ಬಿಎಸ್‌ವೈ ವಿರುದ್ಧ ಹೇಳಿಕೆ; ಯತ್ನಾಳರನ್ನು ಹೊರ ಹಾಕಲೇಬೇಕಾಗುತ್ತದೆ….

0

ಬೆಳಗಾವಿ ; ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಹೇಳಿಕೆ ನೀಡುವುದನ್ನು ಮುಂದುವರಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಹೊರ ಹಾಕಲೇಬೇಕಾಗುತ್ತದೆ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ತಿಳಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಆ ವ್ಯಕ್ತಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಅವರ ಬಗ್ಗೆ ಮಾತನಾಡಿದರೆ ಅವರಿಗೆ ಹೆಚ್ಚು ಪ್ರಸಿದ್ಧಿ ಸಿಗುತ್ತದೆ. ಹೀಗಾಗಿ, ಹೆಚ್ಚು ಚರ್ಚಿಸಲು ನಾನು ಇಚ್ಛಿಸುವುದಿಲ್ಲ. ಅವರ ಬಗ್ಗೆ ನಮಗೆ ಸ್ವಲ್ಪವೂ ವಿಶ್ವಾಸವಿಲ್ಲ. ಪಕ್ಷದ ಶಿಸ್ತು ಸಮಿತಿಯು ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ಆಂತರಿಕ ವಿಚಾರಗಳನ್ನು ಹೆಚ್ಚು ತಿಳಿಸುವುದಕ್ಕೆ ಆಗುವುದಿಲ್ಲ ಎಂದರು.

ಏ.30ರ ಒಳಗೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗುತ್ತದೆ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಬದಲಾವಣೆ ಇಲ್ಲ. ಆ ವ್ಯಕ್ತಿಗೆ ಕನಸು ಬಿದ್ದಿರಬೇಕಷ್ಟೆ ಎಂದು ಹೇಳಿದರು.

ಇದಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ದ ಅವರು, ಯತ್ನಾಳ್ ಹೇಳಿಕೆಯಲ್ಲಿ ಸತ್ಯ ಇಲ್ಲ. ಅವರ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಇನ್ನೆಷ್ಟು ಕ್ರಮ ಕೈಗೊಳ್ಳುವುದು?’ ಎಂದು ಕೇಳಿದ್ದರು.

ಮಂಗಲಾ ಅಂಗಡಿ ಗೆಲವು ಖಚಿತ ; ಕ್ಷೇತ್ರದಲ್ಲಿ ಸುರೇಶ ಸಾಕಷ್ಟು ಕೆಲಸ ಮಾಡಿದ್ದಾರೆ. ಹಾಗಾಗಿ ಅಂಗಡಿ ಅವರು ಗೆಲವು ಸಾಧಿಸುವರು. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.

ಶಾಸಕ ಅನಿಲ್ ಬೆನಕೆ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಮಾಜಿ ಶಾಸಕ ಸಂಜಯ ಪಾಟೀಲ್, ನಗರ ಘಟಕ ಅಧ್ಯಕ್ಷ ಶಶಿಕಾಂತ ಪಾಟೀಲ್ ಇದ್ದರು.