ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮುಂದುವರೆದ ಸಾವಿನ ಸರಣಿ; ಬಿಮ್ಸ್ ನಲ್ಲಿ ಸತ್ತವರೆಷ್ಟು?

ಸಿಬ್ಬಂದಿಯ ನಿರ್ಲಕ್ಷ್ಯ ಆರೋಪ; ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದ ಸಾವಿನ ಪ್ರಕರಣಗಳು

0

ಬೆಳಗಾವಿ: ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ 2ನೇ ಅಲೆ ಆರಂಭವಾದಾಗಿನಿಂದಲೂ ಸಾವಿನ ಸರಣಿ ಮುಂದುವರೆದಿದ್ದು, ಪ್ರತಿದಿನ ಹತ್ತಾರು ಕೊರೊನಾ ಸೋಂಕಿತರು ಆಸ್ಪತ್ರೆಯಲ್ಲಿ ಅಸುನೀಗುತ್ತಿದ್ದಾರೆ.

ಕಳೆದ‌ ಹದಿನೈದು ದಿನಗಳಲ್ಲಿ ಬರೋಬ್ಬರಿ 121 ಜನ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ಪ್ರಕಾರ ಕಳೆದ 15 ರಿಂದ 20 ದಿನಗಳಿಂದಲೂ ಬಿಮ್ಸ್ ನಲ್ಲಿ ಪ್ರತಿದಿನ 5 ರಿಂದ 10 ರೋಗಿಗಳು ಸಾವನ್ನಪ್ಪುತ್ತಿದ್ದಾರೆ.

ಸಿಬ್ಬಂದಿಗಳ ನಿರ್ಲಕ್ಷ್ಯ ಆರೋಪ:

ಬಿಮ್ಸ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ ರೋಗಿಗಳು ಸಾವಿಗೀಡಾಗುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.  ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಸಂಬಂಧಿಕರು ರೋಸಿ ಹೋಗಿದ್ದಾರೆ. ಆಸ್ಪತ್ರೆಯಲ್ಲಿನ ಅವ್ಯವಸ್ಥೆಯಿಂದ ಪ್ರತಿದಿನ ಸಿಬ್ಬಂದಿ ಹಾಗೂ ರೋಗಿಗಳ ಸಂಬಂಧಿಕರ ನಡುವೆ ಒಂದಿಲ್ಲೊಂದು ಗಲಾಟೆಗಳು ಇಲ್ಲಿ ನಡೆದೇ ನಡೆಯುತ್ತವೆ. ಇದು ಸರ್ವೇ ಸಾಮಾನ್ಯ ಎಂಬಂತಾಗಿದೆ.

ಕೆಲ ದಿನಗಳಿಂದ ಬಿಮ್ಸ್ ಅವ್ಯವಸ್ಥೆ ಇಡೀ ರಾಜ್ಯದ ಗಮನ ಸೆಳೆದಿತ್ತು. ಖುದ್ದು ಸಚಿವರೇ ಇಲ್ಲಿನ ಅವ್ಯವಸ್ಥೆ ಬಗ್ಗೆ ಕಿಡಿಕಾರಿದ್ದರು. ಇಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲು ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ಬೆಳಗಾವಿಗೆ ಬರಬೇಕಾಯಿತು.

ಮುಖ್ಯಮಂತ್ರಿಗಳು ಬಿಮ್ಸ್ ನ ಹಿಂದಿನ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಅವರನ್ನು ಬದಲಾವಣೆ ಮಾಡಿ, ಬೆಳಗಾವಿ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿದ್ದಾರೆ. ಇನ್ನಾದರು ಇಲ್ಲಿನ ವ್ಯವಸ್ಥೆ ಸುಧಾರಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಜಿಲ್ಲೆಯಲ್ಲಿ 15 ದಿನಗಳಲ್ಲಿ 206 ಸೋಂಕಿತರ ಬಲಿ:

ಬಿಮ್ಸ್ ಮಾತ್ರವಲ್ಲದೇ ಗೋಕಾಕ, ಹುಕ್ಕೇರಿ, ಬೈಲಹೊಂಗಲ ಹಾಗೂ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗಳಲ್ಲೂ ಪ್ರತಿದಿನ ಒಬ್ಬ ರೋಗಿಯಾದರು ಮೃತಪಡುತ್ತಿದ್ದಾರೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಕಳೆದ 15 ದಿನಗಳಲ್ಲಿ 206 ಜನ ಕೊರೊನಾ ಸೋಂಕಿತರು ಸಾವಿಗೀಡಾಗಿದ್ದಾರೆ.

ನೆರೆಯ ಮಹಾರಾಷ್ಟ್ರದ ಮೀರಜ್ ಹಾಗೂ ಇಂಚಲಕರಂಜಿಯ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಾದ ಜಿಲ್ಲೆಯ ಕೆಲವು ಕೊರೊನಾ ಸೋಂಕಿತರು ಕೂಡ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಹೊಸ ಪ್ರಕರಣಗಳು ಇಳಿಕೆಯಾಗುತ್ತಿವೆ. ಎರಡು ದಿನಗಳಿಂದ ಸಾವಿರಕ್ಕೂ ಕಡಿಮೆ ಪ್ರಕರಣಗಳು ವರದಿಯಾಗಿವೆ. ಆದರೆ, ಸಾವಿನ ಪ್ರಕರಣಗಳು ಮಾತ್ರ ಇಳಿಕೆಯಾಗುತ್ತಲೇ ಇಲ್ಲ. ಇದು ಜಿಲ್ಲೆಯ ಜನರನ್ನು ಕಂಗೆಡಿಸಿದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');