ಸಿಂಧೂರಿ ಸಹವಾಸ ಮಾಡಿದ ಐಎಎಸ್ ಅಧಿಕಾರಿ ಸಾವಿನ ಬಗ್ಗೆ ನಾವೂ ಸಿನಿಮಾ ಮಾಡ್ತೀವಿ: ಸಾ.ರಾ. ಮಹೇಶ್ ಟಾಂಗ್

0

ಮೈಸೂರು: ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ನಡುವಿನ ಕಿತ್ತಾಟ ಇನ್ನೂ ಮುಂದುವರೆದಿದೆ.

ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಾ.ರಾ. ಮಹೇಶ್, “ರೋಹಿಣಿ ಸಿಂಧೂರಿ ಬಗ್ಗೆ ಸಿನಿಮಾ ಮಾಡುತ್ತಿದ್ದಾರಂತೆ, ಮಾಡಲಿ. ನಾವೂ ಕೂಡ ಐಎಎಸ್ ಅಧಿಕಾರಿ ಡಿ.ಕೆ. ರವಿ ಸಾವಿನ ವಿಚಾರವಾಗಿ ಸಿಬಿಐ ವರದಿಯನ್ನು ಆಧರಿಸಿ ಸಿನಿಮಾ ತೆಗೆಯುತ್ತೇವೆ” ಎಂದು ವ್ಯಂಗ್ಯವಾಡಿದ್ದಾರೆ.

“ಮೊದಲು ಅಧಿಕಾರಿಗಳ ಕೆಲಸ ಏನು ಎಂಬುದನ್ನು ಸಿಂಧೂರಿ ಅರಿತುಕೊಳ್ಳಬೇಕು. ಅವರಿಗೇಕೆ ಪ್ರಚಾರದ ಹುಚ್ಚು?” ಎಂದು ಟೀಕಿಸಿದರು.

ನಾನೇ ಸಿನಿಮಾ ನಿರ್ಮಾಣ‌ ಮಾಡುತ್ತೇನೆ:
“‘ಭಾರತ ಸಿಂಧೂರಿ’ ಎಂಬ ಹೆಸರಿನಲ್ಲಿ ರೋಹಿಣಿ ಸಿಂಧೂರಿ ಜೀವನಾಧಾರಿತ ಸಿನಿಮಾ ತೆರೆಗೆ ಬರಲಿರುವ ವಿಚಾರವಾಗಿ ವ್ಯಂಗ್ಯವಾಡಿರುವ ಶಾಸಕ ಸಾ.ರಾ. ಮಹೇಶ್, ರೋಹಿಣಿ ಸಿಂಧೂರಿ ಕತೆಯಾಧಾರಿಯ ಸಿನಿಮಾ ಬಿಡುಗಡೆಯಾದ ಮೇಲೆ ಮತ್ತೊಂದು ಸಿನಿಮಾ ಬಿಡುಗಡೆಯಾಗಲಿದೆ. ಬಡ ರೈತನ ಮಗ ಐಎಎಸ್ ಅಧಿಕಾರಿಯಾಗಿ ಆಂಧ್ರದ ಅಧಿಕಾರಿಯ ಸಹವಾಸ ಮಾಡಿ ಏನೆಲ್ಲ ಆದ ಎಂಬುದನ್ನು ಸಿಬಿಐ ವರದಿ ಆಧರಿಸಿ ನಾನೇ ಸಿನಿಮಾ ನಿರ್ಮಾಣ‌ ಮಾಡುತ್ತೇನೆ” ಎಂದು ಹೇಳಿದ್ದಾರೆ.

“ಪೈಲೆಟ್ ಯೋಜನೆಯಡಿ ಈಜುಕೊಳ ಮಾಡುವುದಿದ್ದರೆ ಹಿಂದುಳಿದ ತಾಲ್ಲೂಕಿನಲ್ಲಿ ಮಾಡಿ. ನಿಮ್ಮ ಮನೆಗೆ ಏಕೆ ಮಾಡಿಸಿಕೊಂಡಿರಿ? ನೀವು ಮಾದರಿಯಾಗಬೇಕೆಂದರೆ ಆಶ್ರಯ ಮನೆ ಕಟ್ಟಿಸಿಕೊಂಡು ವಾಸ ಮಾಡಿ. ಮಾದರಿ ಶೌಚಾಲಯ ಕಟ್ಟಿಸಿಕೊಂಡು ಬಳಸಿ” ಎಂದು ರೋಹಿಣಿ ಸಿಂಧೂರಿಗೆ ಸಾ.ರಾ. ಮಹೇಶ್ ಸಲಹೆ ನೀಡಿದ್ದಾರೆ.

“ರೋಹಿಣಿ ಸಿಂಧೂರಿಯಂತಹ ಅಧಿಕಾರಿಗಳ‌ನ್ನು ನಾನು‌ ನೋಡಿಯೇ ಇಲ್ಲ. ಯಾವುದೋ ಆಂಧ್ರದ ಕೆಲವು ಐಎಎಸ್ ಅಧಿಕಾರಿಗಳ‌ ಕುಮ್ಮಕ್ಕಿನಿಂದ ಈ ರೀತಿ ವರ್ತನೆ ಮಾಡುತ್ತಿದ್ದಾರೆ. ಆಕೆಯ ವಿರುದ್ದ ಕ್ರಮ ಕೈಗೊಳ್ಳಬೇಕು. ಮೈಸೂರು ರಾಜಕಾರಣಿಗಳ ಕಳಂಕದ ಬಗ್ಗೆ ತನಿಖೆ ಮಾಡಬೇಕು. ಇದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಇದನ್ನು ಇಷ್ಟಕ್ಕೆ ಬಿಡುವುದಿಲ್ಲ. ವಿಧಾನಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ಮಾಡುತ್ತೇನೆ. ರಾಜಕಾರಣಿಗಳಿಗೆ ಬಂದಿರುವ ಕಳಂಕ ನಿವಾರಣೆಗೆ ವಿಧಾನಸಭೆಯಲ್ಲಿ ಹೋರಾಟ ಮಾಡುತ್ತೇನೆ” ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದ್ದಾರೆ.

ಸಿಂಧೂರಿ ವಿರುದ್ಧ 10 ಆರೋಪ:

“ಯಾವುದೇ ಅಧಿಕಾರಿಯ ಮೇಲೆ ಆರೋಪ ಬಂದರೆ ಸ್ಥಾನಪಲ್ಲಟ ಮಾಡಬೇಕು. ಇಲ್ಲವಾದರೆ ಸಾಕ್ಷ್ಯ ನಾಶ ಮಾಡುವುದು, ಬಚ್ಚಿಡುವುದು ಆಗುತ್ತದೆ. ಅವರು ಹೋದ ಮೇಲೆ‌ ಆಡಿಯೋ ಬಿಡುಗಡೆ ಆಯ್ತು. ರೋಹಿಣಿ ಸಿಂಧೂರಿ ವಿರುದ್ಧ ಮಾಡಿದ 10 ಆರೋಪಗಳನ್ನು ಒಳಗೊಂಡು ಸಿ.ಎಂ. ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದೇನೆ” ಎಂದು ತಿಳಿಸಿದರು./////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');