ಮತ ಎಣಿಕೆ: ಕೋವಿಡ್ ನೆಗೆಟಿವ್ ವರದಿ ಕಡ್ಡಾಯ; ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಡ್ ಪರೀಕ್ಷೆ

0

ಬೆಳಗಾವಿ: ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಮತ‌ ಎಣಿಕೆಯು ಮೇ 2 ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ವರದಿಗಾಗಿ ಮತ ಎಣಿಕೆ‌ ಕೇಂದ್ರಕ್ಕೆ ತೆರಳಲಿರುವ ಮಾಧ್ಯಮ ಪ್ರತಿನಿಧಿಗಳ ಕೋವಿಡ್ ಪರೀಕ್ಷೆಗಾಗಿ ಮಾದರಿಯನ್ನು ಸಂಗ್ರಹಿಸಲಾಯಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾಭವನದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಇಂದು (ಎ.29) ಪರೀಕ್ಷೆ ನಡೆಯಿತು.

ಮತ ಎಣಿಕೆ ಸಂದರ್ಭದಲ್ಲಿ ಅಭ್ಯರ್ಥಿಗಳು, ಅಭ್ಯರ್ಥಿಗಳ ಪರ ಏಜೆಂಟರು, ಮತ ಎಣಿಕೆ ಸಿಬ್ಬಂದಿ, ಮಾಧ್ಯಮದವರು ಸೇರಿದಂತೆ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಲು ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿ‌ ಭಾರತ ಚುನಾವಣಾ ಆಯೋಗವು ಆದೇಶಿಸಿದೆ.

ಮತ ಎಣಿಕೆ ಕೇಂದ್ರ ಪ್ರವೇಶಕ್ಕೆ ಆರ್ ಟಿಪಿಸಿಆರ್ ಅಥವಾ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಪರೀಕ್ಷೆ ನಡೆಸುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ಈಗಾಗಲೇ ಎರಡೂ ಡೋಸ್ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದರೆ ಕೋವಿಡ್ ಪರೀಕ್ಷೆಯ ಅಗತ್ಯವಿರುವುದಿಲ್ಲ ಎಂದು ಆಯೋಗ ತಿಳಿಸಿದೆ.

ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರ ನಿರ್ದೇಶನದ ಮೇರೆಗೆ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ವರದಿಗಾರರು, ಕ್ಯಾಮೆರಾಮೆನ್ ಸೇರಿದಂತೆ 80 ಕ್ಕೂ ಅಧಿಕ ಪ್ರತಿನಿಧಿಗಳ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಲಾಯಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಹಾಗೂ ಇತರೆ ಸಿಬ್ಬಂದಿ ಕೂಡ ಈ ಸಂದರ್ಭದಲ್ಲಿ ಆರ್ ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡರು.

ವೈದ್ಯಾಧಿಕಾರಿಯಾದ ಡಾ.ಅನೂಪ್ ಮುನವಳ್ಳಿ, ಶುಶ್ರೂಷಕಿ ಪ್ರಜಾ ಭಜಂತ್ರಿ ನೇತ್ರತ್ವದಲ್ಲಿ ಸುಶಾಂತ ಗಗನೆ, ಸುನೀಲ್ ಬೊಂಗಾಳೆ, ಉಮಾ ಕಲಾಲ, ಜ್ಯೋತಿ ಹೊಸಟ್ಟಿ ಹಾಗೂ ಭೀಮಶಿ ಕಾರತಗಿ ಅವರನ್ನೊಳಗೊಂಡ ತಂಡವು ಕೋವಿಡ್ ಪರೀಕ್ಷೆಗಾಗಿ ಮಾದರಿಯನ್ನು ಸಂಗ್ರಹಿಸಿತು.