ಕೋವಿಡ್ ನಿರ್ವಹಣೆ: ಮುಖ್ಯಮಂತ್ರಿ ಪರಿಶೀಲನೆ ಶಿಕ್ಷಣ, ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಕ್ರಮ: ಬಿಎಸ್.ಯಡಿಯೂರಪ್ಪ

0

ಬೆಳಗಾವಿ, ಜೂ.4 : ಕೋವಿಡ್ ಸಮರ್ಪಕ ನಿರ್ವಹಣೆ; ಆಕ್ಸಿಜೆನ್, ಲಸಿಕೆ ಪೂರೈಕೆಗೆ ಸರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳ ಬಲವರ್ಧನೆಗೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಕೋವಿಡ್ ನಿರ್ವಹಣೆ ಹಾಗೂ ಇತರೆ ಅಭಿವೃದ್ಧಿ ವಿಷಯಗಳ ಕುರಿತು ಸುವರ್ಣ ವಿಧಾನ ಸೌಧದಲ್ಲಿ ಶುಕ್ರವಾರ (ಜೂ.4) ನಡೆದ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಳಗಾವಿ ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳನ್ನು ಒದಗಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆಯ ಸಚಿವರ ಜತೆ ಚರ್ಚಿಸಿ ಸೂಚನೆಯನ್ನು ನೀಡಲಾಗಿದೆ.


ಕೋವಿಡ್ ನಿರ್ವಹಣೆ ಸೇರಿದಂತೆ ಜಿಲ್ಲೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಶಾಸಕರು ಜಿಲ್ಲೆಯ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಚರ್ಚಿಸಿ ಸ್ಥಳೀಯವಾಗಿ ಬಗೆಹರಿಸಿಕೊಳ್ಳುವುದು ಪರಿಣಾಮಕಾರಿ ಯಾಗಲಿದೆ. ಆದ್ದರಿಂದ ಏನೇ ಅಹವಾಲು ಅಥವಾ ಸಮಸ್ಯೆಗಳು ಇದ್ದರೆ ಉಸ್ತುವಾರಿ ಸಚಿವರ ಜತೆ ಚರ್ಚಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಮನೆಹಾನಿ: ಹಣ ಬಳಸಿದರೆ 24 ಗಂಟೆಗಳಲ್ಲಿ ಮುಂದಿನ ಕಂತು ಬಿಡುಗಡೆ ಭರವಸೆ:

 
ಪ್ರವಾಹ ಸಂದರ್ಭದಲ್ಲಿ ಹಾನಿಗೊಳಗಾದ ಮನೆಗಳ ನಿರ್ಮಾಣಕ್ಕೆ ಬಿಡುಗಡೆಯಾದ ಹಣ ಬಳಸಿಕೊಂಡು ಸರ್ಟಿಫಿಕೇಟ್ ನೀಡಿದರೆ 24 ಗಂಟೆಗಳಲ್ಲಿ ನಂತರದ ಕಂತು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆಯನ್ನು ನೀಡಿದರು.
ಬಿಮ್ಸ್ ಗೆ ಆಡಳಿತಾಧಿಕಾರಿ ನೇಮಕ:

ಕೋವಿಡ್ ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ಒದಗಿಸುವುದು ಸೇರಿದಂತೆ ಆಡಳಿತಾತ್ಮಕ ಸುಧಾರಣೆಗೆ ಅನುಕೂಲವಾಗುವಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರನ್ನು ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್)ಯ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಭೆಯಲ್ಲಿ ಪ್ರಕಟಿಸಿದರು.

ಬಿಮ್ಸ್ ಅಗತ್ಯ ಸಿಬ್ಬಂದಿಯ ನೇಮಕಾತಿಗಾಗಿ ಈಗಾಗಲೇ ಅನುಮತಿಯನ್ನು ನೀಡಲಾಗಿದೆ. 20 ಕೆ.ಎಲ್. ಆಕ್ಸಿಜನ್ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲಾ ಆಸ್ಪತ್ರೆಗಳ ಮೂಲ ಸೌಕರ್ಯಗಳನ್ನು ಒದಗಿಸಲು ಸರಕಾರ ಬದ್ಧವಿದೆ ಎಂದು ತಿಳಿಸಿದರು.

ಉಪ ಮುಖ್ಯಮಂತ್ರಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ತಾಲ್ಲೂಕು ಆಸ್ಪತ್ರೆಗಳಲ್ಲಿ ಇರುವ ವೆಂಟಿಲೇಟರ್ ಗಳ ಬಳಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಇಲಾಖೆಯ ಸಚಿವರಾದ ಲಕ್ಷ್ಮಣ ಸವದಿ ಅವರು, ಸಂಭವನೀಯ ಮೂರನೇ ಅಲೆಯ ವೇಳೆ ಉಂಟಾಗುವ ಸಮಸ್ಯೆ ಎದುರಿಸಲು ಎಂಟು ಲಕ್ಷ ವೆಚ್ಚದಲ್ಲಿ ಆಕ್ಸಿಜನ್ ಬೆಡ್ ಸೌಲಭ್ಯ ಹೊಂದಿರುವ ಬಸ್ ಗಳನ್ನು ಸಜ್ಜುಗೊಳಿಸಲಾಗಿದೆ.
ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ಶಾಸಕರು ಹಾಗೂ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿದಿಯಡಿ ತಾಲ್ಲೂಕುಗಳಲ್ಲಿ ಇಂತಹ ಬಸ್ ಸೌಲಭ್ಯಗಳನ್ನು ಕಲ್ಪಿಸಬಹುದು. ಸಂಸದರು ಹಾಗೂ ಶಾಸಕರು ಈ ಬಗ್ಗೆ ಚಿಂತನೆ ನಡೆಸಬೇಕು ಎಂದು ಸವದಿ ಹೇಳಿದರು.
ಬೆಳಗಾವಿಗೆ 144 ವೈದ್ಯರ ನೇಮಕಾತಿ:
ಜಿಲ್ಲೆಗೆ ಏಳು ಆಕ್ಸಿಜನ್ ಘಟಕಗಳನ್ನು ಮುಖ್ಯಮಂತ್ರಿಗಳು ಮಂಜೂರು ಮಾಡಿರುತ್ತಾರೆ. ಆದಷ್ಟು ಬೇಗನೇ ಈ ಘಟಕಗಳು ಕಾರ್ಯಾರಂಭಿಸಲಿವೆ ಎಂದು ಆರೋಗ್ಯ ಇಲಾಖೆಯ ಸಚಿವರಾದ ಡಾ.ಕೆ.ಸುಧಾಕರ್ ತಿಳಿಸಿದರು.
ಜಿಲ್ಲೆಗೆ ಒಟ್ಟು 144 ವೈದ್ಯರನ್ನು ನೇಮಿಸಲಾಗಿದೆ. ಇದರಲ್ಲಿ 54 ಜನರು ತಜ್ಞರನ್ನು ನಿಯೋಜಿಸಲಾಗಿದೆ. ದೇಶದಲ್ಲಿ ಅತೀ ಹೆಚ್ಚು ಕೋವಿಡ್ ಪರೀಕ್ಷೆಯನ್ನು ರಾಜ್ಯದಲ್ಲಿ ಮಾಡಲಾಗುತ್ತಿದ್ದು, ಇದುವರೆಗೆ ಮೂರು ಕೋಟಿ ಮಾದರಿ ಪರೀಕ್ಷೆ ಮಾಡಲಾಗಿದೆ ಎಂದು ಸಚಿವ ಡಾ.ಸುಧಾಕರ್ ತಿಳಿಸಿದರು.
ಜೂನ್ ಅಂತ್ಯಕ್ಕೆ 58 ಲಕ್ಷ ಲಸಿಕೆ ಪೂರೈಕೆ:
ಕರ್ನಾಟಕ ರಾಜ್ಯಕ್ಕೆ ಜೂನ್ ಅಂತ್ಯದ ವೇಳೆಗೆ 58 ಲಕ್ಷ ಲಸಿಕೆಗಳು ಪೂರೈಕೆಯಾಗಲಿವೆ. ಆಗ ಲಸಿಕೆ ಕೊರತೆಯ ಸಮಸ್ಯೆ ಪರಿಹಾರಗೊಳ್ಳಲಿದೆ ಎಂದು ಡಾ.ಸುಧಾಕರ್ ಹೇಳಿದರು.
ಕೋವಿಡ್ ಪರೀಕ್ಷೆ ಇನ್ನಷ್ಟು ಹೆಚ್ಚಿಸಲು ಸತೀಶ್ ಜಾರಕಿಹೊಳಿ ಆಗ್ರಹ:
ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಬೇಕು, ಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯಗೊಳಿಸಬೇಕು.ಎಲ್ಲ ಹೊಸ ತಾಲ್ಲೂಕುಗಳಿಗೆ ನೂರು ಹಾಸಿಗೆ ಆಸ್ಪತ್ರೆ ಮಂಜೂರು ಮಾಡಬೇಕು ಎಂದು ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಆಯುಷ್ಮಾನ್-ಆರೋಗ್ಯ ಭಾರತ ಯೋಜನೆಯಡಿ ಸೇವೆ ಒದಗಿಸಿದ ಖಾಸಗಿ ಆಸ್ಪತ್ರೆಗಳ ಬಿಲ್ ಪಾವತಿಸಬೇಕು. ಆರ್.ಎಂ.ಪಿ. ವೈದ್ಯರಿಗೂ ಚಿಕಿತ್ಸೆಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಸತೀಶ್ ಜಾರಕಿಹೊಳಿ ಒತ್ತಾಯಿಸಿದರು.
ಚಿಕ್ಕೋಡಿಗೆ ಕೋವಿಡ್ ಪರೀಕ್ಷೆಗೆ ಪ್ರಯೋಗಾಲಯ ಹಾಗೂ ಜಿಲ್ಲಾ ಆಸ್ಪತ್ರೆ ಸ್ಥಾಪಿಸಬೇಕು ಎಂದು ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಮನವಿ ಮಾಡಿಕೊಂಡರು.
ಜಿಲ್ಲೆಗೆ ಮಂಜೂರಾದ 7 ಆಕ್ಸಿಜನ್ ಘಟಕ ಶೀಘ್ರ ಆರಂಭಿಸಬೇಕು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯಿಸಿದರು. ಸಂಸದೆ ಮಂಗಲಾ ಅಂಗಡಿ ಅವರು, ಜಿಲ್ಲೆಗೆ ನೇಮಕಗೊಂಡ ವೈದ್ಯರನ್ನು ತಕ್ಷಣವೇ ಕರ್ತವ್ಯಕ್ಕೆ ನಿಯೋಜಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಮಹೇಶ್ ಕುಮಠಳ್ಳಿ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರು ತಮ್ಮ ಕ್ಷೇತ್ರದಲ್ಲಿ ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಚಿಕಿತ್ಸೆಗೆ ತಾಲ್ಲೂಕು ಮಟ್ಟದ ತಜ್ಞರ ಸಮಿತಿ ರಚನೆಗೆ ಸಲಹೆ:
ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕುಡಚಿ ಶಾಸಕ ಪಿ.ರಾಜೀವ್ ಅವರು ಮಾತನಾಡಿ, ಆರ್ಟಿ-ಪಿ.ಸಿ.ಆರ್. ವರದಿ ನೇರವಾಗಿ ವ್ಯಕ್ತಿಗೆ ನೀಡುವ ಬದಲು ತಾಲ್ಲೂಕು ಮಟ್ಟದ ತಜ್ಞರ ಸಮಿತಿಗೆ ಬರಬೇಕು. ಆ ಸಮಿತಿಯು ಸೋಂಕಿತರಿಗೆ ಅಗತ್ಯವಿರುವ ಚಿಕಿತ್ಸೆಯನ್ನು ಶಿಫಾರಸು ಮಾಡುವ ವ್ಯವಸ್ಥೆ ಜಾರಿಗೆ ತಂದರೆ ಅನಗತ್ಯವಾಗಿ ಆಕ್ಸಿಜನ್ ಬೆಡ್ ಪಡೆದುಕೊಳ್ಳುವುದಕ್ಕೆ ಕಡಿವಾಣ ಹಾಕಬಹುದು ಎಂದು ಸಲಹೆ ನೀಡಿದರು.
ಸ್ಟಿರಾಯಿಡ್ ಅತೀ ಬಳಕೆಯ ಪರಿಣಾಮ ಬ್ಲ್ಯಕ್ ಫಂಗಸ್ ಉಲ್ಬಣ. ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರು ಕಡ್ಡಾಯವಾಗಿ ರೋಗಿಗಳ ರಿಜಿಸ್ಟರ್ ನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ಶಾಸಕಿ ಅಂಜಲಿ ನಿಂಬಾಳಕರ್ ಅವರು, ಕೋವಿಡ್ ಸಂಕಷ್ಟದ ಲ್ಲಿರುವ ವಿಕಲಚೇತನರಿಗೆ ಕೂಡ ಪ್ಯಾಕೇಜ್ ನಡಿ ಪರಿಹಾರ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ್ ಕೋರೆ ಮಾತನಾಡಿ, ಲಸಿಕೆ ಖರೀದಿಗೆ ಸಂಬಂಧಿಸಿದ ಹಣವನ್ನು ಮುಂಚಿತವಾಗಿಯೇ ನೀಡಿ ಎಂಟು ದಿನ ಕಳೆದರೂ ಲಸಿಕೆ ಸಿಗುತ್ತಿಲ್ಲ. ಲಸಿಕೆ ಖರೀದಿಗೆ ದೆಹಲಿಯಿಂದ ಅನುಮತಿ ನೀಡಬೇಕಿರುವುದರಿಂದ ಲಸಿಕೆ ಪೂರೈಕೆ ವಿಳಂಬವಾಗುತ್ತಿದೆ. ಸರಕಾರ ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆಯುಷ್ಮಾನ್ ಭಾರತ-ಸಮರ್ಪಕ ವ್ಯವಸ್ಥೆಗೆ ಶಾಸಕ ಅಭಯ್ ಪಾಟೀಲ ಒತ್ತಾಯ:
ಆಯುಷ್ಮಾನ ಭಾರತ-ಆರೋಗ್ಯ ಕರ್ನಾಟಕ ಸೌಲಭ್ಯ ಸಮರ್ಪಕವಾಗಿ ದೊರಕುತ್ತಿಲ್ಲ. ಆದ್ದರಿಂದ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.
ಈ ಯೋಜನೆಯಡಿ ಕೋವಿಡ್ ಚಿಕಿತ್ಸೆ ನೀಡಲು ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಅಭಯ್ ಪಾಟೀಲ ಒತ್ತಾಯಿಸಿದರು. ಜಿಲ್ಲೆಯ ಜನಸಂಖ್ಯೆಯ ಅನುಗುಣವಾಗಿ ಲಸಿಕೆ ಪೂರೈಕೆಯಾಗುತ್ತಿಲ್ಲ ಎಂದು ಅವರು ಹೇಳಿದರು.
ಶಾಸಕ ಅನಿಲ್ ಬೆನಕೆ, ಐವತ್ತಕ್ಕೂ ಅಧಿಕ ವೆಂಟಿಲೇಟರ್ ಗಳು ಬಳಕೆ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿಗಳ ಗಮನಸೆಳೆದರು.
ಶಾಸಕ ಗಣೇಶ್ ಹುಕ್ಕೇರಿ ಅವರು ಮಾತನಾಡಿ, ಫ್ರಂಟಲೈನ್ ವಾರಿಯರ್ಸ್ ಆಗಿ ಕೆಲಸ ಮಾಡಿರುವ ಕೆಲವು ಜನರಿಗೆ ಪ್ಯಾಕೇಜ್ ಸೌಲಭ್ಯ ದೊರಕಿಲ್ಲ. ಹೀಗೆ ಕೈಬಿಟ್ಟು ಹೋಗಿರುವ ವಾರಿಯರ್ಸ್ ಗಳಿಗೆ ಮುಂಬರುವ ದಿನಗಳಲ್ಲಿ ಪ್ಯಾಕೇಜ್ ಸೌಲಭ್ಯ ನೀಡಬೇಕು ಎಂದರು.
ಔಷಧಿ ಕೊರತೆ ನೀಗಿಸಲು ಮನವಿ:
ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದ ಕೆಲ ಔಷಧಿಗಳ ಕೊರತೆಯಿದ್ದು, ಕೂಡಲೇ ಪೂರೈಸಬೇಕು.
ತಾಲ್ಲೂಕು ಆಸ್ಪತ್ರೆಗಳಲ್ಲಿ ಭವಿಷ್ಯದಲ್ಲಿ ಅಗತ್ಯವಿರುವ ಆಕ್ಸಿಜನ್ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಘಟಕಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ತಮ್ಮ ಕ್ಷೇತ್ರದಲ್ಲಿ ಇರುವ ಎಂಟು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು ಎಂದು ಮನವಿ ಮಾಡಿಕೊಂಡರು.
ರ್ಯಾಟ್ ಜತೆಗೆ ಲಸಿಕಾಕರಣ ಆರಂಭಿಸಿದರೆ ಜನರು ಸೋಂಕು ಪರೀಕ್ಷೆ ಮತ್ತು ಲಸಿಕೆಗೆ ಜನರು ಮುಂದಾಗುತ್ತಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಬಿಮ್ಸ್ ನಲ್ಲಿ 79 ವೆಂಟಿಲೇಟರ್ ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಬಿಮ್ಸ್ ನಿರ್ದೇಶಕ ಡಾ.ಕುಲಕರ್ಣಿ ತಿಳಿಸಿದರು.
ಚಿಕ್ಕೋಡಿಯಲ್ಲಿ ಲ್ಯಾಬ್ ಆರಂಭಕ್ಕೆ ಅನುಮತಿ:
ಜಿಲ್ಲೆಯಲ್ಲಿ ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೂಡ ಕೋವಿಡ್ ಕೇರ್ ಕೇಂದ್ರಗಳನ್ನು ಆರಂಭಿಸಲಾಗಿದೆ. 2 ನೇ ಅಲೆಯಲ್ಲಿ 2.75 ಮಾದರಿ ಸಂಗ್ರಹಿಸಲಾಗಿದ್ದು, ಇದರಲ್ಲಿ 41,544 ಜನರಿಗೆ ಸೋಂಕು ದೃಢಪಟ್ಟಿರುವುದು ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಚಿಕ್ಕೋಡಿಯಲ್ಲಿ ಕೋವಿಡ್ ಪ್ರಯೋಗಾಲಯಕ್ಕೆ ಕೇಂದ್ರ ಆರೋಗ್ಯ ಇಲಾಖೆ ಅನುಮತಿ ನೀಡಿದೆ.

ಜಿಲ್ಲೆಯಲ್ಲಿ ಸದ್ಯಕ್ಕೆ ಪಾಸಿಟಿವಿಟಿ ದರ ಶೇ. 11.83 ರಷ್ಟಿದೆ. ಕ್ರಮೇಣ ಕಡಿಮೆಯಾಗುತ್ತಿದ್ದು, ಕೆಲ ತಾಲ್ಲೂಕುಗಳಲ್ಲಿ ಶೇ.5 ಕ್ಕಿಂತ ಕಡಿಮೆಯಿದೆ. ಹುಕ್ಕೇರಿ ಸೇರಿದಂತೆ ಮೂರು ತಾಲ್ಲೂಕುಗಳಲ್ಲಿ ಮಾತ್ರ ಪಾಸಿಟಿವಿಟಿ ದರ ಹೆಚ್ಚು ಕಂಡುಬಂದಿದೆ.
ಲಸಿಕಾಕರಣ ಕೂಡ ಚುರುಕಿನಿಂದ ನಡೆದಿದೆ. ಜಿಲ್ಲೆಯ ಎಲ್ಲ ಹಳ್ಳಿಗಳಲ್ಲಿ ರ್ಯಾಟ್ ಮೂಲಕ ಸೋಂಕು ಪತ್ತೆ ಹಚ್ಚಲಾಗುತ್ತಿದೆ.
ಜಿಲ್ಲೆಯ 1300 ಕ್ಕೂ ಹಳ್ಳಿಗಳ ಪೈಕಿ ಇದುವರೆಗೆ 1172 ಗ್ರಾಮಗಳಲ್ಲಿ ರ್ಯಾಟ್ ನಡೆಸಲಾಗಿದೆ. 41,945 ರ್ಯಾಟ್ ಮಾಡಲಾಗಿದ್ದು, ಪಾಸಿಟಿವಿಟಿ ದರ ಶೇ.5 ರಷ್ಟಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ವಿವರಿಸಿದರು. ಬೆಳಗಾವಿಯ ಬಿಮ್ಸ್ ನಲ್ಲಿ ಕೋವಿಡ್ ಪ್ರಮಾಣ ದರ ಶೇ.78 ರಷ್ಟಿದೆ.
ಬಿಮ್ಸ್ ನಲ್ಲಿ ಉತ್ತಮ ಸೌಲಭ್ಯ ಒದಗಿಸಲು ಅಗತ್ಯವಿರುವ ವೈದ್ಯರು ಹಾಗೂ ಇತರೆ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. 100 ಕ್ಕೂ ಅಧಿಕ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ಸ್ವಚ್ಛತೆ ಹಾಗೂ ಭದ್ರತೆಗೆ ನಿಯೋಜಿಸಲಾಗಿದೆ.
ರೋಗಿಗಳ ಕುಟುಂಬದವರಿಗೆ ತುರ್ತಾಗಿ ಮೃತದೇಹವನ್ನು ನೀಡಲು ಹಾಗೂ ಅನಾಥ ರೋಗಿಗಳ ಅಂತ್ಯಕ್ರಿಯೆಗೂ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಗೃಹಸಚಿವರಾದ ಬಸವರಾಜ ಬೊಮ್ಮಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ, ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಾದ ಉಮೇಶ್ ಕತ್ತಿ, ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಮಂತ ಪಾಟೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');