ಏಕಾ ಏಕಿ ಅಂಗಡಿಗಳು ಕ್ಲೋಸ್: ಬೆಳಗಾವಿಯಲ್ಲಿ ಅಲ್ಲೋಲಕಲ್ಲೋಲ

0

ಬೆಳಗಾವಿ – ಕೇವಲ ವೀಕೆಂಡ್ ಕರ್ಫ್ಯೂ ವಿಧಿಸಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಬೆಳಗಾವಿಯ ಖಡೇಬಜಾರ್ ಸೇರಿದಂತೆ ನಗರದಲ್ಲಿ ಏಕಾ ಏಕಿ ಪೊಲೀಸರು ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದಾರೆ.

ಮೆಡಿಕಲ್ ಶಾಪ್ ಸೇರಿದಂತೆ ಅವಶ್ಯಕ ವಸ್ತುಗಳನ್ನು ಹೊರತುಪಡಿಸಿ ಎಲ್ಲರೂ ನಿಮ್ಮ ಅಂಗಡಿಗಳನ್ನು ಬಂದ್ ಮಾಡಿ ಮನೆಗೆ ಹೋಗಿ. ಇದು ಸರಕಾರದ ಆದೇಶ ಎಂದು ಪೊಲೀಸರು ಮೈಕ್ ನಲ್ಲಿ ಅನೌನ್ಸ್ ಮಾಡುತ್ತ ಎಲ್ಲ ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದಾರೆ.

ಯಾವುದೇ ಮುನ್ಸೂಚನೆ ಇಲ್ಲದೆ, ಸರಕಾರದ ಅಧಿಕೃತ ಆದೇಶವೂ ಇಲ್ಲದೇ ಪೊಲೀಸರ ಈ ಕ್ರಮ ಅಂಗಡಿಕಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಲಾಕ್ ಡೌನ್ ರೀತಿಯಲ್ಲಿ ನಗರದಲ್ಲಿ ಅಂಗಡಿಗಳನ್ನು ಮುಚ್ಚಿಸಲಾಗುತ್ತಿದೆ.

ಶನಿವಾರ ಮತ್ತು ಭಾನುವಾರ ಅಂಗಡಿಗಳನ್ನು ಬಂದ್ ಮಾಡಬೇಕೆನ್ನುವ ನಿಯಮ ಬಂದಿದೆ. ಆದರೆ ಉಳಿದ ದಿನಗಳಲ್ಲಿ ಬಂದ್ ಮಾಡಿಸುತ್ತಿರುವುದು ಯಾವ ನ್ಯಾಯ ಎಂದು ಅಂಗಡಿಕಾರರು ಪ್ರಶ್ನಿಸುತ್ತಿದ್ದಾರೆ.

ಅಂಗಡಿ ಬಂದ್ ಮಾಡಬೇಕೆನ್ನುವ ಘೋಷಣೆಯಾಗುತ್ತಿದ್ದಂತೆ ಮಾರುಕಟ್ಟೆಗೆ ಬಂದಿದ್ದ ಜನರೆಲ್ಲ ಕಂಗಾಲಾಗಿ ಓಡುತ್ತಿದ್ದಾರೆ. ಎಲ್ಲಿ ಏನಾಯಿತು ಎಂದು ಗಾಭರಿಯಿಂದ ಕಾಲ್ಕೀಳುತ್ತಿದ್ದಾರೆ.

ಸರಕಾರ ದಿಢೀರ್ ಮಾರ್ಗಸೂಚಿ ಬದಲಿಸಿದ್ದು, ಅವಶ್ಯಕ ವಸ್ತು ಹೊರತುಪಡಿಸಿ ಎಲ್ಲವನ್ನೂ ಬಂದ್ ಮಾಡುವಂತೆ ಆದೇಶ ಬಂದಿದೆ ಎನ್ನಲಾಗುತ್ತಿದೆ.