ಸಿಪಿಐ ಮುಖಂಡ ಸೀತಾರಾಮ್​ ಯೆಚೂರಿ ಹಿರಿಯ ಪುತ್ರ, ಪತ್ರಕರ್ತ ಆಶೀಶ್​ ಕೊರೊನಾ ಸೋಂಕಿಗೆ ಬಲಿ

0

ಹೊಸದಿಲ್ಲಿ: ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಸೀತಾರಾಮ್​ ಯೆಚೂರಿ ಅವರ ಹಿರಿಯ ಪುತ್ರ ಆಶೀಶ್​ (34) ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಪತ್ರಕರ್ತರಾಗಿದ್ದ ಆಶೀಶ್​ಗೆ ಎರಡು ವಾರದ ಹಿಂದೆ ಕರೊನಾ ಸೋಂಕು ದೃಢಪಟ್ಟಿತ್ತು. ಅಂದಿನಿಂದ ಗುರುಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಚೆನ್ನೈನ ಏಷಿಯನ್​ ಜರ್ನಲಿಸಂ ಕಾಲೇಜಿನಲ್ಲಿ ಆಶೀಶ್​ ವಿದ್ಯಾಭ್ಯಾಸ ಮಾಡಿದ್ದರು. ವಿವಿಧ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದರು.

ಪುತ್ರನ ಸಾವಿನ ಬಗ್ಗೆ ಟ್ವೀಟ್​ ಮೂಲಕ ತಿಳಿಸಿರುವ ಸೀತಾರಾಮ್ ಯೆಚೂರಿ, “ಕೋವಿಡ್​ನಿಂದ ನನ್ನ ಹಿರಿಯ ಮಗ ಆಶಿಶ್ ಯೆಚೂರಿಯನ್ನು ಇಂದು ಬೆಳಗ್ಗೆ ಕಳೆದುಕೊಂಡೆ. ನಮಗೆ ಭರವಸೆ ನೀಡಿದ ಹಾಗೂ ಮಗನಿಗೆ ಚಿಕಿತ್ಸೆ ನೀಡಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದಿದ್ದಾರೆ.

ಆಶೀಶ್​ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ. “ಸೀತಾರಾಮ್ ಯೆಚೂರಿ ಜೀ ಮತ್ತು ಅವರ ಕುಟುಂಬಕ್ಕೆ ಆಶೀಶ್​ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನ ಭಗವಂತ ನೀಡಲಿ” ಎಂದು ಪ್ರಧಾನಿ ಟ್ವೀಟ್​ ಮಾಡಿದ್ದಾರೆ.