ಗ್ರಾಮ ಮಟ್ಟದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕ್ರಮ : ಡಿಸಿ ಡಾ.ಕೆ.ಹರೀಶ್ ಕುಮಾರ್

0

ಬೆಳಗಾವಿ: ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಗ್ರಾಮ ಮಟ್ಟದಲ್ಲಿ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸರ್ಕಾರ ಆದೇಶ ಹೊರಡಿಸಿದ್ದು, ಜಿಲ್ಲೆಯಲ್ಲಿ ಕ್ರಮಗಳ  ಪಾಲನೆಯಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.

ಗ್ರಾಮ ಪಂಚಾಯತಿ ಮಟ್ಟದ ಕಾರ್ಯಪಡೆ ಮತ್ತು ಗ್ರಾಮ ಮಟ್ಟದ ಕಾರ್ಯಪಡೆಯು ಜವಾಬ್ದಾರಿಗಳನ್ನು ನಿರ್ವಹಿಸಬೇಕು.
ಗ್ರಾಮಾಂತರ ಪ್ರದೇಶಕ್ಕೆ ನಗರ ಪ್ರದೇಶಗಳಿಂದ ಹಿಂದಿರುಗುವ ವಲಸೆ ಕಾರ್ಮಿಕರಿಗೆ, ಮಹಿಳಾ ಕಾರ್ಮಿಕರಿಗೆ ಮತ್ತು ದುರ್ಬಲ ವರ್ಗದವರಿಗೆ, ಊಟ, ಮಾಸ್ಕ್‌ ಮತ್ತು ಸ್ಯಾನಿಟೈಜರ್‌ಗಳನ್ನು ಒದಗಿಸಬೇಕು.

ವಿಶೇಷವಾಗಿ ನಿರ್ಗತಿಕರಿಗೆ, ವಿಕಲಚೀತನರಿಗೆ, ಹಿರಿಯ ನಾಗರಕರಿಗೆ, ಮಾಜಿ ದೇವದಾಸಿಯರಿಗೆ, ತೃತೀಯ ಲಿಂಗಿಗಳಿಗೆ ಹಾಗೂ ಮಹಿಳೆಯರಿಗೆ ಸ್ವಯಂ ಸೇವಕರಿಗೆ ಅವಶ್ಯ ಸೌಲಭ್ಯಗಳನ್ನು ಒದಗಿಸಬೇಕು.

ಅಲ್ಲದೇ, ಕೋವಿಡ್‌-19 ಪ್ರಕರಣಗಳಲ್ಲಿ ಅರ್ಹ ವ್ಯಕ್ತಿಗಳಿಗೆ ನೀಡುವ ಲಸಿಕಾಕರಣದ ಕಾರ್ಯವನ್ನು ವೃದ್ಧಿಸಲು ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಲಸಿಕಾಕರಣದ 2ನೇ ಡೋಸ್‌ ನೀಡಿದ ನಂತರ ಪ್ರಮಾಣ ಪತ್ರವನ್ನು ಸಂಬಂಧಿಸಿದವರಿಗೆ ನೀಡಬೇಕು.

ಕೊರೋನಾ ತಡೆಗಟ್ಟುವಿಕೆಯಲ್ಲಿ ಕಾರ್ಯ ನಿರ್ವಹಿಸುವ ಸ್ವಯಂಸೇವಕರನ್ನು ಗುರುತಿಸಿ ಅವರ ದೂರವಾಣಿ ಸಂಖ್ಯೆಯನ್ನು ಪ್ರಕಟಿಸಿ, ಹಗಲು-ರಾತ್ರಿ ಪಾಳಿ ವ್ಯವಸ್ಥೆಯಲ್ಲಿ ಅವರು ಸೇವೆ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಸಮುದಾಯ ಸಹಾಯವಾಣಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು.
ಜೊತೆಗೆ , ಗ್ರಾಮ ಪಂಚಾಯಿತಿಗಳು ಅವಶ್ಯ ಮಾಸ್ಕ್‌ಗಳು, ಸಾಬೂನುಗಳು ಮತ್ತು ಸ್ಯಾನಿಟೈಜರ್‌ ಇತ್ಯಾದಿ ಸ್ವಚ್ಛತಾ ಪರಿಕರಗಳು, ಊಟ ಇತ್ಯಾದಿಗಾಗಿ 14 ನೇ ಹಣಕಾಸು ಆಯೋಗದ ಉಳಿಕೆ ಆನುದಾನ, 15ನೇ ಹಣಕಾಸು ಆಯೋಗದ ಅನುದಾನ ಆಥವಾ ಸ್ವಂತ ಸಂಪನ್ಮೂಲವನ್ನು ಉಪಯೋಗಿಸಿಕೊಳ್ಳಬೇಕು.

ಸಮುದಾಯ ಸಹಾಯವಾಣಿಗಳ ವಿವರ ಮತ್ತು ಲಸಿಕಾಕರಣದ ಮಾಹಿತಿಯನ್ನು ಪಂಚತಂತ್ರ ತಂತ್ರಾಂಶದಲ್ಲಿ ಕಾಲೋಚಿತಗೊಳಿಸಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.////