ಗರಣಿ ಗಿರೀಶ್ ಗೆ ಮಾನವ ಬಂಧುತ್ವ ವೇದಿಕೆಯಿಂದ ಶೃದ್ಧಾಂಜಲಿ ಸಲ್ಲಿಸಿದ ಒಡನಾಡಿಗಳು

0

ಬೆಳಗಾವಿ: ಮಾನವ ಬಂಧುತ್ವ ವೇದಿಕೆಯ ತುಮಕೂರು ಜಿಲ್ಲಾ ಸಂಚಾಲಕ ಗರಣಿ ಗಿರೀಶ್ ಅವರಿಗೆ ಮಾನವ ಬಂಧುತ್ವ ವೇದಿಕೆ ವತಿಯಿಂದ ಶ್ರದ್ಧಾಂಜಲಿ ಸಭೆಯನ್ನು ಇಂದು ಜೂಮ್ ಮೀಟಿಂಗ್ ಮೂಲಕ ನಡೆಸಲಾಯಿತು.

ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್, ವಿಭಾಗೀಯ ಸಂಚಾಲಕರಾದ ಜಯಕುಮಾರ್, ಲೀಲಾ ಸಂಪಿಗೆ, ಪ್ರಕಾಶ್ ಹಾದಿಮನಿ, ಮಹಾಲಿಂಗಪ್ಪ ಆಲಬಾಳ, ಅನಂತ ನಾಯ್ಕ್, ಕಲಬುರ್ಗಿ ವಿಭಾಗೀಯ ಸಂಚಾಲಕ ನಾಗೇಂದ್ರ ಜವಳಿ, ರಾಮಕೃಷ್ಣ ಪಾನಬುಡೆ, ಗರಣಿ ಗಿರೀಶ್ ಅವರ ತಂದೆ ಮತ್ತು ಇನ್ನಿತರ ಒಡನಾಡಿಗಳು ಶ್ರದ್ಧಾಂಜಲಿಯನ್ನು ಸಲ್ಲಿಸಿದರು.

ಸತೀಶ ಜಾರಕಿಹೊಳಿಯವರ ಅಪ್ಪಟ ಅಭಿಮಾನಿ:

ಈ ಸಂದರ್ಭದಲ್ಲಿ ಮಾತನಾಡಿದ ರವೀಂದ್ರ ನಾಯ್ಕರ್, “ವೇದಿಕೆಯ ಸಂಸ್ಥಾಪಕರಾದ ಸತೀಶ ಜಾರಕಿಹೊಳಿಯವರಿಗೆ ಅತ್ಯಂತ ಆಪ್ತರಾಗಿದ್ದ ಗರಣಿ ಗಿರೀಶ್ ನನಗೆ ಸಹೋದರನಂತೆ ಇದ್ದರು. ಅವರು ನನ್ನೊಂದಿಗೆ ಕಳೆದ ಕ್ಷಣಗಳು ಮತ್ತು ನಮ್ಮ ಕುಟುಂಬದವರೊಂದಿಗೆ ಬೆಸೆದ ನಂಟು ತೀರಾ ಅಪರೂಪದ್ದು” ಎಂದರು.

“ಗರಣಿ ಗಿರೀಶ್ ಅವರು ಸತೀಶ್ ಜಾರಕಿಹೊಳಿಯವರನ್ನು ತಮ್ಮ ಮನೆಗೆ ಕರೆಸಿಕೊಳ್ಳಬೇಕು, ಅಲ್ಲಿಯೇ ಗೌರವ ಸಲ್ಲಿಸಬೇಕು ಎಂದು ಆಸೆ ಪಟ್ಟಿದ್ದರು. ಕಳೆದ ಬಾರಿ ಪಾವಗಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಆಸೆಯನ್ನು ಈಡೇರಿಸಿಕೊಂಡರು” ಎಂದರು.

“ವಾರಕ್ಕೊಮ್ಮೆಯಾದರೂ ಸತೀಶ್ ಜಾರಕಿಹೊಳಿಯವರನ್ನು ನೋಡಬೇಕು, ಮಾತಾಡಿಸಬೇಕು ಎಂದು ಗಿರೀಶ್ ಇಚ್ಛಿಸುತ್ತಿದ್ದರು. ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಬೆಂಗಳೂರಿಗೆ ಹೋಗಿ ಸತೀಶ್ ಜಾರಕಿಹೊಳಿಯವರನ್ನು ನೋಡಿ ಸುಮ್ಮನೆ ವಾಪಸ್ ಆಗುತ್ತಿದ್ದರು. ಆಗ ಸತೀಶ್ ಜಾರಕಿಹೊಳಿಯವರು ಗರಣಿ ಗಿರೀಶ್ ಬಂದು ಹೋದ. ಯಾಕೆ? ಎಂದು ನನ್ನನ್ನು ವಿಚಾರಿಸುತ್ತಿದ್ದರು. ನಾನು ಯಾಕೆ ಹೋಗಿದ್ದಿರಿ ಎಂದು ಕೇಳಿದರೆ, ಏನೂ ಇಲ್ಲ, ಸುಮ್ಮನೇ ಹೋಗಿದ್ದೆ ಎನ್ನುತ್ತಿದ್ದರು.ಇಷ್ಟು ಆಪ್ತವಾಗಿ ಸತೀಶ್ ಜಾರಕಿಹೊಳಿಯವರನ್ನು ಹಚ್ಚಿಕೊಂಡಿದ್ದರು” ಎಂದರು.

ಗಿರೀಶ್ ಒಡನಾಟ ಮೆಲುಕು:

ಇದೇ ವೇಳೆ ಮಾತಾಡಿದ ಮಹಾಲಿಂಗಪ್ಪ ಆಲಬಾಳ, “ಬೆಳಗಾವಿ ಲೋಕಸಭೆ ಉಪಚುನಾವಣೆ ವೇಳೆ ಬೆಳಗಾವಿಗೆ ಬಂದಿದ್ದ ಸಮಯದಲ್ಲಿ ಅವರು ನಮ್ಮೊಂದಿಗಿದ್ದರು. ದಿನ ಬೆಳಿಗ್ಗೆ ಎದ್ದು ಸುತ್ತಮುತ್ತಲ ಊರಿಗೆ ಪ್ರಚಾರಕ್ಕೆ ತೆರಳುತ್ತಿದ್ದರು. ಚುನಾವಣೆ ಮುಗಿದ ನಂತರ ಅವರು ತುಮಕೂರಿಗೆ ತೆರಳಿದ್ದರು. ಬೆಂಗಳೂರಿಗೆ ಹೋಗುವ ಸಮಯದಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ ಎಂದಿದ್ದೆ. ಆದರೆ, ಅವರನ್ನು ಭೇಟಿಯಾಗುವ ಅವಕಾಶವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಊಹಿಸಿರಲಿಲ್ಲ” ಎಂದು ಭಾವುಕರಾದರು.

“ಅವರ ಸಮಸಮಾಜ ನಿರ್ಮಿಸುವ ಕನಸನ್ನು ಈಡೇರಿಸುವ ಜವಾಬ್ದಾರಿಯನ್ನು ನಾವೆಲ್ಲ ಹೊರಬೇಕು. ಅವರ ಕುಟುಂಬದವರಿಗೆ ಸಾಂತ್ವನ ಹೇಳುವುದು ಹೇಗೆ ಎಂದು ನನಗೆ ಗೊತ್ತಾಗುತ್ತಿಲ್ಲ. ಆದರೆ, ಅವರ ಆಶಯಗಳನ್ನು ನಾವೆಲ್ಲ ಈಡೇರಿಸುವ ಶಪಥವನ್ನು ಮಾಡೋಣ” ಎಂದು ಹೇಳಿದರು.

ಕಾರ್ಯಕ್ರಮವನ್ನು ವಕೀಲ ಅನಂತ ನಾಯಕ್ ನಿರ್ವಹಿಸಿದರು. ////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');