ಜಾರಕಿಹೊಳಿ ವಿರುದ್ಧದ ಕೇಸ್ ತಕ್ಷಣ ವಾಪಸ್ ಪಡೆಯಲು ಆಗಲ್ಲ ಎನ್ನುತ್ತಿರುವ ಪೊಲೀಸರು

0

ಬೆಂಗಳೂರು – ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಸಲ್ಲಿಸಲಾಗಿದ್ದ ಪ್ರಕರಣವನ್ನು ವಾಪಸ್ ಪಡೆಯಲು ಸಾಮಾಜಿಕ ಕಾರ್ಯಕರ್ತ ದಿನೇಶ ಕಲ್ಲಳ್ಳಿ ನಿರ್ಧರಿಸಿದ್ದಾರೆ. ಆದರೆ ಪ್ರಕರಣವನ್ನು ಈ ತಕ್ಷಣ ವಾಪಸ್ ಪಡೆಯಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಪೊಲೀಸರು.

ದಿನೇಶ ಕಲ್ಲಳ್ಳಿ ತಮ್ಮ ವಕೀಲರ ಮೂಲಕ ಕೇಸ್ ವಾಪಸ್  ಪಡೆಯುವ ಪತ್ರವನ್ನು ಪೊಲೀಸ್ ಠಾಣೆಗೆ ಕಳಿಸಿದ್ದಾರೆ. ತಾಂತ್ರಿಕ ದೋಷಗಳ ಹಿನ್ನೆಲೆಯಲ್ಲಿ ಪ್ರಕರಣ ವಾಪಸ್ ಪಡೆಯುತ್ತಿರುವುದಾಗಿ ವಕೀಲರು ತಿಳಿಸಿದ್ದಾರೆ.

ಆದರೆ, ದೂರುದಾರರೇ ಬರಬೇಕು. ಕೆಲವು ಮಾಹಿತಿಗಳನ್ನು ಅವರಿಂದ ಪಡೆಯಬೇಕಿದೆ. ಅಲ್ಲಿಯವರೆಗೆ ಪ್ರಕರಣ ಹಿಂದಕ್ಕೆ ಪಡೆಯಲು ಸಾಧ್ಯವಾಗದು ಎಂದು ಪೊಲೀಸರು ತಿಳಿಸಿದ್ದಾರೆ. ದಿನೇಶ ಕಲ್ಲಳ್ಳಿ ಪೊಲೀಸ್ ಠಾಣೆಗೆ ಸ್ವತಃ ಹೊಗಿ ಪ್ರಕರಣ ಹಿಂಪಡೆಯಬೇಕಿದೆ.

ಈ ಪ್ರಕರಣದಲ್ಲಿ 5 ಕೋಟಿ ರೂ. ಡೀಲ್ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದರು. ಇದರಿಂದ ಮನಸ್ಸಿಗೆ ನೋವಾಗಿ ಕೇಸ್ ವಾಪಸ್ ಪಡೆಯಲು ಮುಂದಾಗಿದ್ದಾಗಿ ದಿನೇಶ ಕಲ್ಲಳ್ಳಿ ತಿಳಿಸಿದ್ದಾರೆ.

ದಿನೇಶ ಕಲ್ಲಳ್ಳಿ ಇಂದು ಸಂಜೆಯ ಹೊತ್ತಿಗೆ ಠಾಣೆಗೆ ತೆರಳಿ ಕೇಸ್ ವಾಪಸ್ ಪಡೆಯುವ ಸಾಧ್ಯತೆ ಇದೆ.

ಪ್ರಕರಣ ಸಂಬಂಧ ರಮೇಶ ಜಾರಕಿಹೊಳಿ ಈಗಾಗಲೆ ತಮ್ಮ ಸಚಿವಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಕಳೆದ 5 ದಿನದಿಂದ ಈ ವಿಷ್ಯ ರಾಜ್ಯಾದ್ಯಂತ ಚರ್ಚೆಗೆ ಒಳಗಾಗಿದೆ.