ಅಧಿಕಾರಿಗಳಿಗೆ ಚುನಾವಣಾ ತರಬೇತಿ ನೀತಿ ಸಂಹಿತೆ ಪಾಲನೆಗೆ ಮುಂಜಾಗ್ರತಾ ಕ್ರಮ: ಜಿಲ್ಲಾಧಿಕಾರಿ ಎಂ.ಜಿ.ಹೀರೆಮಠ

0

ಬೆಳಗಾವಿ, 04 : ಜಿಲ್ಲೆಯಲ್ಲಿ ಮುಂಬರುವ ಲೋಕಸಭಾ ಉಪ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆಯ ಯಾವುದೇ ನಿಯಮಗಳ ಉಲ್ಲಂಘನೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳಾದ ಎಂ.ಜಿ.ಹಿರೇಮಠ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ (ಮಾ.04) ನಡೆದ ದಕ್ಷಿಣ ಹಾಗೂ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿಗಳ ಹಾಗೂ ವಿವಿಧ ತಂಡಗಳ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮತದಾನ ಕೇಂದ್ರದಲ್ಲಿರುವ ಕುಡಿಯುವ ನೀರಿನ ವ್ಯವಸ್ಥೆ, ವಾತಾವರಣ, ವಸತಿ ವ್ಯವಸ್ಥೆಗಳ ಬಗ್ಗೆ ಪ್ರಾಥಮಿಕ ಹಂತದ ವರದಿಯನ್ನು ಸಲ್ಲಿಸಬೇಕು. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿ, ಮತದಾನ ಕೇಂದ್ರಗಳಿಗೆ ಸಂಬಂಧಿಸಿದಂತೆ ಕುಂದು-ಕೊರತೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಚುನಾವಣಾ ತರಬೇತುದಾರರಾದ ರವಿ ಕರಲಿಂಗಣ್ಣವರ ಸೂಚಿಸಿದರು.

ಮತದಾನ ನಡೆಯವ ಸ್ಥಳದಲ್ಲಿ ಸಾರಿಗೆ ವ್ಯವಸ್ಥೆ, ಇಂಟರ್ನೆಟ್ ನ ಲಭ್ಯತೆಯ ಬಗ್ಗೆ ಗಮನ ಹರಿಸಬೇಕು. ಮುಖ್ಯವಾಗಿ ವಲಯ ಚುನಾವಣಾ ಅಧಿಕಾರಿಗಳಿಗೆ ಮತದಾರರ ಮಾಹಿತಿ ಮುಖ್ಯವಾಗಿರುತ್ತದೆ. ಮತದಾರರ ಪಟ್ಟಿಯನ್ನು ಮುಂಚಿತವಾಗಿ ಸಿದ್ಧಪಡಿಸಿಟ್ಟುಕೊಳ್ಳಬೇಕು. ವಿದ್ಯುನ್ಮಾನ ಮತಯಂತ್ರವನ್ನು ಬಳಸಿ, ಮತ ಚಲಾಯಿಸುವ ಕುರಿತು ಮತದಾರರಿಗೆ ಅಣುಕು ಪ್ರದರ್ಶನಗಳನ್ನು ತೋರಿಸಬೇಕು ಎಂದು ಅವರು ತರಬೇತುದಾರರಿಗೆ ತಿಳಿಸಿದರು.

ನೀತಿ ಸಂಹಿತೆ ಜಾರಿಯಾದ ನಂತರ ಮತದಾನದ ಕ್ಷೇತ್ರದಲ್ಲಿ ಯಾವುದೇ ರೀತಿಯ ಕಾರ್ಯಕ್ರಮಗಳು, ಸಭೆಗಳು ಜರುಗದಂತೆ ನೋಡಿಕೊಳ್ಳಬೇಕು. ಮತದಾನದ ದಿನಾಂಕ ನಿಗದಿಯಾದ ನಂತರ, 4 ದಿನ ಮುಂಚಿತವಾಗಿ ಮತದಾನಕ್ಕೆ ಬೇಕಾಗಿರುವ ಎಲ್ಲ ಪರಿಕರಗಳ ವ್ಯವಸ್ಥೆಯ ಕುರಿತು ವರದಿ ಸಲ್ಲಿಸಬೇಕು. ವಲಯ ಚುನಾವಣಾ ಅಧಿಕಾರಿಗಳು ಸಂಬಂಧಿಸಿದಂತೆ ಪೆÇಲೀಸ್ ಇಲಾಖೆ,ಮಾನವ ಸಂಪನ್ಮೂಲ ಇಲಾಖೆಗಳ ಜೊತೆ ಸಹಕರಿಸಬೇಕು ಎಂದು ಅವರು ತಿಳಿಸಿದರು.

ಫ್ಲೈಯಿಂಗ್ ಸ್ಕ್ವಾಡ್ (ಕ್ಷಿಪ್ರ ಜಾರಿಕಾರ)ಗಳು ಚುನಾವಣೆಯ ಸಮಯದಲ್ಲಿ ಮತ ಪಡೆಯಲು ನೀಡುವ ಆಮೀಷಗಳಾದ ಹಣ, ವಸ್ತುಗಳನ್ನು ವಶಪಡಿಸಿಕೊಂಡು ದೂರು ದಾಖಲಿಸಬೇಕು.ಸ್ಟ್ಯಾಟಿಕ್ ಸರ್ವೇಲನ್ಸ್ ಟೀಮ್ (ಸ್ಥಾನಿಕ ನಿಗ್ರಹ ದಳ) ಎಲ್ಲ ಚೆಕ್ ಪೆÇೀಸ್ಟ್ ಗಳ ಮೇಲೆ ಕಣ್ಗಾವಲು ಇಟ್ಟಿರಬೇಕು ಎಂದು ರವಿ ಕರಲಿಂಗಣ್ಣವರ ನಿರ್ದೇಶನ ನೀಡಿದರು.

ಇನ್ನೋರ್ವ ಚುನಾವಣಾ ತರಬೇತುದಾರರಾದ ಎನ್.ವಿ.ಶಿರಗಾಂವಕರ ಮಾತನಾಡಿ, ಚುನಾವಣೆಯಲ್ಲಿ ವಲಯ(ಸೆಕ್ಟರ್) ಚುನಾವಣಾ ಅಧಿಕಾರಿಗಳ ಪಾತ್ರ ಮುಖ್ಯವಾದದ್ದು. ವಲಯ ಚುನಾವಣಾ ಅಧಿಕಾರಿಗಳು ಆಯಾ ಸೆಕ್ಟರ್ ಗಳ ಮತದಾರರ ಪಟ್ಟಿಯನ್ನು ಬೂತ್‍ಮಟ್ಟದ ಅಧಿಕಾರಿಗಳಿಂದ ಪಡೆದುಕೊಳ್ಳಬೇಕು. ಮತದಾರರು ಯಾವುದೇ ಒತ್ತಡಕ್ಕೆ ಒಳಗಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.

ಚುನಾವಣಾ ತರಬೇತಿಯ ನೋಡಲ್ ಅಧಿಕಾರಿಗಳಾದ ಪ್ರೀತಂ ನಸಲಾಪುರೆ, ಎ.ಆರ್.ಒ. ಪಾಟೀಲ್ ಮತ್ತು ದಕ್ಷಿಣ ಹಾಗೂ ಗ್ರಾಮೀಣ ಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು./////

 

ವರ್ಚುವಲ್ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ಮಾನ್ಯ ನರೇಂದ್ರ ಮೋದಿ ಚಾಲನೆ
ಕಿತ್ತೂರಿನಲ್ಲಿ ಮಾ.12 ರಂದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವರ್ಷಾಚರಣೆ ಆರಂಭ

ಬೆಳಗಾವಿ, 04 : ಭಾರತ ಸ್ವಾತಂತ್ರ್ಯ ಸಂಗ್ರಾಮದ ಐತಿಹಾಸಿಕ ಮಹತ್ವವನ್ನು ಸಾರುವ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ವರ್ಷಾಚರಣೆ ಅಂಗವಾಗಿ ಕಿತ್ತೂರಿನಲ್ಲಿ ಮಾ.12 ರಂದು ಆಯೋಜಿಸಲಾಗುವ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಮಾರಂಭಕ್ಕೆ ಮಾನ್ಯ ಪ್ರಧಾನಮಂತ್ರಿಗಳು ವರ್ಚುವಲ್ ವೇದಿಕೆ ಮೂಲಕ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ(ಮಾ.4) ನಡೆದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಸಂಬಂಧಿಸಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ವರ್ಷಾಚರಣೆ ಅಂಗವಾಗಿ ದೇಶದ 75 ಸ್ಥಳಗಳ ಪೈಕಿ ಕರ್ನಾಟಕ ರಾಜ್ಯದ ಎರಡು ಸ್ಥಳಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಬೆಳಗಾವಿ ಕೂಡ ಒಂದಾಗಿದೆ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಣಿ ಕಿತ್ತೂರು ಚೆನ್ನಮ್ಮನ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಕಿತ್ತೂರು ಕೋಟೆಯ ಆವರಣದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಮೃತ ಮಹೋತ್ಸವದ ವರ್ಷಾಚರಣೆ ಅಂಗವಾಗಿ ಸೈಕಲ್ ರ್ಯಾಲಿ ಕಿತ್ತೂರಿನಿಂದ ಬೆಳಗಾವಿ ಕಿತ್ತೂರು ಚೆನ್ನಮ್ಮ ಮಾರ್ಗವಾಗಿ ನಂದಗಡ ತಲುಪಲಿದೆ. 75 ಜನ ಸೈಕ್ಲಿಸ್ಟ್ ಗಳು ರ್ಯಾಲಿಯಲ್ಲಿ ಭಾಗವಹಿಲಿದ್ದಾರೆ.
ರ್ಯಾಲಿಯಲ್ಲಿ ತೆರಳುವ ಸೈಕ್ಲಿಸ್ಟ್ ಗಳು ಮಾರ್ಗಮಧ್ಯದಲ್ಲಿ ಇರುವಂತಹ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೂ ಭೇಟಿ ನೀಡಲಿದ್ದಾರೆ.

ಮುಂದಿನ 75 ವಾರಗಳ ಕಾಲ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು, ಕಂದಾಯ ಹೋಬಳಿ ಕೇಂದ್ರಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮ, ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹನೀಯರ ಹೋರಾಟ ಮೆಲುಕು ಹಾಕುವ ಮತ್ತು ಸ್ವಾತಂತ್ರ್ಯದ ಮಹತ್ವ ಸಾರುವ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

ಅದೇ ರೀತಿ ಮಾರ್ಚ್ 12 ರಂದು ಶಾಲಾ-ಕಾಲೇಜುಗಳಲ್ಲಿ ” ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ “(ಆಜಾದಿ ಕಿ ಅಮೃತ ಮಹೋತ್ಸವ ಹಾಗೂ ಇಂಡಿಯಾ@75) ವಿಷಯಗಳ ಕುರಿತು ಪ್ರಬಂಧ ಸ್ಪರ್ಧೆಗಳನ್ನು ಕೂಡ ಆಯೋಜಿಸಲಾಗುವುದು.
ಅದೇ ರೀತಿ ಮುಂದಿನ 75 ವಾರಗಳ ಕಾಲ ಛಾಯಾಚಿತ್ರ ಪ್ರದರ್ಶನ, ನಿಬಂಧ ಸ್ಪರ್ಧೆ, ಯೋಗ ಶಿಬಿರ, ಡಿಜಿಟಲ್ ಪ್ರದರ್ಶನ, ಪಾದಯಾತ್ರೆ ಮತ್ತಿತರ ಕಾರ್ಯಕ್ರಮಗಳನ್ನು ವಾರಕ್ಕೊಂದರಂತೆ ಹಮ್ಮಿಕೊಳ್ಳಲಾಗುವುದು.

ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಘಟ್ಟಗಳನ್ನು ಪರಿಚಯಿಸುವಂತಹ ಇಂತಹ ಅತ್ಯುತ್ತಮ ಕಾರ್ಯಕ್ರಮ ಆಯೋಜಿಸುವ ಅವಕಾಶ ಬೆಳಗಾವಿಗೆ ದೊರೆತಿದೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಸೂಚನೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸ್ವಾತಂತ್ರ್ಯೋತ್ಸವದ 75 ವರ್ಷಗಳ ಹಿನ್ನೆಲೆಯಲ್ಲಿ ದೇಶದಾದ್ಯಂತ 75 ಕಡೆಗಳಲ್ಲಿ ಮಾ.12 ರಂದು ವರ್ಚುವಲ್ ವೇದಿಕೆಯ ಮೂಲಕ ಸಮಾರಂಭ ನಡೆಯಲಿದೆ.

ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಯವರು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಲಿದ್ದು, ಎಲ್ಲ ರೀತಿಯ ಪೂರ್ವಸಿದ್ಧತೆ ನಡೆಸಲಾಗುತ್ತಿದೆ ಎಂದು ಸಭೆಯಲ್ಲಿ ತಿಳಿಸಿದರು.

ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್., ನಗರ ಪೊಲೀಸ್ ಉಪ ಆಯುಕ್ತರಾದ ಚಂದ್ರಶೇಖರ್ ನೀಲಗಾರ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ, ಡಿಡಿಪಿಐ ಎ.ಬಿ.ಪುಂಡಲೀಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯ ಕ್ಷೇತ್ರ ಪ್ರಚಾರಾಧಿಕಾರಿ ಶ್ರುತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ತಹಶೀಲ್ದಾರರು ಸಭೆಯಲ್ಲಿ ಉಪಸ್ಥಿತರಿದ್ದರು./////

 

ಇ-ಎಪಿಕ್ ಕಾರ್ಡ ಡೌನಲೋಡ್: ಮಾ.6 ಹಾಗೂ 7ರಂದು ವಿಶೇಷ ಅಭಿಯಾನ

ಬೆಳಗಾವಿ, 04 : e-EPIC Card download ಮಾಡುವ ವಿಧಾನದ ಬಗ್ಗೆ ತಿಳುವಳಿಕೆ ನೀಡುವ ಕುರಿತು ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಮಾ.06 ಹಾಗೂ ಮಾ.07 ರಂದು ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಭಾರತ ಚುನಾವಣಾ ಆಯೋಗ ನವದೆಹಲಿ ಇವರ ನಿರ್ದೇಶನದ ಪ್ರಕಾರ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2021 ರಡಿ ನಮೂನೆ-6 ಭರ್ತಿ ಮಾಡಿ ಸಲ್ಲಿಸಿದ ಸಮಯದಲ್ಲಿ ಮತದಾರರು ಯುನಿಕ ಮೋಬೈಲ್ ಸಂಖ್ಯೆಗಳನ್ನು ನೀಡಿದ್ದು, ಅಂತಹ ಮತದಾರರು  e-EPIC Card download  ಮಾಡಿಕೊಳ್ಳಬೇಕಾಗುವುದು.

ಆಯಾ ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿಗಳು ಉಪಸ್ಥಿತರಿದ್ದು, ಈ ಕುರಿತು ಸೂಕ್ತ ತಿಳಿವಳಿಕೆಯನ್ನು ನೀಡುವರು.
ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2021 ರಡಿ ನಮೂನೆ-6 ಭರ್ತಿ ಮಾಡಿ ಸಲ್ಲಿಸಿರುವ ಮತದಾರರು ಈ ಅಭಿಯಾನದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಪ್ರಕಟಣೆಯಲ್ಲಿ ಕೋರಿದ್ದಾರೆ.////