ಚಿಕ್ಕೋಡಿ ಕೋವಿಡ್ ಪ್ರಯೋಗಾಲಯ ತಕ್ಷಣ ಆರಂಭಿಸಲು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚನೆ

ಮಕ್ಕಳ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲು ಸೂಚನೆ:

0

ಕೋವಿಡ್-ಪ್ರವಾಹ ನಿರ್ವಹಣೆ ಸಿದ್ಧತೆಗೆ ನಿರ್ದೇಶನ

ಬೆಳಗಾವಿ, ಜೂ.9 : ಚಿಕ್ಕೋಡಿಯಲ್ಲಿ ಕೋವಿಡ್ ಪರೀಕ್ಷೆಯ ಆರ್ಟಿ-ಪಿಸಿಆರ್ ಪ್ರಯೋಗಾಲಯ ಸ್ಥಾಪನೆಗೆ ಅನುಮತಿ ಲಭಿಸಿರುವುದರಿಂದ ಸಿವಿಲ್ ಕಾಮಗಾರಿಗೆ ಕಾಲಹರಣ ಮಾಡದೇ ಲಭ್ಯವಿರುವ ಕಟ್ಟಡಗಳನ್ನು ಬಳಸಿಕೊಂಡು ಕೂಡಲೇ ಪ್ರಯೋಗಾಲಯ ಆರಂಭಿಸಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದರು.
ಕೋವಿಡ್ ಹಾಗೂ ನೆರೆಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಪ್ರವಾಸಿಮಂದಿರದಲ್ಲಿ ಬುಧವಾರ (ಜೂ.9) ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಚಿಕ್ಕೋಡಿಯಲ್ಲಿ ಸಾಕಷ್ಟು ಸರಕಾರಿ ಕಟ್ಟಡಗಳು ಲಭ್ಯವಿರುವುದರಿಂದ ಅದರಲ್ಲಿಯೇ ಪ್ರಯೋಗಾಲಯವನ್ನು ಆರಂಭಿಸಬೇಕು. ಸಣ್ಣಪುಟ್ಟ ದುರಸ್ತಿ ಅಗತ್ಯವಿದ್ದರೆ ತಕ್ಷಣವೇ ಕೈಗೊಂಡು ಕಟ್ಟಡವನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಬೇಕು ಎಂದು ತಿಳಿಸಿದರು.
ಬಿಮ್ಸ್ ಪ್ರಯೋಗಾಲಯದ ಮಾದರಿಯಲ್ಲಿ ಚಿಕ್ಕೋಡಿಯಲ್ಲಿ ಪ್ರಯೋಗಾಲಯವನ್ನು ಎರಡು ದಿನಗಳಲ್ಲಿ ಸಿದ್ಧಪಡಿಸಿಕೊಡುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬ್ಲ್ಯಕ್ ಫಂಗಸ್ ಚಿಕಿತ್ಸೆಗೆ ಅಗತ್ಯವಿರುವ ಖಾಸಗಿ ವೈದ್ಯರನ್ನು ಅಥವಾ ನಿವೃತ್ತ ವೈದ್ಯರನ್ನು ಕೂಡ ಪಾವತಿ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ವೈದ್ಯಕೀಯ ಮೂಲಸೌಕರ್ಯಗಳನ್ನು ಕಲ್ಪಿಸಲು ಹಣದ ಕೊರತೆಯಿಲ್ಲ ವಿವಿಧ ಮೂಲಗಳಿಂದ ಅನುದಾನ ಕೂಡ ಲಭ್ಯವಿದೆ. ತುರ್ತು ಚಿಕಿತ್ಸೆಗೆ ಅಗತ್ಯವಿರುವ ಉಪಕರಣಗಳ ಖರೀದಿಗೆ ಇದನ್ನು ಬಳಸಿಕೊಳ್ಳಬೇಕು ಎಂದು ಬಿಮ್ಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಕ್ಕಳ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲು ಸೂಚನೆ:

ಸಂಭವನೀಯ ಮೂರನೇ ಅಲೆಯ ವೇಳೆ ಮಕ್ಕಳಿಗೆ ಸೋಂಕು ತಗುಲಬಹುದು ಎಂಬ ವರದಿಗಳು ಇರುವುದರಿಂದ ಈ ಬಗ್ಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸಚಿವ ಗೋವಿಂದ ಕಾರಜೋಳ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಬಿಮ್ಸ್ ಸೇರಿದಂತೆ ಎಲ್ಲ ತಾಲ್ಲೂಕುಗಳಲ್ಲಿ ಕೂಡ ಸೂಕ್ತ ವೈದ್ಯಕೀಯ ವ್ಯವಸ್ಥೆ ಸಿದ್ಧಪಡಿಸಿಕೊಳ್ಳಬೇಕು ಎಂದರು.

ಪ್ರವಾಹ ನಿರ್ವಹಣೆ ಸಿದ್ಧತೆಗೆ ನಿರ್ದೇಶನ:

ಹವಾಮಾನ ವರದಿ ಪ್ರಕಾರ ಮಳೆಯಾಗುವ ಸಾಧ್ಯತೆಗಳಿವೆ. ಆದರೆ ಮಹಾರಾಷ್ಟ್ರದ ಜಲಾಶಯಗಳಲ್ಲಿ ಶೇ.30 ರಷ್ಟು ನೀರು ಸಂಗ್ರಹ ಇರುವುದರಿಂದ ಸದ್ಯಕ್ಕೆ ಪ್ರವಾಹ ಸ್ಥಿತಿ ಉದ್ಭವಿಸುವುದಿಲ್ಲ. ಆದಾಗ್ಯೂ ನೆರೆಯ ಮಹಾರಾಷ್ಟ್ರ ಸೇರಿದಂತೆ ಎಲ್ಲ ಜಲಾಶಯ ಮಟ್ಟ ಹಾಗೂ ಮಳೆಯ ಪ್ರಮಾಣದ ಮೇಲೆ ನಿಗಾ ವಹಿಸಬೇಕು ಎಂದು ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದರು.

 

ಬಿತ್ತನೆ ಬೀಜ ಹಾಗೂ ಗೊಬ್ಬರ ಸಮರ್ಪಕ ವಿತರಣೆಯಾಗಬೇಕು. ಹೆಚ್ಚಿನ ದರಕ್ಕೆ ಬೀಜ ಮಾರಾಟವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಜಾನುವಾರುಗಳಿಗೆ ನಿಗದಿತ ವೇಳೆಯಲ್ಲಿ ಲಸಿಕೆ ಹಾಕಬೇಕು. ಪ್ರವಾಹದಂತಹ ತುರ್ತು ಸಂದರ್ಭದಲ್ಲಿ ಅಗತ್ಯ ಮೇವು ದಾಸ್ತಾನು ಇರಬೇಕು. ಮೇವು ಕೊರತೆ ಇದ್ದರೆ ಖರೀದಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಪ್ಯಾಕೇಜ್ ನೆರವು ತಲುಪಿಸಲು ಸೂಚನೆ:

ಲಾಕಡೌನ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ವಿವಿಧ ವರ್ಗಗಳ ಜನರಿಗೆ ಸರಕಾರ ಒಟ್ಟಾರೆ ಎರಡು ಪ್ಯಾಕೇಜ್ ಗಳಲ್ಲಿ 1750 ಕೋಟಿ ರೂಪಾಯಿ ಪರಿಹಾರ ಧನ ಪ್ರಕಟಿಸಿದೆ. ಎಲ್ಲ ವರ್ಗಗಳ ಜನರಿಗೆ ಕೂಡಲೇ ಪರಿಹಾರಧನ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂಘಟಿತ ಕಾರ್ಮಿಕರ ಪಟ್ಟಿ ಇರುವುದರಿಂದ ಅವರಿಗೆ ನೇರವಾಗಿ ನೆರವು ತಲುಪಲಿದೆ. ಉಳಿದಂತೆ 11 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಪರಿಹಾರಧನ ವಿತರಿಸಬೇಕು ಎಂದು ಹೇಳಿದರು.
ಸಂಭವನೀಯ ಮೂರನೇ ಅಲೆಯ ನಿರ್ವಹಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಬಿಮ್ಸ್ ಹಂಗಾಮಿ ನಿರ್ದೇಶಕ ಡಾ.ಕುಲಕರ್ಣಿ ತಿಳಿಸಿದರು.

ಆಕ್ಸಿಜನ್ ಕೊರತೆ ಇಲ್ಲ-ಜಿಲ್ಲಾಧಿಕಾರಿ ಹಿರೇಮಠ:

ಜಿಲ್ಲೆಯ ಮರಣ ಪ್ರಮಾಣ ಶೇ.1.60 ರಷ್ಟಿದೆ. ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟಾರೆ 976 ಜನರು ಕೋವಿಡ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಪ್ರತಿದಿನ 16 ಕೆ.ಎಲ್. ಆಕ್ಸಿಜನ್ ಬಳಕೆಯಾಗುತ್ತಿದ್ದು, ಸಾಕಷ್ಟು ಆಕ್ಸಿಜನ್ ದಾಸ್ತಾನು ಲಭ್ಯವಿದೆ. ರೆಮಿಡಿಸಿವಿರ್ ಸೇರಿದಂತೆ ಯಾವುದೇ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸಚಿವರಿಗೆ ಮಾಹಿತಿಯನ್ನು ನೀಡಿದರು.

ಪಾಸಿಟಿವಿಟಿ ದರ ಕ್ರಮೇಣ ಕಡಿಮೆಯಾಗಿದ್ದು, ಪಾಸಿಟಿವಿಟಿ ದರ ಹೆಚ್ಚಾಗಿರುವ ಕಡೆಗಳಲ್ಲಿ ರ್ಯಾಟ್ ಪ್ರಮಾಣ ಹೆಚ್ಚಿಸಲಾಗಿದೆ.
ಜನಸಂಖ್ಯೆ ಆಧರಿಸಿ ಲಸಿಕೆ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪೂರೈಸುವಂತೆ ಕೋರಲಾಗಿದೆ.
ಜಿಲ್ಲೆಯಲ್ಲಿ ಪ್ರತಿದಿನ 30 ಸಾವಿರ ಲಸಿಕೆ ನೀಡುವಷ್ಟು ವ್ಯವಸ್ಥೆ ಜಿಲ್ಲೆಯಲ್ಲಿದೆ. ಲಸಿಕೆ ಪೂರೈಕೆ ಆದಂತೆ ಲಸಿಕಾ ಪ್ರಮಾಣ ಹೆಚ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಜಿಲ್ಲೆಯಲ್ಲಿ ಇದುವರೆಗೆ ಒಟ್ಟಾರೆ 204 ಬ್ಲ್ಯಕ್ ಫಂಗಸ್ ಪ್ರಕರಣಗಳು ವರದಿಯಾಗಿವೆ. ಬಿಮ್ಸ್ ನಲ್ಲಿ 136 ರೋಗಿಗಳು ದಾಖಲಾಗಿದ್ದರು ಎಂದು ಮಾಹಿತಿಯನ್ನು ನೀಡಿದರು.
ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ, ಸತಾರಾ ಸೇರಿದಂತೆ ನೆರೆಯ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಜಲಾಶಯ ಮಟ್ಟ ಹಾಗೂ ನೀರು ಬಿಡುಗಡೆ ಕುರಿತು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ಹೇಳಿದರು.
ಬ್ಲ್ಯಕ್ ಫಂಗಸ್ ಚಿಕಿತ್ಸೆಗೆ ವೈದ್ಯರ ನಿಯೋಜನೆಗೆ ಕ್ರಮ:

ಬ್ಲ್ಯಕ್ ಫಂಗಸ್ ಸರ್ಜರಿಗೆ ಎರಡರಿಂದ ಮೂರು ಗಂಟೆ ಬೇಕಾಗುತ್ತದೆ. ಹುಬ್ಬಳ್ಳಿ ಕಿಮ್ಸ್ ಹಾಗೂ ಗದಗ ವೈದ್ಯಕೀಯ ಕಾಲೇಜಿನಿಂದ ತಲಾ ಒಬ್ಬ ತಜ್ಞರನ್ನು ಕೂಡ ಬಿಮ್ಸ್ ಗೆ ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾದೇಶಿಕ ಆಯುಕ್ತರು ಹಾಗೂ ಬಿಮ್ಸ್ ಆಡಳಿತ ಮೇಲುಸ್ತುವಾರಿ ಅಧಿಕಾರಿಯಾಗಿರುವ ಆಮ್ಲಾನ್ ಆದಿತ್ಯ ಬಿಸ್ವಾಸ್ ಹೇಳಿದರು.
ಬಿಮ್ಸ್ ನಲ್ಲಿ ಸದ್ಯಕ್ಕೆ ಸ್ವಚ್ಛತೆ ಹಾಗೂ ಸೋಂಕಿತರಿಗೆ ಉತ್ತಮ ಪೆÇ್ರೀಟಿನ್ ಯುಕ್ತ ಆಹಾರ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ನೀರಾವರಿ ಇಲಾಖೆಯ ಉತ್ತರ ವಲಯದ ಮುಖ್ಯ ಎಂಜಿನಿಯರ್ ಅರವಿಂದ ಕಣಗಲಿ, ಕೋಯ್ನಾ ಸೇರಿದಂತೆ ವಿವಿಧ ಜಲಾಶಯ ಮಟ್ಟಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.
ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೆÇೀರ್ಸ್ ಮೂಲಕ ಮನೆ ಮನೆ ಸಮೀಕ್ಷೆ ಮಾಡಲಾಗುತ್ತಿದೆ. ಐಸೋಲೇಷನ್ ಇದ್ದವರಿಗೆ ಕಿಟ್ ಗಳನ್ನು ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಪ್ರಮಾಣ ಕಡಿಮೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ತಿಳಿಸಿದರು.

52 ಸಾವಿರ ಕ್ವಿಂಟಲ್ ಬೀಜ ದಾಸ್ತಾನು:

ಕಳೆದ ವರ್ಷ ಸಹಾಯಧನದಡಿ ಒಟ್ಟಾರೆ 48 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಇದರಲ್ಲಿ 38 ಸಾವಿರ ಕ್ವಿಂಟಲ್ ಸೋಯಾಬಿನ್ ಬೀಜ ವಿತರಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು.
ಈ ಬಾರಿ ಒಟ್ಟಾರೆ 52 ಸಾವಿರ ಕ್ವಿಂಟಲ್ ದಾಸ್ತಾನು ಇದೆ. ಇದುವರೆಗೆ 35 ಸಾವಿರ ಕ್ವಿಂಟಲ್ ಮಾರಾಟ ಮಾಡಲಾಗಿದೆ. ಸಾಕಷ್ಟು ಬಿತ್ತನೆ ಬೀಜ ದಾಸ್ತಾನು ಇದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಹಕಾಟಿ, ಸರಕಾರದ ಪ್ಯಾಕೇಜ್ ಪ್ರಕಾರ ಈಗಾಗಲೇ ಐದು ಕೋಟಿ ರೂಪಾಯಿ ಪರಿಹಾರಧನ ಫಲಾನುಭವಿಗಳಿಗೆ ತಲುಪಿದೆ ಎಂದರು.
ಪಶುಪಾಲನೆ ಇಲಾಖೆಯ ಉಪನಿರ್ದೇಶಕ ಅಶೋಕ ಕೊಳ್ಳಾ, 12.81 ಜಾನುವಾರುಗಳ ಪೈಕಿ 11.72 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ.

ಎರಡನೇ ಹಂತದಲ್ಲಿ ಆಗಸ್ಟ್ ಮಾಹೆಯಿಂದ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು. 56 ಸಾವಿರ ಡೋಸ್ ಲಸಿಕೆ ದಾಸ್ತಾನು ಇದ್ದು, ಲಸಿಕೆ ಕೊರತೆಯಿಲ್ಲ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಲಕೃಷ್ಣ ತುಕ್ಕಾರ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');