ಭಾರತದಲ್ಲಿ ಕರೋನಾ ಸ್ಫೋಟ

0

ಹೊಸದಿಲ್ಲಿ, ಏ. 29- ಭಾರತದಲ್ಲಿ ಕರೋನಾ ಆರ್ಭಟ ಮುಂದುವರೆದಿದ್ದು, ಮತ್ತೆ ಸೋಂಕು ಮತ್ತು ಸಾವು ಎರಡರಲ್ಲೂ ಸಾರ್ವಜಕಾಲಿಕ ದಾಖಲೆ ಸೃಷ್ಟಿಸಿದೆ. ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ದಾಖಲೆಯ 3,79,257 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಬರೋಬ್ಬರಿ 3645 ಜನರು ಸಾವನ್ನಪ್ಪಿದ್ದಾರೆ.

ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,83,76,524ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 2 ಲಕ್ಷ ಗಡಿ ದಾಟಿ 2,04,832ಕ್ಕೆ ತಲು ಪಿದೆ.

ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 30, 84, 814 ಕ್ಕೆ ಏರಿಕೆಯಾಗಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 2,69,507 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡ ವರ ಸಂಖ್ಯೆ 1, 50, 86 ,878ಕ್ಕೆ ತಲುಪಿದೆ.

ಇನ್ನು ಭಾರತದಲ್ಲಿ ಒಂದೇ ದಿನ 17,68,190 ಮಂದಿಯನ್ನು ಕರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ 28,44,71,979 ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಟ್ ಮತ್ತು ಕೋವ್ಯಾಕ್ಸಿನ್ ಕರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕರೋನಾ ವಾರಿಯರ್ಸ್’ಗೆ ಲಸಿಕೆಯ ಮೊದಲ ಆದ್ಯತೆ ಯನ್ನು ನೀಡಲಾಗಿತ್ತು. ಇದೀಗ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಲಸಿಕೆ ನೀಡಲಾಗುತ್ತಿದೆ.

ಇದರಂತೆ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 15,00,20,648 ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಐಸಿಎಂಆರ್‌ ಪ್ರಕಾರ, ಏಪ್ರಿಲ್‌ 28ರವರೆಗೂ 28,44,71,979 ಗಂಟಲು ದ್ರವ ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಬುಧವಾರ 17,68,190 ಕೋವಿಡ್‌ ಪರೀಕ್ಷೆಗಳನ್ನು ಮಾಡಲಾಗಿದೆ.

ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ 2020ರ ಸೆಪ್ಟೆಂಬರ್‌ 16ರಂದು 50 ಲಕ್ಷ ದಾಟಿತು. ಡಿಸೆಂಬರ್‌ 19ರಂದು ಪ್ರಕರಣಗಳು 1 ಕೋಟಿ ಮುಟ್ಟಿತು. 2021ರ ಏಪ್ರಿಲ್‌ 19ರಂದು ಪ್ರಕರಣಗಳ ಸಂಖ್ಯೆ 1.50 ಕೋಟಿ ದಾಟಿತು.

ಗುರುವಾರ ಮಹಾರಾಷ್ಟ್ರದಲ್ಲಿ 1,035 ಜನ. ದೆಹಲಿಯಲ್ಲಿ 368, ಛತ್ತೀಸ್‌ಗಢದಲ್ಲಿ 279, ಉತ್ತರ ಪ್ರದೇಶದಲ್ಲಿ 265 ಹಾಗೂ ಕರ್ನಾಟಕದಲ್ಲಿ 229 ಜನರು ಮೃತಪಟ್ಟಿದ್ದಾರೆ.