ಅಮೇಜಾನ್ ಆನ್‌ಲೈನ್ ಶಾಪಿಂಗ್ ಸಂಸ್ಥೆಯಿಂದ ಕನ್ನಡಕ್ಕೆ ಅಪಮಾನ; ಕ್ರಮಕ್ಕೆ ಆಗ್ರಹಿಸಿದ ಕರವೇ

0

ಬೆಂಗಳೂರು: ಎರಡು ದಿನದ ಹಿಂದಷ್ಟೇ ಬೃಹತ್ ಸರ್ಚ್ ಇಂಜಿನ್ ಗೂಗಲ್‌ನಲ್ಲಿ ಕನ್ನಡ ಭಾಷೆಗೆ ಅವಮಾನವಾಗುವಂಥ ಸಂಗತಿ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಅಮೇಜಾನ್ ಆನ್‌ಲೈನ್ ಶಾಪಿಂಗ್ ಸಂಸ್ಥೆಯಲ್ಲೂ ಕನ್ನಡಕ್ಕೆ ಅಗೌರವ ತೋರುವ ಕೆಲಸವೊಂದು ನಡೆದಿದೆ.

ಕನ್ನಡ ಬಾವುಟದ ಬಣ್ಣ, ಲಾಂಛನವನ್ನು ಹೊಂದಿರುವ ಮಹಿಳೆಯರ ಒಳ ಉಡುಪುಗಳನ್ನು ಶಾಪಿಂಗ್ ಆಯ್ಕೆಗೆ ಇಡಲಾಗಿದೆ.

ಕನ್ನಡದ ಬಾವುಟದ ಬಣ್ಣ, ಭಾರತದ ಅಶೋಕ ಚಕ್ರ ಹಾಗೂ ಕರ್ನಾಟಕದ ಲಾಂಛನ ಬಳಸಿರುವ ಮಹಿಳೆಯರ ಒಳ ಉಡುಪನ್ನು ಅಮೇಜಾನ್ ಸಂಸ್ಥೆ ಆನ್‌ಲೈನ್‌ನಲ್ಲಿ ಶಾಪಿಂಗ್ ಆಯ್ಕೆಯಲ್ಲಿಟ್ಟಿದೆ.

ಕನ್ನಡ ಬಾವುಟ ಹಾಗೂ ಲಾಂಛನವನ್ನು ಈ ರೀತಿ ಬಳಸಿಕೊಂಡು ನಾಡಿನ ಗೌರವಕ್ಕೆ ಚ್ಯುತಿ ತಂದಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕೂಡಲೇ ಅಮೇಜಾನ್ ಸಂಸ್ಥೆ ಕ್ಷಮೆ ಕೇಳಬೇಕು. ರಾಜ್ಯ ಸರ್ಕಾರ ಕನ್ನಡಿಗರಿಗಾಗಿಯೇ ಒಂದು ಸೈಬರ್ ಕ್ರೈಮ್ ಸೆಲ್ ಶುರು ಮಾಡಬೇಕು. ಇದೇ ರೀತಿ ಕನ್ನಡಿಗರಿಗೆ ಅವಮಾನ ಮಾಡಿದರೆ ಮಾಸ್ಕ್ ಚಳುವಳಿ ಬಿಟ್ಟು, ಮಚ್ಚು ಹಿಡಿದು ಚಳುವಳಿ ಮಾಡಬೇಕಾಗುತ್ತದೆ ಎಂದು ಪ್ರವೀಣ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ಸಾಮಾಜಿಕ ಜಾಲತಾಣದಲ್ಲೂ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕನ್ನಡಿಗರು ಕಟು ಶಬ್ಧಗಳ ಮೂಲಕ ಅಮೇಜಾನ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕೂಡಲೇ ಇದನ್ನು ಸರಿಪಡಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ.

ಅವಮಾನ ಮಾಡಿ ಕ್ಷಮೆ ಕೇಳಿದ್ದ ಗೂಗಲ್: ಎರಡು ದಿನಗಳ ಹಿಂದಷ್ಟೇ ತಂತ್ರಜ್ಞಾನ ದೈತ್ಯ ಎಂದು ಕರೆಯಲ್ಪಡುವ ಗೂಗಲ್​ನ ಸರ್ಚ್ ಎಂಜಿನ್‌ನಲ್ಲಿ ಇದೇ ರೀತಿ ಆಗಿತ್ತು. ಭಾರತದಲ್ಲೇ ಅತ್ಯಂತ ಕೊಳಕು ಭಾಷೆ ಯಾವುದು ಎಂದು ಹುಡುಕಿದರೆ ಕನ್ನಡ ಎಂಬ ಉತ್ತರ ಬರುತ್ತಿತ್ತು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಗೊಂಡಿತ್ತು.

ಗೂಗಲ್​ನಂತಹ ದೊಡ್ಡ ಸಂಸ್ಥೆ ಕನ್ನಡ ಭಾಷೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಹಾಗೂ ಈ ಕೂಡಲೇ ಪ್ರಮಾದವನ್ನು ಸರಿಪಡಿಸಬೇಕು ಎಂದು ಕನ್ನಡಿಗರು ಒತ್ತಾಯಿಸಿದ್ದರು.

ಕೊನೆಗೆ ಗೂಗಲ್ ತಪ್ಪನ್ನು ತಿದ್ದಿಕೊಂಡು ಕನ್ನಡ ಭಾಷೆಯಲ್ಲಿಯೇ ಕ್ಷಮೆ ಕೇಳಿತ್ತು. ಇದೀಗ ಮತ್ತೆ ಅಂಥ ಘಟನೆ ಅಮೇಜಾನ್ ನಿಂದ ಮರುಕಳಿಸಿದೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');