ಸೇವಾ ನಿವೃತ್ತಿ : ಹೆಗನಾಯಕ ಅವರಿಗೆ ಬೀಳ್ಕೊಡುಗೆ

0

ಬೆಳಗಾವಿ:  ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಸಿಬ್ಬಂದಿಯಾದ ಎಫ್.ಕೆ. ಹೆಗನಾಯಕ ಅವರು 33 ವರ್ಷ ಸೇವೆ ಸಲ್ಲಿಸಿ, ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಇಲಾಖೆಯ ವತಿಯಿಂದ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.

ನಗರದ ವಾರ್ತಾ ಭವನದಲ್ಲಿ ಶುಕ್ರವಾರ  ಬೀಳ್ಕೊಡುಗೆ ಸಮಾರಂಭ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರ ಅವರು,  “ವೃತ್ತಿ ಜೀವನದಲ್ಲಿ ಹೊಂದಾಣಿಕೆಯು ಬಹಳ ಮುಖ್ಯವಾಗಿದೆ. ವ್ಯಕ್ತಿಗೆ ತನ್ನ ಕೌಟುಂಬಿಕ ಜವಾಬ್ದಾರಿಯ ಜತೆಗೆ ವೃತ್ತಿ ನಿಷ್ಠೆ ಮತ್ತು ಸರಳತೆ ಅವಶ್ಯಕವಾಗಿದೆ.‌ ಹೆಗನಾಯಕ ಅವರು ತಮ್ಮ ಮೂರು ದಶಕಗಳಿಗಿಂತ ಅಧಿಕ ಸೇವಾವಧಿಯಲ್ಲಿ ಈ ತತ್ವವನ್ನು ಪಾಲಿಸಿಕೊಂಡು ಬಂದಿದ್ದಾರೆ”ಎಂದು ಹೇಳಿದರು.

ಎಲ್ಲರೊಂದಿಗೆ ಪ್ರೀತಿ,ವಿಶ್ವಾಸ ಹಾಗೂ ಸರಳತೆಯಿಂದ ನಡೆದುಕೊಂಡು ತಮ್ಮ ವೃತ್ತಿಜೀವನದಲ್ಲಿ ಯಾವುದೇ ಕಪ್ಪುಚುಕ್ಕೆಯಿಲ್ಲದೇ ಸೇವಾ ಸಂತೃಪ್ತಿಯಿಂದ ನಿವೃತ್ತಿ ಹೊಂದಿದ ಹೆಗನಾಯಕ ಅವರ ನಿವೃತ್ತಿಯ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಫ್.ಕೆ ಹೆಗನಾಯಕ ಅವರು, ಮೂರು ದಶಕಗಳ ತಮ್ಮ ಸೇವೆಯು ಸಂತೃಪ್ತಿ ತಂದಿದೆ. ಈ‌ ಅವಧಿಯಲ್ಲಿ ಸಹಕರಿಸಿದ ಎಲ್ಲ ಅಧಿಕಾರಿಗಳು, ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಇದೇ ವೇಳೆ ವಾರ್ತಾ ಇಲಾಖೆಯ ಸಿಬ್ಬಂದಿ ಅನಂತ ಪಪ್ಪು, ಎಮ್.ಎಲ್. ಜಮಾದಾರ್, ವಿನೋದ ಹಾದಿಮನಿ ಮತ್ತಿತರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಇಲಾಖೆಯ ಸಿಬ್ಬಂದಿಗಳಾದ ಯು.ಎಸ್. ಗೊಡಚಿಮಠ, ವಿ.ಐ. ಹಾದಿಮನಿ,  ಬಿ.ಎಲ್.ತಳವಾರ, ಮಲ್ಲಿಕಾರ್ಜುನ ಹೆಗನಾಯಕ, ಹಾಗೂ ಪ್ರಶಿಕ್ಷಣಾರ್ಥಿಗಳಾದ ಅಡಿವೆಪ್ಪ ನೇಸರಗಿ, ಶಶಿಕಾಂತ ಕೋಳ್ಯಾಗೋಳ, ಅಕ್ಷತಾ ಮಿರಜಕರ, ಮಲ್ಲಿಕಾರ್ಜುನ ಹೆಗ್ಗಾನಾಯಕ, ಚಂದ್ರಶೇಖರ ಜಾಲಗಾರ ಮತ್ತಿತರರು ಉಪಸ್ಥಿತರಿದ್ದರು.////