ನೊಂದ ಹೆಣ್ಣುಮಕ್ಕಳು ನೇಣಿಗೆ ಬೀಳುವ ಮುನ್ನ

0

ಬೆಳಗಾವಿ :   ನೊಂದ ಹೆಣ್ಣುಮಕ್ಕಳು ನೇಣಿಗೆ ಬೀಳುವ ಮುನ್

 

ಯವ್ವ ಮೊನ್ನೆ ಬಂದಿದ್ರಲ್ಲ ಆ ಅಣ್ಣವ್ರ ಮತ್ತ ಬಂದಿದ್ರ ಏನು?? ಅಯ್ಯ ಬಂದ ನೋಡು ನನ್ನ ಕೇಳಿದ್ರ ನಾನು ಮನಿ ಒಳಗ ಇಲ್ಲ ಅಂತ ಹೇಳು ಅನ್ನುತ್ತ ಮಕ್ಕಳಿಗಲ್ಲ ನೀವೆ ಕೋಳಿಗಳನ್ನು ಮುಚ್ಚುವ ದೊಡ್ಡ ಬಿದಿರಿನ ಬುಟ್ಟಿಯ ಒಳಗೋ,ಸರ್ಕಾರದಿಂದ ಮಂಜೂರಾದ ಹಣದಲ್ಲಿ ಪೂರ್ತಿ ಕಟ್ಟಿ ಉಪಯೋಗಿಸಲಾಗದ ಒಂದುವರೆ ಅಡಿ ಅಗಲ ನಾಲ್ಕು ಅಡಿ ಉದ್ದದ ಅರ್ಧಕ್ಕೆ ನಿಂತ ಶೌಚಾಲಯದ ಒಳಗೋ ಹಳ್ಳಿಯ ಹೆಣ್ಣುಮಕ್ಕಳು ಅಡಗಿಕೊಳ್ಳುತ್ತಿದ್ದಾರೆ.

ಈ ಪರಿಸ್ಥಿತಿ ಸದ್ಯ ಶಹರುಗಳಲ್ಲಿ ಕೂಡ ಭಿನ್ನವಾಗಿ ಏನೂ ಇಲ್ಲ.ಗಾರ್ಮೆಂಟ್ಸ,ಬಟ್ಟೆ ಅಂಗಡಿ,ಸ್ಟೇಷನರಿ ಸ್ಟೋರ್,ಹೋಟೆಲ್ ಮತ್ತು ಶಾಪಿಂಗ್ ಮಾಲ್ ಅಥವಾ ಇನ್ನಾರದೋ ಮನೆಯ ಕಸಮುಸುರೆ ಮಾಡುತ್ತ ಪಟ್ಟಣಗಳಲ್ಲಿ ಬದುಕು ಕಟ್ಟಿಕೊಳ್ಳುವ ಬಡ ಹೆಣ್ಣುಮಕ್ಕಳು ಹೀಗೆ ತಾವು ಮನೆಯಲ್ಲಿ ಇದ್ದರೂ ಕೂಡ ಇಲ್ಲ ಅಂತ ಹೇಳಿ ಮನೆಗೆ ಬಂದ ಬಂಟರು ಮರಳಿ ಹೋಗುವತನಕ ಉಸಿರುಬಿಗಿ ಹಿಡಿದು ಅವಿತುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.

ಕೊರೊನಾ ಮಹಾಮಾರಿಯ ಎರಡನೆ ಅಲೆಯ ಲಾಕ್ ಡೌನ್ ಸಮಯದಲ್ಲಿ ಕೈಯ್ಯಲ್ಲಿ ಉದ್ಯೋಗವೂ ಇಲ್ಲದೆ ಮನೆಯ ಖರ್ಚು ತೂಗಿಸಲೂ ಆಗದೆ ಉಪಜೀವನಕ್ಕೆ ಅಂತ ಸಾಕಿದ್ದ ಆಡು,ಕುರಿ,ಕೋಳಿಗಳನ್ನ ಮಾರಿ ಪಡಿತರ ಖರೀದಿ ಮಾಡುವ ಸ್ಥಿತಿ ಇರುವದನ್ನು ತಿಳಿದರೂ ತಿಳಿಯದವರಂತೆ ಆಳಕ್ಕೆ ಬಿದ್ದ ಆನೆಗೆ ಆಳಿಗೊಂದು ಕಲ್ಲು ಅನ್ನುವ ಹಾಗೆ ದಿನಸಿ ಅಂಗಡಿಯವರು ಹಳೆಯ ಬಾಕಿ ಕೇಳುತ್ತಾ ಇದ್ದಾರೆ. ಇತ್ತ ಮನೆಯ ಮಾಲೀಕರು ಬಾಡಿಗೆ ಕೇಳಿ ಪೀಡಿಸುತ್ತಿದ್ದಾರೆ.

ಇನ್ನು ಕೈಗಡ ಪಡೆದ ಸಾಲದವರನ್ನು ಹಾಗೂ ಹೀಗೂ ಏನೋ ಒಂದು ಹೇಳಿ ಸಾಗಹಾಕುವ ಹೆಣ್ಣುಮಕ್ಕಳಿಗೆ ಸದ್ಯ ಖಾಸಗಿ ಪೈನಾನ್ಸ ಗಳ ಮತ್ತು ಸ್ವಸಹಾಯ ಸಂಘಗಳ ವಸೂಲಿ ವೀರರ ಕಾಟ ಮಾತ್ರ ತಡೆಯಲಾಗದ ಹಂತ ತಲುಪಿದೆ.ಹಲವು ಕಡೆ ಸಾಲ ವಸೂಲಿಗೆ ಬಂದವರು ಬಾಯಿಗೆ ಬಂದಂತೆ ಮಾತನಾಡುವದು,ಕೈಗೆ ಸಿಕ್ಕ ವಸ್ತುಗಳನ್ನು ಹೊತ್ತೊಯ್ಯುವ ದರಿಂದ ಹಿಡಿದು ಮಕ್ಕಳನ್ನು ಒತ್ತೆ ಇಟ್ಟುಕೊಳ್ಳುವ ತನಕ ಒಂದಲ್ಲ ಒಂದು ಅನೈತಿಕ ಚಟುವಟಿಕೆಗಳು ನಿತ್ಯವೂ ಕಿವಿಗೆ ಬೀಳುತ್ತಿವೆ.

ಮನೆಯಲ್ಲಿ ಕುಡುಕ ಗಂಡ ಸಾಲದ ಹಣದಲ್ಲಿ ಕುಡಿದು ಚಿತ್ತಾಗಿ ಮಲಗಿದ್ದರೆ ಎದೆ ಎತ್ತರದ ಮಕ್ಕಳು ಪೋಲಿ ಅಲೆಯುತ್ತಿರುವದರಿಂದ ಸದ್ಯ ಕೊರೊನಾ ಎರಡನೆಯ ಅಲೆಯ ಲಾಕ್ ಡೌನ್ ನಲ್ಲಿ ಉದ್ಯೋಗ ಕಳೆದುಕೊಂಡ ಮಹಿಳೆಯರುತಮ್ಮ ಹೊಟ್ಟೆಗೆ ತಣ್ಣೀರ ಬಟ್ಟೇಯೇ ಗತಿ ಅನ್ನುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಒಂದು ಕಡೆ ಮಹಿಳಾ ಸಬಲೀಕರಣಕ್ಕಾಗಿ ಕೊಡುವ ಸಾಲದ ಯೋಜನೆಗಳು ಉಳ್ಳವರ ಉಡಿ ತುಂಬುತ್ತಿದ್ದರೆ ಇನ್ನೊಂದು ಕಡೆ ರಾಷ್ಟ್ರೀಯ ಬ್ಯಾಂಕುಗಳು ಹತ್ತಾರು ದಾಖಲೆಗಳನ್ನು ಕೇಳಿ ಹಲವಾರು ಬಾರಿ ಬ್ಯಾಂಕಿಗೆ ಅಲೆದಾಡಿಸಿ ಕೊನೆಗೆ ಯಾವುದೋ ಒಂದು ಕಾರಣ ಕೊಟ್ಟು ಸಾಲ ಮಂಜೂರು ಮಾಡದೆ ಇರುವದು ಕೂಡ ಬಡ ಹೆಣ್ಣುಮಕ್ಕಳ ಕನಸುಗಳಿಗೆ ಕೊಳ್ಳಿ ಇಡುತ್ತಿದೆ‌.ಅನಿವಾರ್ಯವಾಗಿ ಖಾಸಗಿ ಫೈನಾನ್ಸ್ ಮತ್ತು ಸ್ವಸಹಾಯ ಸಂಘಗಳಿಂದ ಸಾಲ ಪಡೆದರೆ ಸರಳ ಬಡ್ಡಿ,ಚಕ್ರಬಡ್ಡಿ ಅಷ್ಟೇ ಅಲ್ಲದೆ ಲೇಟ್ ಪೆನಲ್ಟಿ ಎಂಬ ಹೆಸರಿನಲ್ಲಿ ಸಾಲದ ಮೂರು ನಾಲ್ಕು ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ.

ಸದ್ಯದ ಮಟ್ಟಿಗೆ ಸರ್ಕಾರ ಮೂರು ತಿಂಗಳು ಯಾರೂ ತಮ್ಮ ಸಾಲದ ಕಂತು ಕಟ್ಟುವಂತಿಲ್ಲ ಎಂದು ಫರ್ಮಾನು ಹೊರಡಿಸಿದೆ ಆದರೂ ಸರ್ಕಾರ ಒಂದು ಕಡೆ ಚಾಪೆಯ ಕೆಳಗೆ ನುಸುಳಿದರೆ ಪೈನಾನ್ಸ ವರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ.

ಸಾಲ ವಸೂಲಿ ಮಾಡಲು ಬರುವ ಹರೆಯದ ಹುಡುಗರು ಫಿಲ್ಡಿಗೆ ಇಳಿದು ಅರೆ ವಯಸ್ಸಾದ ಹೆಣ್ಣುಮಕ್ಕಳಿಗೆ ನೀವು ಇವತ್ತು ಕಂತು ಕಟ್ಟದೆ ಹೊದರೆ ಮುಂದೆ ನಿಮಗೆ ಎಲ್ಲೂ ಸಾಲ ಸಿಗಲ್ಲ,ನೀವು ಕೊಡಲ್ಲ ಅಂದ್ರೆ ನಾವೂ ಬಿಡಲ್ಲ ಅನ್ನುವ ರೀತಿಯಲ್ಲಿ ಭಯ ಹುಟ್ಟಿಸಿ ಸಾಲದ ಕಂತು ಕಟ್ಟಿಸಲು ಮುಂದಾಗುತ್ತಿದ್ದಾರೆ.

ಇದರಿಂದಾಗಿ ಮದ್ಯಮವರ್ಗದ ಮತ್ತು ಬಡವರ ಹೆಣ್ಣುಮಕ್ಕಳು ಪೈನಾನ್ಸ ಸಿಬ್ಬಂದಿ ಬಂದರೆ ಮನೆಯಲ್ಲಿ ಇದ್ದರೂ ಇಲ್ಲ ಅಂತ ಸುಳ್ಳು ಹೇಳಬೇಕಾಗಿದೆ.ಹಲವು ಕಡೆ ಪೈನಾನ್ಸ ಸಿಬ್ಬಂದಿ ಸಾರ್ವಜನಿಕವಾಗಿ ಮಹಿಳೆಯರಿಗೆ ಅವಾಚ್ಯವಾಗಿ ನಿಂದಿಸುತ್ತಿದ್ದರೆ ಜಗಳ ಬಿಡಿಸಲು ಹೋದವರಿಗೆ ಸಾಲದ ಹಣ ಏನು ನೀವು ಕೊಡ್ತೀರಾ ಅಂತ ಕೇಳಿದ ಪ್ರಸಂಗಗಳೂ ಜರುಗಿವೆ.

ಇಷ್ಟೇ ಅಲ್ಲದೆ ಸಂಧರ್ಬದ ಪರಿವೆಯೇ ಅರ್ಥವಾಗದ ಅಕ್ಕಪಕ್ಕದವರು ಕೂಡ ಅಲ್ಲಮ್ಮ ಸಾಲ ತಗೊಂಡಿದಿಯಾ ಅಂದ ಮೇಲೆ ಕೊಡಬೇಕಲ್ವ ಅಂತ ಚುಚ್ಚಿ ಮಾತನಾಡುವಾಗ ಸಾಲ ಪಡೆದವರಿಗೆ ಕಣ್ಣೀರ ಹೊರತಾಗಿ ಆಪತ್ಬಾಂಧವರೇ ಯಾರೂ ಇಲ್ಲದಂತಾಗಿದ್ದು ತಲೆಯ ಮೇಲಿನ ಆಕಶವೇ ಕಳಚಿ ಬಿದ್ದಂತೆ ಆಗುತ್ತಿದೆ.

ಶತಾಯ ಗತಾಯ ಹೇಗಾದರು ಮಾಡಿ ಬದುಕು ಕಟ್ಟಿಕೊಳ್ಳಲೇ ಬೇಕು ಅಂದುಕೊಂಡು
ನಡೆದುಕೊಂಡೋ ಯಾರದೋ ಮೋಟಾರು ಬೈಕಿನ ಮೇಲೆ ಲಿಪ್ಟ ಪಡೆದುಕೊಂಡೋ ಪೇಟೆಗೆ ಬಂದು ಹಾಲು ಮೊಸರು ತರಕಾರಿ ಮಾರಲು ತಂದ ಹಳ್ಳಿಯ ಹೆಣ್ಣುಮಕ್ಕಳು ಲಾಕ್ ಡೌನ್ ಸಮಯದಲ್ಲಿ ಪೋಲಿಸರ ಲಾಠಿ ರುಚಿ ಉಂಡ ಹಲವು ಉದಾಹರಣೆಗಳ ನಡುವೆಯೇ ಪೋಲಿಸರ ವಾಹನ ಕಂಡು ಓಡಲು ಹೋಗಿ ತಲೆಯ ಮೇಲಿನ ಬುಟ್ಟಿ ನೆಲಕ್ಕೆ ಬಿದ್ದು ಅವರ ದಿನದ ದುಡಿಮೆಯೆ ಮಣ್ಣು ಪಾಲಾದ ಘಟನೆಗಳು ಕೂಡ ಕರುಳು ಹಿಂಡುತ್ತವೆ.

ಯಾರದೊ ಮನೆಯ ಗೃಹ ಪ್ರವೇಶ ಇನ್ನಾರದೊ ಮಕ್ಕಳ ಮದುವೆಯ ಸಮಯದಲ್ಲಿ ಉಡುಗೊರೆಯಾಗಿ ಬಂದು ಸದ್ಯ
ಬಣ್ಣ ಮಾಸಿದ ಸೀರೆಯಲ್ಲೋ,ಹರಿದ ರವಿಕೆಯಲ್ಲೋ ಮೈ ಮುಚ್ಚಿಕೊಂಡು ಮರ್ಯಾದೆಗೆ ಹೆದರುವ ಹೆಣ್ಣುಮಕ್ಕಳು ಸದ್ಯ ಮನೆಯ ಎದುರು ಇನ್ ಶರ್ಟ ಮಾಡಿಕೊಂಡು,ಕೊರಳಿಗೆ ಟೈ ಕಟ್ಟಿಕೊಂಡು ಒಂದು ಐಡೆಂಟಿ ಕಾರ್ಡು ಹಾಕಿಕೊಂಡು ಬೂಟುಗಾಲಲ್ಲೇ ಅಡುಗೆ ಮನೆಯತನಕ ಬರುವ ಪೈನಾನ್ಸ ಸಿಬ್ಬಂದಿ ತಮ್ಮ ಹರಕು ಬಾಯಲ್ಲಿ ಮನಸಿಗೆ ಬಂದಂತೆ ಮಾತನಾಡಿ ತೆಗೆಯುವ ಮರ್ಯಾದೆಯನ್ನು ಉಳಿಸಿಕೊಳ್ಳಲು ಇನ್ನೆಷ್ಟು ಪರಿತಪಿಸಬೇಕು ಅಲ್ಲವೇ??

ಬಾಲೆಯೊಬ್ಬಳು ಅಕ್ಷರ ಕಲಿತರೆ ಶಾಲೆಯೊಂದು ತೆರೆದಂತೆ,ಭೇಟಿ ಬಚಾವೊ ಭೇಟಿ ಪಡಾವೋ ಅನ್ನುವ ಸರ್ಕಾರಗಳು ಸಾಲದ ಶೂಲಕ್ಕೆ ನೊಂದ ಬಡವರ ಮನೆಯ ಹೆಣ್ಣುಗಳೊಬ್ಬಳು ನೇಣಿಗೆ ಬೀಳುವ ಮುನ್ನ. ಇತ್ತ ಬೆಳಗಾವಿ ಜಿಲ್ಲಾಡಳಿತ ಆಗಲಿ ಸರಕಾರವಾಗಲಿ ಗಮನಹರಿಸ ಬೇಕಾಗಿರುವುದು ಅವಶ್ಯಕವಾಗಿದೆ ಅವರ ಸಾಲಮನ್ನಾ ಮಾಡುವ ಅಥವಾ ಮಹಿಳಾ ಸಬಲೀಕರಣದ ಬಗ್ಗೆ ಯೋಚಿಸಬೇಕಿದೆ ಅನ್ನುವದು ನನ್ನ ಅಭಿಪ್ರಾಯ ಏನಂತೀರಿ??

 

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');