಿಸಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸದನದಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ವಿಧಾನಸಭೆ ಅಧಿವೇಶನದಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಚರ್ಚೆಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಿಎಂ ಬಿಎಸ್ವೈ, ಚರ್ಚೆಗೆ ಒಪ್ಪಿಗೆ ನೀಡಿದ್ದೀರಿ, ಯಾರು ಯಾರು ಮಾತನಾಡುತ್ತೇವೆ ಎಂಬ ಪಟ್ಟಿಯನ್ನು ಸಹ ನೀಡಿದ್ದೀರಿ. ಒಪ್ಪಿಕೊಂಡು ಈಗ ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು.
ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ಚರ್ಚೆ ಮಾಡಿ ವಿರೋಧ ಮಾಡಿ. ಆದರೆ, ಒಪ್ಪಿಕೊಂಡು ಹೀಗೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಆಡಳಿತ ದೃಷ್ಟಿಯಿಂದ ಒಂದು ರಾಷ್ಟ್ರ ಒಂದು ಚುನಾವಣಾ ಉತ್ತಮವಾಗಿದೆ. ಇದರಿಂದ ದೇಶದಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಈ ಬಗ್ಗೆ ಸವಿಸ್ತಾರವಾಗಿ ಚರ್ಚೆ ನಡೆಯಲಿ ಎಂದು ಹೇಳಿದರು.
ಒನ್ ನೇಷನ್ ಒನ್ ಎಲೆಕ್ಷನ್ಗೆ ಕಾಂಗ್ರೆಸ್ ವಿರೋಧ: ವಿಧಾನಸಭೆ ಅಧಿವೇಶನ ಆರಂಭದಲ್ಲೇ ಗದ್ದಲ !
ಈ ಬಾರಿಯ ವಿಧಾನಸಭೆ ಅಧಿವೇಶನದ ಮೊದಲ ಎರಡು ದಿನ ಒಂದು ರಾಷ್ಟ್ರ, ಒಂದು ಚುನಾವಣೆ ಚರ್ಚೆಗೆ ನಿರ್ಧರಿಸ ಲಾಗಿತ್ತು. ಆದರೆ, ಚರ್ಚೆ ಆರಂಭಕ್ಕೂ ಮೊದಲೇ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿತು. ಇದು ಆರ್ಎಸ್ಎಸ್ ಅಜೆಂಡಾ, ಪ್ರಧಾನಿ ಮೋದಿ ಸರ್ವಾಧಿಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ನಾವು ಚರ್ಚೆಗೆ ಒಪ್ಪಿಗೆ ನೀಡಿಲ್ಲ ಎಂದು ಹೇಳಿದರು.