ಮುಂಗಾರು ಬಿತ್ತನೆಗೆ ಬೀಜೋಪಚಾರ-ಡಾ. ಎಸ್. ಎಸ್. ಹಿರೇಮಠ ಸಲಹೆ

0

ಕೆಎಲ್‍ಇ ಸಂಸ್ಥೆಯ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಿಂದ ಗುಣಮಟ್ಟದ ಬೀಜ ಆಯ್ಕೆ ಹಾಗೂ ಬೀಜೋಪಚಾರದ ಮಹತ್ವ ಬಗ್ಗೆ ತರಬೇತಿಯನ್ನು ಆನ್‍ಲೈನ್‍ನಲ್ಲಿ ಆಯೋಜಿಸಲಾಗಿತ್ತು. ತರಬೇತಿಯಲ್ಲಿ 90 ಕ್ಕೂ ಹೆಚ್ಚು ರೈತರು ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಾಧ್ಯಕ್ಷರಾದ ಶ್ರೀ. ಬಿ. ಆರ್. ಪಾಟೀಲ ಅವರು ಭಾಗವಹಿಸಿದ್ದರು.


ಡಾ. ಎಸ್. ಎಸ್. ಹಿರೇಮಠ ತರಬೇತಿಯಲ್ಲಿ ಭಾಗವಹಿಸಿದ ರೈತರಿಗೆ ಪಿಪಿಟಿ ಮೂಲಕ ಬೀಜಗಳ ಆಯ್ಕೆ, ವರ್ಗೀಕರಣ, ಮೊಳಕೆ ಪರೀಕ್ಷೆ ಹಾಗೂ ಬೀಜೋಪಚಾರದಿಂದಾಗುವ ಲಾಭಗಳು ಹೀಗೆ ಅನೇಕ ವಿಷಯಗಳ ಬಗ್ಗೆ ಸವಿಸ್ತಾರವಾಗಿ ತಿಳಿಹೇಳಿದರು.

ಚೀನಾದಿಂದ ಬಿತ್ತನೆ ಬೀಜಗಳನ್ನು ಬೇರೆ ಬೇರೆ ದೇಶಗಳಿಗೆ ಕಳಿಸಲಾಗುತ್ತಿದೆ. ಈ ಬೀಜಗಳು ಕೀಟ ಮತ್ತು ರೋಗಾಣುಗಳಿಂದ ಕೂಡಿದ್ದು, ಅವುಗಳನ್ನು ಬಿತ್ತನೆ ಮಾಡಿದರೆ ತಿಂಗಳಲ್ಲಿಯೇ ಬೆಳೆ ಸಂಪೂರ್ಣ ನಾಶವಾಗುತ್ತದೆ. ಅನಾಮಧೇಯರಿಂದ ಬೀಜ ಬಂದರೆ ರೈತರು ಸ್ವೀಕರಿಸಬಾರದು. ಇಂತಹ ಬಿತ್ತನೆ ಬೀಜದ ಪೊಟ್ಟಗಣಗಳ ಪಾರ್ಸಲ್ ರೈತರು ವಾಪಸ್ ಕಳುಹಿಸಬೇಕು ಒಂದು ವೇಳೆ ಸ್ವೀಕರಿಸಿದರೂ ಪೊಟ್ಟಣದ ಸಮೇತ ಅದನ್ನು ಸುಟ್ಟು ಹಾಕಬೇಕು ಇಲ್ಲವೆ ಸಮೀಪದ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.

ಉತ್ತಮ ಬೀಜ ಆಯ್ಕೆ ಹೇಗೆ?
 ಪ್ರತಿ ಬೆಳೆಗ ದೃಢೀಕರಿಸಿದ ಬೀಜಗಳನ್ನೇ ಬಳಸಬೇಕು
 ಆಯಾ ಪ್ರದೇಶಗಳಿಗೆ ಶಿಫಾರಸ್ಸು ಮಾಡಿದ ಬೀಜಗಳನ್ನೇ ಬಿತ್ತನೆಗೆ ಬಳಸಬೇಕು
 ದೃಢೀಕರಿಸಿದ ಬೀಜಗಳನ್ನು ನೊಂದಾಯಿತ ಕೇಂದ್ರಗಳಿಂದಲೇ ಖರೀದಿಸಬೇಕು
 ಬೀಜದ ಚೀಲದ ಮೇಲೆ ಲೇಬಲ್ ಇದೆಯೋ ಇಲ್ಲವೋ ಪರೀಕ್ಷಿಸಬೇಕು
ಲೇಬಲ್ ಇದ್ದರೆ
• ಬೀಜದ ಮೊಳಕೆ ಪ್ರಮಾಣ
• ಬೀಜದ ತೇವಾಂಶದ ಪ್ರಮಾಣ
• ಬೀಜದ ಕಾಲಾವಧಿ
• ಬೀಜವನ್ನು ಖರೀದಿಸುವಾಗ ತಪ್ಪದೇ ರಸೀದಿಯನ್ನು ಪಡೆಯಬೇಕು
ಬೀಜೋಪಚಾರದ ಉಪಯೋಗಗಳು
• ಬೆಳೆಯಿಂದ ಬೆಳೆಗೆ ಹರಡುವ ರೋಗಗಳನ್ನು ನಿಯಂತ್ರಿಸಬಹುದು
• ಬೀಜ ಕೊಳೆಯುವುದು ಮತ್ತು ಸಸಿ ಒಣಗುವುದನ್ನು ತಡೆಗಟ್ಟಬಹುದು
• ಬೀಜೋಪಚಾರದಿಂದ ಬೀಜದ ಬಳಕೆ ಪ್ರಮಾಣವನ್ನು ಹೆಚ್ಚಿಸಬಹುದು
• ಬೀಜ ದಾಸ್ತಾನಿನಲ್ಲಿ ದಾಸ್ತಾನು ಕೀಟ ಮತ್ತು ಶಿಲೀಂದ್ರಗಳಿಂದ ಬೀಜವನ್ನು ರಕ್ಷಿಸಬಹುದು
• ಬೀಜೋಪಚಾರ ಮಾಡುವುದರಿಂದ ಮಣ್ಣಿನಲ್ಲಿರುವ ಕೀಟಾಣು ಮತ್ತು ರೋಗಾಣುಗಳಿಂದ ಬೀಜವನ್ನು ರಕ್ಷಿಸುವುದಲ್ಲದೆ ಉತ್ತಮ ಮೊಳಕೆ ಪ್ರಮಾಣವನ್ನು ಪಡೆಯಬಹುದು
• ಬೀಜೋಪಚಾರಕ್ಕೆ ತಗಲುವ ಖರ್ಚು ಅತ್ಯಂತ ಕಡಿಮೆ

ಮೊಳಕೆ ಪರೀಕ್ಷೆ ವಿಧಾನಗಳು
ಕಾಗದದ ಮೇಲೆ: ಈ ವಿಧಾನದಲ್ಲಿ ಯಾವುದೇ ಪೆಟ್ರಿ ಪ್ಲೆಟನಲ್ಲಿ ಒಂದು ಅಥವಾ ಎರಡು ಒದ್ದೆಯಾದ ಮೊಳಕೆ ಪರೀಕ್ಷೆಗೆ ಉಪಯೋಗಿಸುವ ಕಾಗದಗಳನ್ನಿರಿಸಿ ಕಾಗದದ ಮೇಲೆ ಬೀಜಗಳನ್ನು ಇಟ್ಟು ಮುಚ್ಚಿಡುವುದು.

ಕಾಗದದ ಮಧ್ಯೆ: ಈ ವಿಧಾನದಲ್ಲಿ ಮೊದಲು ಪ್ಲಾಸ್ಟಿಕ್ ಹಾಳೆಯನ್ನು ಹರಡಿ ಅದರ ಮೇಲೆ ಒಂದು ಅಥವಾ ಎರಡು ಒದ್ದೆಯಾದ ಮೊಳಕೆ ಕಾಗದಗಳನ್ನಿರಿಸಿ ಅದರ ಮೇಲೆ ಸಮಾನಾಂತರದಲ್ಲಿ ಬೀಜಗಳನ್ನು ಇರಿಸಿ ನಂತರ ಮತ್ತೊಂದು ಒದ್ದೆಯಾದ ಕಾಗದದಿಂದ ಮುಚ್ಚಿ ಪ್ಲಾಸ್ಟಿಕ್ ಹಾಳೆಯ ಅಂಚನ್ನು ಮಡಿಚುವುದು. ನಂತರ ಸುರಳಿ ಸುತ್ತಿ ಅಥವಾ ಮಡಚಿ ದಾರ/ರಬ್ಬರ್ ಬ್ಯಾಂಡಿನಿಂದ ಕಟ್ಟುವುದು, ನಂತರ ಅದನ್ನು ಜರ್ಮಿನೇಟರ್ ಡಬ್ಬ ಅಥವಾ ತಂಪಾದ ಜಾಗದಲ್ಲಿ ಇರಿಸುವುದು.

ಮರಳು: ಪ್ಲಾಸ್ಟಿಕ್ ಟ್ರೇ (ತಟ್ಟೆ) ನಲ್ಲಿ 3 ಸೆಂ.ಮೀ. ಸ್ಟರಿಲೈಜ್ ಮಾಡಿದ ಮರಳನ್ನು ಸಮನಾಗಿ ಹರಡಿ ತೇವವಾಗುವಷ್ಟು ನೀರನ್ನು ಚಿಮುಕಿಸಿದ ಮೇಲೆ ಸಮಾನಾಂತರದಲ್ಲಿ ಬೀಜಗಳನ್ನಿರಿಸಿ ಪುನಃ 1-2 ಸೆ.ಮೀ. ಮರಳಿನ ಪದರದಿಂದ ಬೀಜಗಳನ್ನು ಮುಚ್ಚುವುದು. ಸ್ವಲ್ಪ ನೀರನ್ನು ಚಿಮುಕಿಸಿದ ನಂತರ ತಂಪಾದ ವಾತಾವರಣದಲ್ಲಿ ಇಡುವುದು.

ಜೈವಿಕ ಗೊಬ್ಬರಗಳನ್ನು ಉಪಯೋಗಿಸುವ ವಿಧಾನಗಳು
 ಬೀಜೋಪಚಾರ: 70 ಗ್ರಾಂ ಬೆಲ್ಲ ಅಥವಾ ಸಕ್ಕರೆಯನ್ನು 250 ಮಿ.ಲೀ. ನೀರಿನಲ್ಲಿ ಕರಗಿಸಿ 15-20 ನಿಮಿಷಗಳ ಕಾಲ ಕುದಿಸಿ, ತಣ್ಣಗೆ ಮಾಡಿ. ಈ ದ್ರಾವಣಕ್ಕೆ 200 ಗ್ರಾಂ ಜೀವಾಣು ಗೊಬ್ಬರವನ್ನು ಹಾಕಿ ಕಲಸಿ. 1 ಕಿ.ಗ್ರಾಂ. ಬೀಜಕ್ಕೆ ಸುಮಾರು 30-35 ಮಿ.ಲೀ. ಅಂಟು ದ್ರಾವಣ ಬೇಕಾಗುತ್ತದೆ. ಪ್ರತಿ ಬೀಜಕ್ಕೂ ಸಮನಾಗಿ ಅಂಟುವಂತೆ ಮಾಡಿ, ನೆರಳಿನಲ್ಲಿ ಒಣಗಿಸಿದ ತಕ್ಷಣ ಬಿತ್ತನೆ ಮಾಡುವುದು.
 ಕೊಟ್ಟಿಗೆ ಗೊಬ್ಬರವನ್ನು ಪುಷ್ಟಿಕರಿಸಿ ಮಣ್ಣಿಗೆ ಹಾಕುವುದು: 1 ಕಿ.ಗ್ರಾಂ. ಅಷ್ಟು ಅಜಟೋಬ್ಯಾಕ್ಟರ್, 1 ಕಿ.ಗ್ರಾಂ. ರಂಜಕ ಕರಗಿಸುವ ಜೀವಾಣು, 1 ಕಿ.ಗ್ರಾಂ. ಸುಡೊಮೊನಾಸ್ ಹಾಗೂ 1 ಕಿ.ಗ್ರಾಂ. ಟ್ರೈಕೊಡರ್ಮಾವನ್ನು 1 ಟನ್ ಕೊಟ್ಟಿಗೆ ಗೊಬ್ಬರದ ಜೊತೆ ಸೇರಿಸಿ, ಗಾಳಿಯಾಡದಂತೆ ಮುಚ್ಚಿಡಬೇಕು. ಪ್ರತಿ ಎರಡು ದಿನಕ್ಕೊಮ್ಮೆ ಈ ಮಿಶ್ರಣವನ್ನು ಮಿಕ್ಸ್ ಮಾಡಬೇಕು. ಒಂದು ವಾರದ ನಂತರ ಮಣ್ಣಿಗೆ ಸೇರಿಸಬೇಕು.

 ಸಸ್ಯ ಬೇರುಗಳಿಗೆ ಉಪಚರಿಸುವ ವಿಧಾನ: 1 ಕಿ.ಗ್ರಾಂ. ಜೀವಾಣು ಗೊಬ್ಬರವನ್ನು 5 ಲೀಟರ್ ನೀರಿನಲ್ಲಿ ಕಲಸಿ. ಈ ದ್ರಾವಣದಲ್ಲಿ ಪೈರಿನ ಬೇರನ್ನು 30 ನಿಮಿಷಗಳ ಕಾಲ ನೆನೆಸಿ ನಂತರ ಬೆಳೆಯ ಪ್ರದೇಶದಲ್ಲಿ ನಾಟಿಮಾಡುವುದು.
ಕೇಂದ್ರದ ಇನ್ನೊಬ್ಬ ವಿಜ್ಞಾನಿ ಶ್ರಿ. ಎಸ್. ಎಮ್. ವಾರದ ಜೈವಿಕ ಗೊಬ್ಬರಗಳ ಬಳಕೆ ಕುರಿತು ಸವಿಸ್ತಾರವಾಗಿ ವಿವರಿಸಿದರು.
ಧರೆಪ್ಪ ಕಿತ್ತೂರ ಪ್ರಗತಿಪರ ರೈತರು ತಮ್ಮ ಅನುಭವ ಹಂಚಿಕೊಂಡರು.
ಕೊನೆಯಲ್ಲಿ ರೈತರೊಂದಿಗೆ ಸಂವಾದವನ್ನು ಸಹ ಏರ್ಪಡಿಸಿ ರೈತರು ತಮ್ಮ ಪ್ರಶ್ನೆಗಳನ್ನು ಕೇಳುವ ಮೂಲಕ ಹತ್ತು ಹಲವಾರು ಸಲಹೆಗಳನ್ನು ಪಡೆದುಕೊಂಡರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');